Mysuru : ಎರಡು ಪಾರಂಪಾರಿಕ ಸೇತುವೆಗಳನ್ನು ಸಂರಕ್ಷಣೆ ಮಾಡಿ
ಎರಡು ಪಾರಂಪಾರಿಕ ಸೇತುವೆಗಳನ್ನು ತಾಲೂಕು ಆಡಳಿತ ಸಂರಕ್ಷಣೆ ಮಾಡಬೇಕೆಂದು ಕರ್ನಾಟಕ ಅರಸು ಮತ್ತು ರಾಜು ಕ್ಷತ್ರಿಯ ಪ್ರತಿಷ್ಠಾನದ ಅಧ್ಯಕ್ಷ ದಿನೇಶ್ ಅರಸು ಮನವಿ ಮಾಡಿದ್ದಾರೆ.
ಟಿ. ನರಸೀಪುರ (ಅ.16): ಮೈಸೂರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಟಿ. ನರಸೀಪುರದ ಕಾವೇರಿ ಮತ್ತು ಕಬಿನಿ ನದಿಗಳಿಗೆ ನಿರ್ಮಿಸಿರುವ ಸೇತುವೆಗಳಿಗೆ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ರಾಜಮಾತೆ ವಾಣಿವಿಲಾಸ ಸನ್ನಿಧಾನ ಕೆಂಪನಂಜಮ್ಮಣ್ಣಿ ಅವರ ನಾಮಫಲಕ ಅಳವಡಿಸಿ, ಈ ಎರಡು ಪಾರಂಪಾರಿಕ ಸೇತುವೆಗಳನ್ನು ತಾಲೂಕು ಆಡಳಿತ ಸಂರಕ್ಷಣೆ ಮಾಡಬೇಕೆಂದು ಕರ್ನಾಟಕ ಅರಸು ಮತ್ತು ರಾಜು ಕ್ಷತ್ರಿಯ ಪ್ರತಿಷ್ಠಾನದ ಅಧ್ಯಕ್ಷ ದಿನೇಶ್ ಅರಸು ಮನವಿ ಮಾಡಿದ್ದಾರೆ.
ತಿರುಮ ಕೂಡಲು ನರಸೀಪುರವು ತನ್ನದೇ ಆದ ಪರಂಪರೆ ಹೊಂದಿದ್ದು, ಪಾರಂಪರಿಕವಾಗಿ ಹಾಗೂ ಐತಿಹಾಸಿಕವಾಗಿ (Historical) ಪುರಾಣ ಪ್ರಸಿದ್ಧಿಯಾಗಿದೆ. ಟಿ. ನರಸೀಪುರ (T Narasipura) ಸುಮಾರು 500ಕ್ಕೂ ಹೆಚ್ಚು ವರ್ಷಗಳ ಕಾಲ ಮೈಸೂರು ಮಹಾರಾಜರ ಆಡಳಿತಕ್ಕೆ ಸೇರಿದ್ದು, ಅವರ ಕಾಲದಲ್ಲಿ ಮೂಲಭೂತ ಸೌಕರ್ಯಗಳನ್ನು ಪಡೆದು ಪಟ್ಟಣವಾಗಿ ರೂಪಗೊಂಡಿದೆ ಅವರು ತಿಳಿಸಿದರು.
ನರಸೀಪುರಕ್ಕೆ ಬರಬೇಕಾದರೆ ದೊಡ್ಡ ನದಿಗಳಾದ (River) ಕಾವೇರಿ (Cauvery) ಮತ್ತು ಕಬಿನಿ (Kabini) ನದಿಗಳನ್ನು ದಾಟಿ ಬರಬೇಕಿತ್ತು ಅಂದು ಸೇತುವೆ ವ್ಯವಸ್ಥೆ ಇರಲಿಲ್ಲ ದೋಣಿ ಗಳಲ್ಲಿ ಬರಬೇಕಿತ್ತು, ಇದನ್ನು ಅರಿತ ರಾಜರ್ಷಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಎರಡು ನದಿಗಳಿಗೂ ಸುಮಾರು 90 ವರ್ಷಗಳ ಹಿಂದೆಯೇ ಬಲಿಷ್ಠವಾದ, ಅಚ್ಚುಕಟ್ಟಾದ ಸೇತುವೆಯನ್ನು ನಿರ್ಮಿಸಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಕಬಿನಿ ನದಿಗೆ ಅಡ್ಡಲಾಗಿ ರಾಜಮಾತೆ ವಾಣಿವಿಲಾಸ ಸನ್ನಿಧಾನ ಕೆಂಪನಂಜಮ್ಮಣ್ಣಿ ಯವರ ಸ್ಮರಣಾರ್ಥವಾಗಿ ಅವರ ಹೆಸರಿನಲ್ಲಿ ವಾಣಿವಿಲಾಸ ಸೇತುವೆ 1932ರಲ್ಲಿ ದೊಡ್ಡದಾದ ಸೇತುವೆಯನ್ನು ಹಾಗೂ ಕಾವೇರಿ ನದಿಗೆ ಅಡ್ಡಲಾಗಿ 1935 ರಲ್ಲಿ ಶ್ರೀಮನ್ ಮಹಾರಾಜರ ಹೆಸರಿನಲ್ಲಿ ಕೃಷ್ಣರಾಜೇಂದ್ರ ಸೇತುವೆಯನ್ನು ಬಲಿಷ್ಠವಾಗಿ ಇಂಗ್ಲೆಡ್ ಸೇತುವೆಗಳ ಮಾದರಿಯಲ್ಲಿ ನಿರ್ಮಿಸಿದೆ.
ಅಂದಿನ ಕಾಲದಲ್ಲಿ ಭಾರತದಲ್ಲಿ ನಿರ್ಮಾಣವಾದ ಅತಿ ದೊಡ್ಡ ಸೇತುವೆಗಳು ಎಂಬ ಹೆಗ್ಗಳಿಕೆಗೆ ಈ ಸೇತುವೆಗಳು ಪಾತ್ರವಾಗಿದ್ದವು. ಮೈಸೂರು ಪ್ರಾಂತ್ಯ ಹಾಗೂ ಮದ್ರಾಸ್ ಪ್ರಾಂತ್ಯಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಈ ಭಾಗದ ಜನತೆಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಮೈಸೂರು ಮಹಾರಾಜರು ಈ ಸೇತುವೆಗಳನ್ನು ನಿರ್ಮಿಸಿದ್ದರು. ಸೇತುವೆಯ ನಿರ್ಮಾಣದ ನಂತರ ಇಲ್ಲಿನ ವ್ಯಾಪಾರ ,ವಹಿವಾಟು, ಆರ್ಥಿಕ ಅಭಿವೃದ್ಧಿಗೆ ಬಹಳಷ್ಟುಉಪ ಯೋಗವಾಯಿತು ಮತ್ತು ಅಭಿವೃದ್ಧಿ ಹೊಂದಿತು.
ಸೇತುವೆಗಳು ನಿರ್ಮಾಣ ವಾದ ನಂತರ ನರಸೀಪುರ ಧಾರ್ಮಿಕ ಮತ್ತು ಆರ್ಥಿಕ ವಹಿವಾಟಿನಲ್ಲಿ ಬಹಳಷ್ಟುಅಭಿವೃದ್ಧಿ ಹೊಂದಿತ್ತು. ಧಾರ್ಮಿಕವಾಗಿ ಕುಂಭ ಮೇಳಕ್ಕೆ, ತಲಕಾಡು ಪಂಚ ಲಿಂಗ ದರ್ಶನ, ಮೂಗೂರು ತಿಬ್ಬಾ ದೇವಿ ,ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಬರುವ ಭಕ್ತರಿಗೆ ಈ ಸೇತುವೆ ಬಹಳಷ್ಟುಸಹಕಾರಿಯಾಗಿದೆ, ಈ ಎರಡು ಸೇತುವೆಗಳು ನಿರ್ಮಾಣವಾಗಿ ಸುಮಾರು 90 ವರ್ಷಗಳು ಕಳೆದಿದ್ದು, ಈಗಲೂ ಸಹ ಸಾರ್ವಜನಿಕರು ಉಪಯೋಗಿಸುತ್ತಿದ್ದಾರೆ ಇಂತಹ ಐತಿಹಾಸಿಕ ಕೊಡುಗೆಯನ್ನು ನೀಡಿದ ಮೈಸೂರು ಮಹಾರಾಜರಿಗೆ ಟಿ. ನರಸೀಪುರದ ಜನತೆಯಿಂದ ಗೌರವ ಸಲ್ಲಿಸುವ ಸಲುವಾಗಿ ಕೃತಜ್ಞತಾ ಪೂರ್ವಕವಾಗಿ ಅವರ ನಾಮಫಲಕವನ್ನು ಸೇತುವೆಯ ಎರಡು ಕಡೆಯಲ್ಲೂ ದೊಡ್ಡದಾಗಿ ಅಳವಡಿಸಲು ತಾವು ಮನಸ್ಸು ಮಾಡಬೇಕು ಹಾಗೂ ಸ್ವತಂತ್ರ್ಯ ಪೂರ್ವದಲ್ಲಿ ನಿರ್ಮಾಣ ವಾದ ಪಾರಂಪರಿಕ ಸೇತುವೆಗಳನ್ನು ಸಂರಕ್ಷಣೆಯನ್ನು ತಾಲೂಕು ಆಡಳಿತ ಮತ್ತು ಚುನಾಯಿತ ಪ್ರತಿನಿಧಿಗಳು ಮಾಡಬೇಕೆಂದು ಮನವಿ ಮಾಡಿದರು.
ಎರಡು ಪಾರಂಪಾರಿಕ ಸೇತುವೆಗಳನ್ನು ಸಂರಕ್ಷಣೆ ಮಾಡಿ
- ತಾಲೂಕು ಆಡಳಿತಕ್ಕೆ ರಾಜು ಕ್ಷತ್ರಿಯ ಪ್ರತಿಷ್ಠಾನದ ಅಧ್ಯಕ್ಷ ದಿನೇಶ್ ಅರಸು ಸಲಹೆ