ಜಮೀನು ಮಾರಾಟ ಮಾಡದೆ ಮಕ್ಕಳ ಭವಿಷ್ಯಕ್ಕೆ ಉಳಿಸಿಕೊಳ್ಳಿ: ಶಾಸಕ ಜಿ.ಟಿ.ದೇವೇಗೌಡ
ರೈತರು ಅದ್ಧೂರಿ ಮದುವೆ ಮಾಡಿ ಸಾಲ ಮಾಡಿಕೊಂಡು ಇರುವ ಜಮೀನು ಮಾರಾಟ ಮಾಡದೆ ಮಕ್ಕಳಿಗೆ ಉಳಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ಮೈಸೂರು (ಅ.26): ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರು ಹೈನುಗಾರಿಕೆ ನಂಬಿ ಹಾಲು ಉತ್ಪಾದನೆ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ರೈತರ ಬದುಕು ಹಸನಾಗಿದೆ. ರೈತರು ಅದ್ಧೂರಿ ಮದುವೆ ಮಾಡಿ ಸಾಲ ಮಾಡಿಕೊಂಡು ಇರುವ ಜಮೀನು ಮಾರಾಟ ಮಾಡದೆ ಮಕ್ಕಳಿಗೆ ಉಳಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದಲ್ಲಿ ನೂತನ ಬಿಎಂಸಿ ಕೇಂದ್ರ ಮತ್ತು ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಗುಣಮಟ್ಟದ ಹಾಲನ್ನು ಉತ್ಪಾದಿಸಿ ಡೇರಿಗಳಿಗೆ ಕೊಡಬೇಕು. ಹಾಲನ್ನು ಕೆಲಬೆರಕೆ ಮಾಡದೆ ಗುಣಮಟ್ಟದಿಂದ ಸಂಘಗಳಿಗೆ ನೀಡಿದರೆ ಜನರ ಆರೋಗ್ಯಕ್ಕೆ ಅನುಕೂಲ ಮತ್ತು ಮೈಮುಲ್ ಮೇಲಿನ ನಂಬಿಕೆ ಉಳಿಯಲಿದೆ ಎಂದರು. ವ್ಯವಸಾಯ ನಂಬಿ ಬದುಕುತ್ತಿದ್ದ ರೈತರ ಪರಿಸ್ಥಿತಿ ಹೇಳ ತೀರದ್ದಾಗಿದೆ. ಮಳೆ ನಂಬಿ ಸಾಲ ಸೋಲ ಮಾಡಿ ಬಿತ್ತನೆ ಮಾಡುವ ಹೊತ್ತಿಗೆ ವರುಣ ಕೈಕೊಡುತ್ತಾನೆ.
ಯುವಶಕ್ತಿಯೇ ಕಾಂಗ್ರೆಸ್ ಪಕ್ಷದ ಆಸ್ತಿ: ಮಾಜಿ ಸಂಸದ ಡಿ.ಕೆ.ಸುರೇಶ್
ಮಳೆ ಬಂದು ಬಿತ್ತನೆ ಮಾಡಿ ಫಸಲು ಕೈಗೆ ಬಂದರೂ ಸರಿಯಾದ ಬೆಲೆ ಸಿಗದೆ ನಷ್ಟಕ್ಕೆ ಕಾರಣವಾಗುತ್ತಿದೆ. ಆದರೆ, ಹೈನುಗಾರಿಕೆಯಲ್ಲಿ ನಷ್ಟವೇ ಇಲ್ಲ. ಇದರಿಂದಾಗಿ ಆತನ ಕುಟುಂಬ ನಿರ್ವಹಣೆ ಮಾಡಲು ದಾರಿಯಾಗಿದೆ ಎಂದು ಅವರು ಹೇಳಿದರು. ಮೈಮುಲ್ ನಿಂದ ಹಾಲು ಉತ್ಪಾದಕರಿಗೆ ಬೇಕಾದ ಬೀಜ, ಮೇವು ಮೊದಲಾದ ಸೌಲಭ್ಯಗಳನ್ನು ಒದಗಿಸಬೇಕು. ಹಾಲು ಉತ್ಪಾದಕರಿಗೆ ನೆರವು ನೀಡಿದಷ್ಟು ಗುಣಮಟ್ಟದ ಹಾಲು ಸಂಗ್ರಹಕ್ಕೆ ಕಾರಣವಾಗಲಿದೆ ಎಂದರು.
ರಾಜಕೀಯ ಹಸ್ತಕ್ಷೇಪ ಸಲ್ಲದು: ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. 1969 ರಿಂದಲೂ ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಮಾಡಿಲ್ಲ. ಮಾಡೋದು ಇಲ್ಲ. ಇಂದು ಸಹಕಾರ ಕ್ಷೇತ್ರಗಳಲ್ಲಿ ವಿಪರೀತ ರಾಜಕೀಯ ನಡೆಯುತ್ತಿದೆ. ಸಹಕಾರ ಸಂಘಗಳನ್ನು ರಚನೆ ಮಾಡಲು ಅನುಮತಿ ನೀಡಲಾಗುತ್ತಿದೆ. ಆದರೆ, ಹೊಸ ಸೊಸೈಟಿಗಳಿಗೆ ರೈತರಿಗೆ ಸಾಲ ಕೊಡಲು ಹಣವೇ ಇಲ್ಲ. ಈಗಿರುವ ಸಂಘಗಳಿಂದ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ. ವರೆಗಿನ ಸಾಲವನ್ನು ಎಲ್ಲಾ ರೈತರಿಗೂ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದು ತಿಳಿಸಿದರು.
ಜಾನುವಾರುಗಳನ್ನು ಸಾಕುವವರು ವಿಮೆ ಮಾಡಿಸಬೇಕು. ಸತ್ತ ಮೇಲೆ ಪರಿಹಾರ ಕೊಡಿಸಿ ಅಂತ ಬರುತ್ತಾರೆ. ಆದರೆ, ಮೈಮುಲ್ ನಿಂದಲೇ ವಿಮೆ ಮಾಡಿಸಲಾಗುತ್ತಿದೆ. ರೈತರು ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಅದೇ ರೀತಿ ಖಾಸಗಿ ಆಸ್ಪತ್ರೆಗೆ ಸೇರಿ ಐದಾರು ಲಕ್ಷ ಬಿಲ್ ಆಗಿರುವ ಬಗ್ಗೆ ಹೇಳುತ್ತಾರೆ. ಯಶಸ್ವಿನಿ ವಿಮಾ ಯೋಜನೆಯಡಿ ನೋಂದಣಿ ಮಾಡಿಸಿಕೊಂಡರೆ ಹಣ ಉಳಿತಾಯವಾಗಲಿದೆ. ಮೈಮುಲ್ ನವರು ರಾಸುಗಳಿಗೆ ವಿಮೆ, ಯಶಸ್ವಿನಿ ಯೋಜನೆ ನೋಂದಣಿ ಮಾಡಿಸುವ ಕೆಲಸ ಮಾಡಿಸಬೇಕು ಎಂದು ಸಲಹೆ ನೀಡಿದರು.
ಸಂಕ್ರಾಂತಿ ದಿನ ಹೊಸ ಬ್ರಿಗೇಡ್ ಸ್ಥಾಪನೆ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
ಮಾರ್ಬಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಾಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಮೈಮುಲ್ ಅಧ್ಯಕ್ಷ ಆರ್. ಚೆಲುವರಾಜು, ನಿರ್ದೇಶಕರಾದ ಕೆ. ಉಮಾಶಂಕರ್, ಲೀಲಾ ನಾಗರಾಜ್, ಬಿ. ಗುರುಸ್ವಾಮಿ, ಕೆ.ಜಿ. ಮಹೇಶ್, ಸಿ. ಓಂಪ್ರಕಾಶ್, ಬಿ. ನೀಲಾಂಬಿಕೆ ಮಹೇಶ್, ಬಿ.ಎನ್. ಸದಾನಂದ, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಸುರೇಶ್ ನಾಯ್ಕ, ವ್ಯವಸ್ಥಾಪಕ ಎಸ್.ಆರ್. ಕರಿಬಸವರಾಜು, ಉಪ ವ್ಯವಸ್ಥಾಪಕ ಬಿ.ಎನ್. ಸಂತೋಷ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಹಿರಿಯ ನಿರ್ದೇಶಕ ವಿಜಯಕುಮಾರ್ ನಾಗನಾಳ, ಸಂಘದ ಮುಖ್ಯ ಕಾರ್ಯ ನಿರ್ವಾಹಕ ಚಿಕ್ಕಕುಮಾರ್ ಮೊದಲಾದವರು ಇದ್ದರು.