ಸವದತ್ತಿ ಯಲ್ಲಮ್ಮ ದೇವಿಯ ಕುರಿತು ವಾಟ್ಸ್ಆ್ಯಪ್ನಲ್ಲಿ ಹರಿದಾಡಿದ ಸುಳ್ಳು ಸುದ್ದಿಯನ್ನು ನಂಬಿ ಸಾವಿರಾರು ಮಹಿಳೆಯರು ಭೀಮಾ ನದಿಯಲ್ಲಿ ಸ್ನಾನ ಮಾಡಿ ಪಾದುಕೆ ವಿಸರ್ಜಿಸಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯು ಈ ಸರ್ಪದೋಷದ ಸುದ್ದಿಯನ್ನು ಸಂಪೂರ್ಣ ಆಧಾರರಹಿತ ಎಂದು ಸ್ಪಷ್ಟಪಡಿಸಿದ್ದು, ನದಿ ಮಲಿನಗೊಳಿಸಿದರೆ ಪ್ರಕರಣ ದಾಖಲಿಸುವುದಾಗಿ ನಗರಸಭೆ ಎಚ್ಚರಿಸಿದೆ.
ವದಂತಿ ತಳ್ಳಿ ಹಾಕಿದ ಸವದತ್ತಿ ದೇಗುಲ ಆಡಳಿತ
ಯಾದಗಿರಿ/ಬೆಳಗಾವಿ: ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮ ದೇವಿಯ ಮೈಮೇಲೆ ಹಾವು ಸುತ್ತಿಕೊಂಡಿದೆ, ದೇವಿಯ ಪಾದುಕೆಯನ್ನು ಹಾವು ನುಂಗಿದೆ, ಈ ಸರ್ಪ ದೋಷ ನಿವಾರಣೆಗಾಗಿ ನದಿಯಲ್ಲಿ ಸ್ನಾನ ಮಾಡಿ, ಹಳೆಯ ಪಾದುಕೆ ಬಿಚ್ಚಿ ಹೊಸ ಪಾದುಕೆ ಕಟ್ಟಿಕೊಳ್ಳಬೇಕು. ಹಳೆಯ ಬಟ್ಟೆ ಬಿಟ್ಟು ಹೊಸ ಬಟ್ಟೆ ಧರಿಸಬೇಕು ಎಂಬ ಸುದ್ದಿಯೊಂದು ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿದ್ದು, ಇದನ್ನು ನಂಬಿ ಮಂಗಳವಾರ ಒಂದೇ ದಿನ 3 ಸಾವಿರಕ್ಕೂ ಅಧಿಕ ಮಹಿಳೆಯರು (ಪಾದುಕೆ ಕಟ್ಟಿಕೊಂಡ ಯಲ್ಲಮ್ಮನ ಆರಾಧಕರು) ಯಾದಗಿರಿ ಹೊರವಲಯದ ಭೀಮಾ ನದಿಯಲ್ಲಿ ಪೂಜೆಗೈದು, ಪುಣ್ಯಸ್ನಾನ ಮಾಡಿದರು.
-ವದಂತಿ ತಳ್ಳಿ ಹಾಕಿದ ಸವದತ್ತಿ ದೇಗುಲ ಆಡಳಿತ
ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿ, ದೇವಿಯ ಸರ್ಪದೋಷದ ಹೆಸರಿನಲ್ಲಿ ಹರಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಹಾಗೂ ಆಧಾರರಹಿತ ಎಂದಿದೆ. ಆದರೂ ಮಹಿಳೆಯರ ಪೂಜೆ ನಿಲ್ಲಿಸದ ಮಹಿಳೆಯರು ನದಿಯನ್ನು ಮಲಿನಗೊಳಿಸುತ್ತಿದ್ದಾರೆ.
ದೇವಸ್ಥಾನದಲ್ಲಿ ಇಂತಹ ಯಾವುದೇ ವಿದ್ಯಮಾನ ನಡೆಯುತ್ತಿಲ್ಲ. ಭಕ್ತರು ಇಂತಹ ಸುದ್ದಿಗಳಿಗೆ ಕಿವಿಗೊಡದೆ ಎಂದಿನಂತೆ ಭಕ್ತಿ, ಶ್ರದ್ಧೆಯಿಂದ ದೇವಸ್ಥಾನಕ್ಕೆ ಆಗಮಿಸಿ ಯಲ್ಲಮ್ಮ ದೇವಿಯ ದರ್ಶನ ಪಡೆಯಬೇಕು ಎಂದು ತಿಳಿಸಿದೆ.
ವಾಟ್ಸ್ಆ್ಯಪ್ ಸುದ್ದಿ ನಂಬಿ ಸಾವಿರಾರು ಮಂದಿ ಪೂಜೆ
ದೇವಸ್ಥಾನದ ಆಡಳಿತ ಮಂಡಳಿಯ ಈ ಸ್ಪಷ್ಟನೆ ಹೊರತಾಗಿಯೂ ಮಹಿಳೆಯರು ತಂಡೋಪತಂಡವಾಗಿ ಆಗಮಿಸಿ, ನದಿಯಲ್ಲಿ ಪುಣ್ಯಸ್ನಾನ ಮಾಡಿ, ಪೂಜೆ ಸಲ್ಲಿಸಿ, ಕೊರಳಲ್ಲಿದ್ದ ಹಳೆಯ ಪಾದುಕೆಗಳನ್ನು ನದಿಗೆ ವಿಸರ್ಜಿಸಿ, ಹೊಸ ಪಾದುಕೆಗಳನ್ನು ಧರಿಸುವ ಆಚರಣೆ ಮುಂದುವರಿಸಿದರು. ಭಕ್ತರು ಬಿಸಾಕಿ ಹೋದ ಬಟ್ಟೆ, ಪೂಜಾ ವಸ್ತುಗಳಿಂದ ಭೀಮಾ ನದಿಯ ಒಡಲು ಮಲಿನಗೊಂಡಿತು. ಈ ಹಿನ್ನೆಲೆಯಲ್ಲಿ ಬುಧವಾರ ಇಡೀ ದಿನ ಭೀಮಾನದಿಯ ಸ್ವಚ್ಛತೆಗೆ ಯಾದಗಿರಿಯ ನಗರಸಭೆ ಹರಸಾಹಸ ಪಟ್ಟಿದ್ದು, ತ್ಯಾಜ್ಯ ಎಸೆದರೆ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದೆ.












