ಚಿಂತಾಮಣಿಯ ಕೈವಾರದಲ್ಲಿ ನೂತನ ಶಾದಿ ಮಹಲ್ ಉದ್ಘಾಟಿಸಿದ ಶಾಸಕ ಡಾ.ಎಂ.ಸಿ. ಸುಧಾಕರ್, ಮುರುಗಮಲ್ಲ ದರ್ಗಾ ಅಭಿವೃದ್ಧಿಗೆ 32 ಕೋಟಿ ರೂ. ಮಂಜೂರು ಮಾಡಿದ್ದಾರೆ. ಅಲ್ಲದೆ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 1 ಎಕರೆ ಜಾಗವನ್ನು ಕೂಡ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.

ಚಿಂತಾಮಣಿ: ಕ್ಷೇತ್ರಕ್ಕೆ ಭರಪೂರ ಕೊಡುಗೆ ಮುರುಗಮಲ್ಲ ದರ್ಗಾಕ್ಕೆ 32 ಕೋಟಿ, ಅಲ್ಪಸಂಖ್ಯಾತರಿಗೆ 1 ಎಕರೆ ಜಾಗ ಮಂಜೂರು ಮಾಡಿರುವುದಾಗಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸಾಕಷ್ಟು ರೂಪುರೇಷೆಗಳನ್ನು ನಿರ್ಮಿಸಿರುವುದಾಗಿ ಶಾಸಕ ಡಾ.ಎಂ.ಸಿ. ಸುಧಾಕರ್ ನುಡಿದರು.

ಮುರುಗಮಲ್ಲ ದರ್ಗಾಕ್ಕೆ ಬಂಪರ್ ಗಿಫ್ಟ್

ತಾಲೂಕಿನ ಕೈವಾರ ಪಟ್ಟಣ ಪಂಚಾಯತಿಯಲ್ಲಿ ನೂತನವಾಗಿ 40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಶಾದಿ ಮಹಲ್ ಉದ್ಘಾಟನೆಗೊಳಿಸಿ ಮಾತನಾಡಿ, ದರ್ಗಾ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ದೀರ್ಘಕಾಲದ ಕನಸು ಈಗ ಸಾಕಾರಗೊಳ್ಳುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

2004ರ ಕನಸು, ಐತಿಹಾಸಿಕ ಸ್ಥಳಕ್ಕೆ ಹೊಸ ರೂಪ

2004 ರಲ್ಲಿ ತಾವು ಮೊದಲ ಬಾರಿಗೆ ಶಾಸಕರಾದಾಗ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ಈ ಐತಿಹಾಸಿಕ ಸ್ಥಳಕ್ಕೆ ಹೊಸ ರೂಪ ನೀಡಬೇಕೆಂಬ ಆಸೆ ಹೊಂದಿದ್ದರು. ಆದರೆ, ಅಂದು ವಿರೋಧ ಪಕ್ಷದಲ್ಲಿದ್ದ ಕಾರಣ ಮತ್ತು ಸೂಕ್ತ ಸಹಕಾರ ಸಿಗದ ಕಾರಣ ಆ ಕನಸು ನನೆಗುದಿಗೆ ಬಿದ್ದಿತ್ತು. ಚಿಂತಾಮಣಿಯ ಪ್ರಸಿದ್ಧ ಮುರುಗಮಲ್ಲ ದರ್ಗಾದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 32 ಕೋಟಿ ರೂಪಾಯಿಗಳ ಬೃಹತ್ ಯೋಜನೆಯನ್ನು ಮಂಜೂರು ಮಾಡಲಾಗಿದೆ ಎಂದು ನುಡಿದರು.

32 ಕೋಟಿ ರೂಪಾಯಿಗಳ ಯೋಜನೆಗೆ ಒಪ್ಪಿಗೆ

ಹಿಂದೆ ಸಚಿವರಾಗಿದ್ದ ಜಮೀರ್ ಅಹಮದ್ ಖಾನ್ ಹಾಗೂ ನಜೀರ್ ಅಹಮದ್‌ರ ಸಹಕಾರದೊಂದಿಗೆ ಒಟ್ಟು 68 ಕೋಟಿ ರುಪಾಯಿಗಳ ವೆಚ್ಚದಲ್ಲಿ ಮುರುಗಮಲ್ಲ ದರ್ಗಾದ ಅಭಿವೃದ್ಧಿಗೆ ಅತ್ಯಾಧುನಿಕ ವಿನ್ಯಾಸದೊಂದಿಗೆ ವಿಸ್ತೃತ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಆರಂಭದಲ್ಲಿ ಹಂತ ಹಂತವಾಗಿ ಕೆಲಸ ಕೈಗೊಳ್ಳುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಚಿವ ಸಂಪುಟದ ಸಭೆಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಎಲ್ಲಾ ಸಹೋದ್ಯೋಗಿಗಳ ಸಹಕಾರದಿಂದ ಮೊದಲ ಹಂತದಲ್ಲಿ 32 ಕೋಟಿ ರೂಪಾಯಿಗಳ ಯೋಜನೆಗೆ ಒಪ್ಪಿಗೆ ಸಿಕ್ಕಿ, ಅನುದಾನ ಮಂಜೂರಾಗಿದೆ ಎಂದರು.

ಎಲ್ಲಾ ಜಾತಿ, ಧರ್ಮದವರಿಗೆ ಅವರವರ ಜನಸಂಖ್ಯೆಗೆ ಅನುಗುಣವಾಗಿ ಶೈಕ್ಷಣಿಕ ಅಧ್ಯಯನ ಕೇಂದ್ರಗಳ ನಿರ್ಮಾಣಕ್ಕಾಗಿ ಸರ್ಕಾರದ ಹೆಸರಿನಲ್ಲಿ ಜಾಗವನ್ನು ಕಾಯ್ದಿರಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ. ನಲ್ಲಗುಟ್ಟಹಳ್ಳಿ ಬಳಿ ವಿವಿಧ ಸಮುದಾಯದವರಾದ ಒಕ್ಕಲಿಗರು, ಬ್ರಾಹ್ಮಣರು, ಬಲಜಿಗರು, ಕುರುಬರು, ಕುಂಬಾರರು ಜಾಗವನ್ನು ಒದಗಿಸಿದ್ದು, ಅದರೊಂದಿಗೆ ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯಕ್ಕೆ 1 ಎಕರೆ ಜಾಗವನ್ನು ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಹಿಂದೂ ಸಮುದಾಯದ ಹಿರಿಯರು ಮುಖಂಡರು, ಮುಸ್ಲಿಂ ಮುಖಂಡರು ಇದ್ದರು.