ಒಳ ಮೀಸಲಾತಿ ವಿಚಾರದಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳು ಹಿಂದಿನಿಂದಲೂ ನಡೆಯುತ್ತಿವೆ. ಯಾವುದೋ ಕಾರಣವೊಂದನ್ನು ಮುಂದಿಟ್ಟು ಸಮಾಜದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುವುದು ನಡೆಯುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ (ಏ.15): ಒಳ ಮೀಸಲಾತಿ ವಿಚಾರದಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳು ಹಿಂದಿನಿಂದಲೂ ನಡೆಯುತ್ತಿವೆ. ಯಾವುದೋ ಕಾರಣವೊಂದನ್ನು ಮುಂದಿಟ್ಟು ಸಮಾಜದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುವುದು ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಜೀರ್ ಉಚ್ಚಾಟನೆ ಕುರಿತು ಪ್ರತಿಕ್ರಿಯೆ ನೀಡಿ, ಯಾವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇದರ ಬಗ್ಗೆ ವರಿಷ್ಠರು ಸ್ಪಷ್ಟನೆ ನೀಡಬೇಕು. ಯಾರ ಮೇಲಾದರೂ ಕ್ರಮ ಕೈಗೊಳ್ಳುವುದು ವರಿಷ್ಠರ ವಿಚಾರವಾಗಿದ್ದು, ಸರ್ಕಾರವು ಸಾರ್ವಜನಿಕರಿಗೆ ಕಾರಣವನ್ನು ತಿಳಿಸಬೇಕು ಎಂದು ಹೇಳಿದರು.

ಜಬ್ಬಾರ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ, ಆ ಸ್ಥಾನಕ್ಕೆ ಮುಸ್ಲಿಂ ಸಮುದಾಯದವರನ್ನೇ ನೇಮಕ ಮಾಡಬೇಕು. ಬೇರೆ ಯಾರಿಗೂ ಅವಕಾಶ ನೀಡಬಾರದು. ಬೆಳಗಾವಿ ಜಿಲ್ಲೆಗೆ ಈಗಾಗಲೇ ಎರಡು ಸಚಿವ ಸ್ಥಾನಗಳನ್ನು ನೀಡಲಾಗಿದೆ. ಇನ್ನಷ್ಟು ಸ್ಥಾನಗಳ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು, ಮೂರು ಬಾರಿ ಆಯ್ಕೆಯಾದವರು ದೆಹಲಿಗೆ ತೆರಳಿದ್ದಾರೆ. ಅಂತಿಮ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಲಿದೆ ಎಂದರು.

ಅಗತ್ಯ ಸೌಲಭ್ಯ ಒದಗಿಸಲು ಸರ್ಕಾರ ಬದ್ಧ

ಸಂಕೇಶ್ವರ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಜನಸಾಮಾನ್ಯರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಪ್ರವಾಸಿ ಮಂದಿರದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷ ನಡೆಯಲಿರುವ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಭಕ್ತಾದಿಗಳ ಅನುಕೂಲಕ್ಕಾಗಿ ಪಟ್ಟಣದ ರಸ್ತೆಗಳ ದುರಸ್ತಿ ಹಾಗೂ ಅಗತ್ಯ ಮೂಲಸೌಕರ್ಯಗಳ ಕುರಿತು ಸ್ವತಃ ಪರಿಶೀಲನೆ ನಡೆಸುವುದಾಗಿ ಹೇಳಿದರು.

ಅಲ್ಲದೇ, ಸಂಕೇಶ್ವರ-ಗೋಕಾಕ ರಸ್ತೆ ಸುಸ್ಥಿತಿಯಲ್ಲಿದ್ದರೂ ಕೆಶಿಪ್ ಯೋಜನೆಯಡಿ ಅನಗತ್ಯವಾಗಿ ಮರು ಡಾಂಬರೀಕರಣ ಮಾಡಿ ಸರ್ಕಾರದ ಹಣ ಪೋಲು ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಕುರಿತು ಪ್ರತಿಕ್ರಿಯಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ತಕ್ಷಣ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರೇ ತಮ್ಮ ಕ್ಷೇತ್ರಗಳಲ್ಲಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದರು.