ಹೆಬ್ಬೆ ಭವಾನಿ ಶಂಕರ ದೇವಸ್ಥಾನದ ಹತ್ತಿರದ ನದಿಗೆ ಸೇತುವೆ ನೀರ್ಮಾಣ ಸೇರಿದಂತೆ ಶೃಂಗೇರಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚುವರಿ ₹50 ಕೋಟಿ ನೀಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ನರಸಿಂಹರಾಜಪುರ (ಏ.14): ಹೆಬ್ಬೆ ಭವಾನಿ ಶಂಕರ ದೇವಸ್ಥಾನದ ಹತ್ತಿರದ ನದಿಗೆ ಸೇತುವೆ ನೀರ್ಮಾಣ ಸೇರಿದಂತೆ ಶೃಂಗೇರಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚುವರಿ ₹50 ಕೋಟಿ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು. ಹೊಸ ಬಜೆಟ್‍ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಮೀಸಲಿಟ್ಟಿರುವ ₹2 ಸಾವಿರ ಕೋಟಿ ಅನುದಾನದಲ್ಲಿ ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚುವರಿಯಾಗಿ ₹50 ಕೋಟಿ ಒದಗಿಸುವುದಾಗಿ ಘೋಷಿಸಿದರು.
ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ನಮ್ಮ ಸರ್ಕಾರ ಜೀವ ತುಂಬುತ್ತಿದೆ ಎಂದು ಹೇಳಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ. ಜಿಲ್ಲೆಯಲ್ಲಿ ಒಟ್ಟು 41 ಸೇತುವೆ ಮಂಜೂ ರಾಗಿದ್ದು, ಈ ಗಾಗಲೇ 31 ಸೇತುವೆ ಲೋಕಾರ್ಪಣೆಗೊಂಡಿವೆ. ಬಾಕಿ ಉಳಿದಿರುವ 10 ಸೇತುವೆ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗೆ ಸರ್ಕಾರ ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಿದೆ.
ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ₹6.10 ಕೋಟಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಸುಧಾರಣೆಗಾಗಿ ₹16 ಕೋಟಿ ಮೀಸಲಿಡಲಾಗಿದೆ. ಇದರ ಜೊತೆಗೆ, ರಾಜ್ಯ ಹೆದ್ದಾರಿಯಲ್ಲಿ ಎರಡು ಸೇತುವೆಗಳ ನಿರ್ಮಾಣಕ್ಕೆ ₹7.5 ಕೋಟಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಮೂರು ಸೇತುವೆಗಳಿಗೆ ₹10.40 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ, ಕ್ಷೇತ್ರದ ವಿವಿಧ ಭಾಗಗಳಲ್ಲಿ ₹2.80 ಕೋಟಿ ವೆಚ್ಚದಲ್ಲಿ ಕಿರು ಸೇತುವೆಗಳ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಗಿದೆ ಎಂದುವಿವರಿಸಿದರು.
ಮುಖ್ಯಮಂತ್ರಿಗೆ ರಾಜೇಗೌಡರಿಂದ ಮನವಿ: ಕೊಪ್ಪದಿಂದ ಶಿವಮೊಗ್ಗ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಹಣ ಮಂಜೂರು ಮಾಡಲು ಶಾಸಕ ಟಿ.ಡಿ.ರಾಜೇಗೌಡ ಮುಖ್ಯಮಂತ್ರಿಗೆ ಮನವಿ ಮಾಡಿದರು. ಅತಿ ವೃಷ್ಠಿಯಿಂದ ಹಾಳಾದ ಶೃಂಗೇರಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹100 ಕೋಟಿ, ಕೊಪ್ಪದಲ್ಲಿ ಉಪ ವಿಭಾಗಾಧಿಕಾರಿಗಳ ಕಚೇರಿ ಪ್ರಾರಂಭಿಸಬೇಕು. ಶೃಂಗೇರಿ ಪಟ್ಟಣ ರಸ್ತೆ ಅಗಲೀಕರಣಕ್ಕೆ ಅನುದಾನ, ಒತ್ತುವರಿ ಮಾಡಿದ ರೈತರ ಭೂಮಿ ಲೀಸ್ ಮೇಲೆ ರೈತರಿಗೆ ಕೊಡುವ ಬಗ್ಗೆ ಸರ್ಕಾರ ಆದೇಶ ಹೊರಡಿಸಬೇಕು ಎಂಬ ವಿವಿಧ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.
ಅಜಾನ್ ವೇಳೆ ಭಾಷಣ ನಿಲ್ಲಿಸಿದ ಸಿಎಂ
ಸೇತುವೆ ಲೋಕಾರ್ಪಣೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ವೇಳೆ ಮಸೀದಿಯ ಅಜಾನ್ ಕೇಳುತ್ತಿದ್ದಂತೆ ಮುಖ್ಯಮಂತ್ರಿ ಭಾಷಣ ನಿಲ್ಲಿಸಿದರು. ಅಜಾನ್ ಮುಗಿದ ಬಳಿಕ ಮತ್ತೆ ಸಿದ್ದರಾಮಯ್ಯ ತಮ್ಮ ಭಾಷಣ ಮುಂದುವರಿಸಿದರು.


