ಚಿನ್ನದ ವ್ಯಾಪಾರ ಮಾಡುವವರಿಗೆ ಅನಗತ್ಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಈ ಅಸಂಘಟಿತ ವಲಯ ಬಲಪಡಿಸಲು ಅಗತ್ಯ ಸಹಕಾರ ನೀಡಲಾಗುವುದು.
ಬೆಳಗಾವಿ (ಮಾ.25): ಚಿನ್ನದ ವ್ಯಾಪಾರ ಮಾಡುವವರಿಗೆ ಅನಗತ್ಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಬೆಳಗಾವಿ ಸುವರ್ಣಸೌಧ ಸಭಾಂಗಣದಲ್ಲಿ ದೈವಜ್ಞ ಜ್ಯುವೆಲರ್ಸ್‌ನ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಸುವರ್ಣ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಂಪ್ರದಾಯಿಕ ಆಭರಣ ತಯಾರಕರು ಮತ್ತು ಕುಶಲಕರ್ಮಿಗಳು ಎದುರಿಸುತ್ತಿರುವ ಸವಾಲುಗಳನ್ನು ಸರ್ಕಾರ ಗಮನಿಸುತ್ತಿದೆ.
ಈ ಅಸಂಘಟಿತ ವಲಯ ಬಲಪಡಿಸಲು ಅಗತ್ಯ ಸಹಕಾರ ನೀಡಲಾಗುವುದು. ಬೆಳಗಾವಿಯ ಆಭರಣ ಕಲೆಗೆ ಜಾಗತಿಕ ಮಾನ್ಯತೆ ದೊರಕಿಸಿಕೊಡುವಲ್ಲಿ ಮತ್ತು ಸಾಂಸ್ಕೃತಿಕ ಪರಂಪರೆ ಉಳಿಸುವಲ್ಲಿ ಇಂತಹ ಸಮ್ಮೇಳನಗಳು ಸಹಕಾರಿ ಎಂದು ಸಚಿವರು ಶ್ಲಾಘಿಸಿದರು. ಬೆಳಗಾವಿ ಜಿಲ್ಲೆಯ ಆಭರಣೋದ್ಯಮವು ಸ್ಥಳೀಯ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿದ್ದು, ವ್ಯಾಪಾರಿಗಳು ಮತ್ತು ಗ್ರಾಹಕರ ಹಿತರಕ್ಷಣೆಗೆ ಪೂರಕವಾದ ವಾತಾವರಣ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂಬುದಾಗಿ ಭರವಸೆ ನೀಡಿದರು.
ತಲೆಮಾರುಗಳಿಂದ ಈ ವೃತ್ತಿಯಲ್ಲಿರುವವರ ಹಿತಾಸಕ್ತಿ ಕಾಪಾಡುವಲ್ಲಿ ಅಸೋಸಿಯೇಷನ್ ಶ್ರಮಿಸಬೇಕು ಮತ್ತು ಉದ್ಯಮ ಎದುರಿಸುತ್ತಿರುವ ಇಂದಿನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಆಭರಣ ಉದ್ಯಮದ ಅಭಿವೃದ್ಧಿ ಹಾಗೂ ವ್ಯಾಪಾರಿಗಳ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು. ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿ ಅಧ್ಯಕ್ಷ ರಾಜೇಶ ರೊಕಡೆ ಮಾತನಾಡಿ, ಚಿನ್ನದ ವ್ಯಾಪಾರದಲ್ಲಿ ಮೋಸ ತಡೆಗಟ್ಟಬೇಕು.
ಅಧಿಕಾರಿಗಳೊಂದಿಗೆ ಸಭೆ
ಜುವಲರ್ಸ್ ಶಾಪ್‌ಗಳಿಗೆ ಭದ್ರತೆ ನೀಡಬೇಕು. ಚಿನ್ನದ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಪೊಲೀಸ್ ಇಲಾಖೆ ಭದ್ರತಾ ವ್ಯವಸ್ಥೆ ನೀಡಬೇಕು ಎಂದು ಮನವಿ ಮಾಡಿದರು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ, ಚಿನ್ನದ ವ್ಯಾಪಾರಕ್ಕೆ ಸಂಬಂಧಿಸಿದ ಕಾನೂನಾತ್ಮಕ ಅಥವಾ ಆಡಳಿತಾತ್ಮಕ ಅಡೆತಡೆಗಳನ್ನು ಚರ್ಚಿಸಲು ಮತ್ತು ಅವುಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ದೈವಜ್ಞ ಜ್ಯುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಮಣಿಕಂಠ ಅನ್ವೇಕರ್, ಗೌರವ ಕಾರ್ಯದರ್ಶಿ ವೈಭವ ವೆರ್ಣೇಕರ್, ಚೇರ್ಮನ್ ಅವಿನಾಶ್ ಗುಪ್ತಾ, ಡಾ.ಚೇತನ್ ಕುಮಾರ್ ಮೆಹತಾ, ಶ್ರೀಕಾಂತ ಕರಿ, ಗಜಾನನ ಅನವೇಕರ್ , ವೈಭವ್ ವೆರನೇಕರ್, ಪ್ರಶಾಂತ ರೇವನಕರ್, ಜೀವನ, ವೇರನೇಕರ್, ನಾಗರಾಜ್ ವೇರನೇಕರ್, ಸಂಜಯ ಅವನೇಕರ್, ಗೀರೀಶ ಜಯಾನಂದ ಅರ್ಕಸಾಲಿ, ಕ್ಯಾಮಲಾಪೂರಿ ಘಟಪ್ರಭಾ, ಭಡಾಶ ಬೈಲಹೊಂಗಲ ಹಾಗೂ ಇತರರು ಇದ್ದರು.


