ವರ್ಷಕ್ಕೊಮ್ಮೆ ತೆರೆಯುವ ದೇವಸ್ಥಾನ: ಸೆ. 13ರಿಂದ ಸಾತೇರಿ ದೇವಿಯ ದರ್ಶನ
* ಕಾರವಾರ ತಾಲೂಕಿನ ಹಣಕೋಣದ ಸಾತೇರಿ ದೇವಿಯ ದೇವಸ್ಥಾನ
* ವರ್ಷದಲ್ಲಿ ಏಳು ದಿನ ಮಾತ್ರ ತೆರೆಯುವ ದೇವಸ್ಥಾನ
* ಕೋವಿಡ್ ಹಿನ್ನೆಲೆಯಲ್ಲಿ ದರ್ಶನಕ್ಕೆ ಮಾತ್ರ ಅವಕಾಶ
ಕಾರವಾರ(ಸೆ.12): ತಾಲೂಕಿನ ಹಣಕೋಣದ ಸಾತೇರಿ ದೇವಿಯ ದರ್ಶನ ವರ್ಷದಲ್ಲಿ 7 ದಿನ ಮಾತ್ರ ಸಿಗಲಿದ್ದು ಈ ಬಾರಿ ಸೆ. 13ರಂದು ಮಧ್ಯರಾತ್ರಿ ದೇವಸ್ಥಾನದ ಬಾಗಿಲು ತೆರೆಯಲಿದೆ.
ಶಕ್ತಿ ದೇವತೆಯಾಗಿರುವ ಸಾತೇರಿ ದೇವಿ ಹಲವು ಪವಾಡ ಮಾಡಿರುವ ಪ್ರತೀತಿ ಇದೆ. 358 ದಿನ ಬಂದ್ ಇರುವ ಗರ್ಭಗುಡಿಯ ಬಾಗಿಲು ವರ್ಷದಲ್ಲಿ ಏಳುದಿನ ತಾನಾಗಿಯೇ ತೆಗೆಯುತ್ತದೆ ಎನ್ನುವ ನಂಬಿಕೆಯಿದೆ. ದೇವಿಯ ಜಾತ್ರೆ ಆಚರಣೆ, ಪರಂಪರೆಗಳೆಲ್ಲ ತೀರಾ ವಿಭಿನ್ನವಾಗಿದೆ. ಈ ದೇವಸ್ಥಾನದ ಸುತ್ತ ಐದು ದೇವಾಲಯ ಹಾಗೂ ಗ್ರಾಮ ಪುರುಷ, ರಾಮನಾಥ, ಚಣಕಾದೇವಿ, ಮ್ಹಾಳಸಾ ನಾರಾಯಣಿ ದೇವಾಲಯ, ಕಾಳಮೋರ ಚಣಕಭಕ್ತ, ಕಠೀಂದ್ರ, ಜೇಲ್ ಪುರುಷ ಮೊದಲಾದ ಗುಡಿಗಳಿವೆ. ಇಲ್ಲಿನ ಪರಿವಾರ ದೇವತೆಗಳ ದೇವಾಲಯಗಳಲ್ಲಿ ಪ್ರತ್ಯೇಕ ಆಚರಣೆಗಳು ನೆರವೇರುತ್ತವೆ. ಸಾತೇರಿ ದೇವಿಯ ವಾರ್ಷಿಕ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವಾರ್ಷಿಕ ಆಚರಣೆ ಹಿಂದೆ ಪೌರಾಣಿಕ ಐತಿಹ್ಯವಿದೆ.
ಹಣಕೋಣದ ಸಾತೇರಿ ಹಾಗೂ ಚಣಕಾದೇವಿ ಸಹೋದರಿಯರು ಎನ್ನುವ ಪ್ರತೀತಿಯಿದ್ದು, ಈ ದೇವಿಯರು ಪ್ರತ್ಯೇಕ ಕಡೆ ನೆಲೆಸಿ, ಜನರ ರಕ್ಷಣೆಯಲ್ಲಿ ತೊಡಗಿದ್ದರು. ಹಣಕೋಣದಲ್ಲಿದ್ದ ಸಾತೇರಿ ದೇವಿ ತನ್ನ ಭಕ್ತರ ಕಷ್ಟಗಳ ನಿವಾರಣೆಗೆ ಅಗತ್ಯವಿದ್ದರೆ ಪ್ರತ್ಯಕ್ಷಳಾಗುತ್ತಿದ್ದಳು. ಮದುವೆ ಇನ್ನಿತರ ಸಮಾರಂಭಗಳಿಗೆ ಚಿನ್ನಾಭರಣ ಅಗತ್ಯವಿದ್ದವರು ಭಕ್ತಿಯಿಂದ ಕೇಳಿದಾಗ ಅವು ಅವರ ಮುಂದಿರುತ್ತಿದ್ದವು. ಆದರೆ ನಿಗದಿತ ಸಮಯದೊಳಗೆ ಮರಳಿಸದಿದ್ದರೆ ದೇವಿಯ ಅವಕೃಪೆಗೆ ಪಾತ್ರರಾಗಬೇಕಿತ್ತು ಎಂಬ ಕಥೆ ಪ್ರಚಲಿತದಲ್ಲಿದೆ.
ಆಯೋಧ್ಯೆ ರಾಮ ಮಂದಿರ ನಿರ್ಮಾಣ 3 ಸಾವಿರ ಕೋಟಿ ದೇಣಿಗೆ ಸಂಗ್ರಹ; 2023ಕ್ಕೆ ಸಾರ್ವಜನಿಕರಿಗೆ ಮುಕ್ತ!
ಅದೃಶ್ಯಳಾದ ದೇವಿ:
ಈಗ ದೇವಾಲಯ ಇರುವ ಸ್ಥಳದಲ್ಲೆ ನೆಲೆಸಿದ್ದ ದೇವಿ, ಒಮ್ಮೆ ದೇವಾಲಯದ ಮುಂದಿರುವ ಬಾವಿ ಬಳಿ ಕೂದಲು ಬಾಚಿಕೊಳ್ಳುತ್ತಿದ್ದಳು. ದುಷ್ಟನೊಬ್ಬ ದೇವಿ ಕಡೆಗೆ ವಕ್ರದೃಷ್ಟಿಬೀರಿ, ಮುನ್ನುಗ್ಗಿದಾಗ ಆಕೆ ಅದೃಶ್ಯಳಾಗಿ, ಬಾವಿಯಲ್ಲಿ ಹಾರಿದಳು. ಬಾವಿ ಬಳಿ ದೇವಿ ಪಾದುಕೆ, ಹಣಿಗೆ ಕಂಡವು. ಕೆಲ ದಿನಗಳ ನಂತರ ಊರಿನ ಹಿರಿಯ ವ್ಯಕ್ತಿಯೊಬ್ಬರ ಕನಸಿನಲ್ಲಿ ತಾನು ಅದೃಶ್ಯಳಾದ ಬಗ್ಗೆ ತಿಳಿಸಿದಳು. ವರ್ಷಕ್ಕೆ ಏಳುದಿನ ಮಾತ್ರ ತನ್ನ ದರ್ಶನ ನೀಡುವುದಾಗಿ ದೇವಿ ಹೇಳಿದ್ದಳು. ತಾನು ನೆಲೆಸಿದ ಸ್ಥಳದಲ್ಲಿ ಗುಡಿ ನಿರ್ಮಿಸುವ ಬೇಡಿಕೆ ಇಟ್ಟಳು. ನಂತರ ಅಲ್ಲಿಗುಡಿ ನಿರ್ಮಿಸಲಾಯಿತು.
ಜಾತ್ರಾ ಉತ್ಸವದ ಏಳು ದಿನ ಮಿರಾಶಿಗಳಿಗೆ ಪ್ರಥಮ ದರ್ಶನದ ಆದ್ಯತೆ ನೀಡಲಾಗುತ್ತದೆ. ಇಲ್ಲಿನ ಒಂದೊಂದು ಸಮಾಜದವರಿಗೆ ಬೇರೆ ಬೇರೆ ಜವಾಬ್ದಾರಿ ವಹಿಸಲಾಗಿದೆ. ಆಚಾರಿ, ಗುನಗಿ, ದೇವಳಿ, ವಾಜಂತ್ರಿ, ಅಂಬಿ ಹಾಗೂ ಪರಿಶಿಷ್ಟಜಾತಿಯರಿಗೆ ನೀಡಿದ ಜವಾಬ್ದಾರಿಯನ್ನು ಪುರಾತನ ಕಾಲದಿಂದಲೂ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ದೇವಿಯ ದರ್ಶನಕ್ಕೆ ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ಇನ್ನಿತರ ಪ್ರದೇಶದಿಂದ ಭಕ್ತರು ಆಗಮಿಸುತ್ತಾರೆ.
ಕೇವಲ ದರ್ಶನ...
ಗಣೇಶ ಚತುರ್ಥಿಯ ನಾಲ್ಕು ದಿನದ ನಂತರ ಸಾತೇರಿ ದೇವಿಯ ದೇವಸ್ಥಾನದ ಬಾಗಿಲು ತೆರೆಯುತ್ತದೆ. 7 ದಿನ ವಿಜೃಂಭಣೆಯಿಂದ ನಡೆಯುವ ಜಾತ್ರೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕೇವಲ ದೇವಸ್ಥಾನದ ಹೊರಗಿನಿಂದಲೇ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಭಕ್ತರಿಗೆ ಪೂಜೆಗೆ ಅವಕಾಶವಿಲ್ಲ. 14ರಂದು ಕುಳಾವಿ ಸಮುದಾಯದ ಪೂಜೆ ನಡೆಯುತ್ತದೆ. ಸೆ. 19ರ ವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದೆ.