Asianet Suvarna News Asianet Suvarna News

ಶುಗರ್‌ ಏರುಪೇರು: ಸ್ಯಾಂಟ್ರೋ ರವಿ ಆಸ್ಪತ್ರೆಗೆ ದಾಖಲು

ರವಿ ಆರೋಗ್ಯದ ಮೇಲೆ ಎಚ್ಚರಿಕೆ ವಹಿಸಲಾಗಿದೆ. ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಂದು(ಶನಿವಾರ) ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. ಬಳಿಕ ರವಿಯನ್ನು ಮತ್ತೆ ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗುತ್ತದೆ: ಎಡಿಜಿಪಿ ಕೆ.ವಿ.ಶರತ್‌ ಚಂದ್ರ 

Santro Ravi Admitted to Hospital due to Health Problem in Bengaluru grg
Author
First Published Jan 28, 2023, 10:36 AM IST

ಬೆಂಗಳೂರು(ಜ.28):  ತನ್ನ ಪತ್ನಿ ಮೇಲಿನ ದೌರ್ಜನ್ಯ ಪ್ರಕರಣ ಸಂಬಂಧ ಸಿಐಡಿ ವಶದಲ್ಲಿರುವ ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿಗೆ ದಿಢೀರ್‌ ಆರೋಗ್ಯ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಸಲುವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಇದೇ ವೇಳೆ, ರವಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ವದಂತಿಗಳನ್ನು ಪೊಲೀಸರು ಬಲವಾಗಿ ಅಲ್ಲಗಳೆದಿದ್ದಾರೆ. ‘ಮಧುಮೇಹ ಕಾಯಿಲೆ ಇರುವ ರವಿ ಗುರುವಾರ ಮಧ್ಯಾಹ್ನ ಊಟ ಸೇವಿಸದ ಕಾರಣ ಆತನ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ದಿಢೀರ್‌ ನಿತ್ರಾಣನಾಗಿದ್ದ. ಕೂಡಲೇ ಆತನನ್ನು ಬೌರಿಂಗ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪ್ರಾಥಮಿಕ ಹಂತದ ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಆರೋಪಿಯನ್ನು ದಾಖಲಿಸಲಾಗಿದೆ. ಈಗ ಆತನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ’ ಎಂದು ಸಿಐಡಿ ಎಡಿಜಿಪಿ ಕೆ.ವಿ.ಶರತ್‌ ಚಂದ್ರ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ರವಿ ಆರೋಗ್ಯದ ಮೇಲೆ ಎಚ್ಚರಿಕೆ ವಹಿಸಲಾಗಿದೆ. ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಶನಿವಾರ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. ಬಳಿಕ ರವಿಯನ್ನು ಮತ್ತೆ ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗುತ್ತದೆ ಎಂದು ಎಡಿಜಿಪಿ ಹೇಳಿದರು.

ಅಧಿಕಾರಿ ಜತೆ ಸಂಬಂಧಕ್ಕೆ ಪತ್ನಿಗೆ ಸ್ಯಾಂಟ್ರೋ ಒತ್ತಡ..!

ನಿತ್ಯ 12 ಮಾತ್ರೆ ಸೇವನೆ:

ಮಧುಮೇಹ, ಕಿಡ್ನಿ ಸಮಸ್ಯೆ ಹಾಗೂ ನರದೌರ್ಬಲ್ಯ ಸೇರಿದಂತೆ ಕೆಲವು ಕಾಯಿಲೆಗಳು ಆರೋಪಿ ಸ್ಯಾಂಟ್ರೋ ರವಿಗೆ ಇದ್ದು, ಈ ರೋಗಗಳಿಗೆ ಪ್ರತಿ ದಿನ 12 ಮಾತ್ರೆಗಳನ್ನು ಆತ ಸೇವಿಸುತ್ತಾನೆ. ಅಲ್ಲದೆ ಪ್ರತಿ ದಿನ ಎರಡು ಬಾರಿ ಇನ್ಸುಲಿನ್‌ ತೆಗೆದುಕೊಳ್ಳುತ್ತಾನೆ.

ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಸ್ಯಾಂಟ್ರೋ ರವಿ ವಿರುದ್ಧ ವೇಶ್ಯಾವಾಟಿಕೆಗೆ ಒತ್ತಾಯಿಸಿದ, ಜೀವ ಬೆದರಿಕೆ, ಹಲ್ಲೆ ಹಾಗೂ ಅತ್ಯಾಚಾರ ನಡೆಸಿದ ಆರೋಪ ಮೇರೆಗೆ ಆತನ ಪತ್ನಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ರವಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ಮೈಸೂರು ಪೊಲೀಸರು ಬಂಧಿಸಿದ್ದರು. ಬಳಿಕ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ನೀಡಿತ್ತು. ಅಂತೆಯೇ ತನಿಖೆ ಕೈಗೆತ್ತಿಕೊಂಡ ಸಿಐಡಿ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ಮೈಸೂರಿನಿಂದ ಕರೆತಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ.

ನಿತ್ಯ 12 ಮಾತ್ರೆ ಸೇವನೆ:

ಮಧುಮೇಹ, ಕಿಡ್ನಿ ಸಮಸ್ಯೆ ಹಾಗೂ ನರದೌರ್ಬಲ್ಯ ಸೇರಿದಂತೆ ಕೆಲವು ಕಾಯಿಲೆಗಳು ಆರೋಪಿ ಸ್ಯಾಂಟ್ರೋ ರವಿಗೆ ಇದ್ದು, ಈ ರೋಗಗಳಿಗೆ ಪ್ರತಿ ದಿನ 12 ಮಾತ್ರೆಗಳನ್ನು ಆತ ಸೇವಿಸುತ್ತಾನೆ. ಅಲ್ಲದೆ ಪ್ರತಿ ದಿನ ಎರಡು ಬಾರಿ ಇನ್ಸುಲಿನ್‌ ತೆಗೆದುಕೊಳ್ಳುತ್ತಾನೆ. ಊಟ ಸೇವಿಸಿದರೆ ಆತನ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಊಟ ಮಾಡದೆ ಹೋದರೆ ಸಕ್ಕರೆ ಅಂಶ ಇಳಿಮುಖವಾಗುತ್ತದೆ. ಹೀಗಾಗಿ ಸಮತೋಲಿತವಾಗಿ ಆತ ದೇಹ ಕಾಪಾಡಿಕೊಳ್ಳಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಯಾಂಟ್ರೋ ರವಿ ಪ್ರಕರಣ: ಹಿರಿಯ ಅಧಿಕಾರಿಗಳ ಹೆಸರು ಬಹಿರಂಗ

ವೈದ್ಯರ ಸೂಚನೆ ಮೇರೆಗೆ ಆತನಿಗೆ ಪೊಲೀಸರೇ ಕಾಲ ಕಾಲಕ್ಕೆ ನಿಯಮಿತವಾಗಿ ಮಾತ್ರೆಗಳನ್ನು ಕೊಡುತ್ತಿದ್ದರು. ಎಂದಿನಂತೆ ಗುರುವಾರ ಬೆಳಗ್ಗೆ ಉಪಾಹಾರ ಸೇವಿಸಿದ ಬಳಿಕ ಮಾತ್ರೆಗಳನ್ನು ಆತ ಸೇವಿಸಿದ್ದ. ಆದರೆ ಮಧ್ಯಾಹ್ನ ತನಗೆ ಹಸಿವಿಲ್ಲ ಎಂದು ಹೇಳಿ ಆತ ಊಟ ನಿರಾಕರಿಸಿದ್ದ. ಮಧುಮೇಹ ಕಾಯಿಲೆ ಇರುವ ಕಾರಣ ಊಟ ಮಾಡದೆ ಹೋದಾಗ ಆತನ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಯಿತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಹದಲ್ಲಿ ಸಕ್ಕರೆ ಅಂಶ ವ್ಯತ್ಯಾಸದಿಂದ ಸ್ಯಾಂಟ್ರೋ ರವಿ ಹಠಾತ್ತಾಗಿ ನಿತ್ರಾಣನಾಗಿದ್ದ. ಉತ್ತಮ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದ್ದು, ಆತ ಸುಧಾರಿಸಿಕೊಂಡಿದ್ದಾನೆ. ಯಾವುದೇ ತೊಂದರೆ ಇಲ್ಲ. ಆತ್ಮಹತ್ಯೆ ಯತ್ನ ಎಂಬುದು ಸುಳ್ಳು ಆರೋಪವಾಗಿದೆ ಅಂತ ಸಿಐಡಿ ಎಡಿಜಿಪಿ ಕೆ.ವಿ.ಶರತ್‌ ಚಂದ್ರ ತಿಳಿಸಿದ್ದಾರೆ. 

Follow Us:
Download App:
  • android
  • ios