ಹುಬ್ಬಳ್ಳಿ (ನ.09):  ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಕುಟುಂಬಸ್ಥರನ್ನು ಭಾನುವಾರ ಮಾಜಿ ಸಚಿವ ಸಂತೋಷ ಲಾಡ್‌ ಭೇಟಿ ಮಾಡಿ ಸಾಂತ್ವನ ಹೇಳಿದರು. 

ಧಾರವಾಡ ಬಾರಾಕೋಟ್ರಿಯಲ್ಲಿರುವ ವಿನಯ್‌ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿದ ಅವರು, ಕೆಲಕಾಲ ಕುಟುಂಬಸ್ಥರ ಜತೆಗೆ ಚರ್ಚಿಸಿದರು. ಯಾವುದೇ ಕಾರಣಕ್ಕೆ ಆತಂಕಕ್ಕೆ ಒಳಗಾಗಬೇಡಿ, ಧೈರ್ಯವಾಗಿರಿ. ವಿನಯ್‌ಗೆ ಏನು ಆಗಲ್ಲ. ನಿರ್ದೋಷಿಯಾಗಿ ಹೊರಬರುತ್ತಾರೆ ಎಂದು ಧೈರ್ಯ ತುಂಬಿದ್ದಾರೆ. 

ಧರ್ಮದಿಂದಲೇ ರಾಜಕಾರಣ ಮಾಡುತ್ತೇನೆ: ಸಂತೋಷ ಲಾಡ್‌ ..

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂತೋಷ ಲಾಡ್‌, ವಿರೋಧ ಪಕ್ಷದ ಮುಖಂಡರ ಬಂಧನ ದೇಶದಲ್ಲಿ ಹೊಸದಲ್ಲ. ಕಳೆದ ಆರು ವರ್ಷದಿಂದ ಇಂಥ ಘಟನೆಗಳು ನಿರಂತರವಾಗಿದ್ದು ದೇಶದಲ್ಲಿ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು.

ಸೋತರೂ ಶಾಸಕ!: ಸಂತೋಷ ಲಾಡ್‌ ಮಾಜಿ ಸಚಿವರಾದರೂ ಅವರ ಕಾರಿಗೆ ‘ಶಾಸಕರು, ಕಲಘಟಗಿ ಮತಕ್ಷೇತ್ರ’ ಎಂಬ ಬೋರ್ಡ್‌ ಅಳವಡಿಕೆ ಮಾಡಲಾಗಿತ್ತು. ಇದು ಮಾಧ್ಯಮಗಳ ಗಮನಕ್ಕೆ ಬರುತ್ತಿದ್ದಂತೆ ಚಿತ್ರೀಕರಣಕ್ಕೆ ಮುಂದಾಗುತ್ತಿದ್ದಂತೆ ಬೋರ್ಡ್‌ನ್ನು ಚಾಲಕ ತೆಗೆದಿದ್ದಾನೆ.