Asianet Suvarna News Asianet Suvarna News

ಸಂಸ್ಕೃತ ಜಗತ್ತಿನ ಶ್ರೇಷ್ಠ ವಾಹಿನಿ: ಶಿಕ್ಷಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಪ್ರಭಾಕರ

ಸಂಸ್ಕೃತದಲ್ಲಿರುವ ಭಗವದ್ಗೀತೆಯು ಶ್ರೇಷ್ಠ ಕಾವ್ಯವೆಂದು ಜಗತ್ತು ಒಪ್ಪಿದೆ. ಸಂಸ್ಕೃತ ಭಾಷೆಯು ಎಲ್ಲ ಕಾಲಕ್ಕೂ ಹಿತವಾಗಿದ್ದೂ, ಜಗತ್ತಿನ ಶ್ರೇಷ್ಠವಾಹಿನಿಯಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಪ್ರೊ. ಟಿ.ಎನ್. ಪ್ರಭಾಕರ ತಿಳಿಸಿದರು.

Sanskrit  is worlds greatest  language : Prabhakar snr
Author
First Published Jan 24, 2024, 10:52 AM IST

 ತುಮಕೂರು :  ಸಂಸ್ಕೃತದಲ್ಲಿರುವ ಭಗವದ್ಗೀತೆಯು ಶ್ರೇಷ್ಠ ಕಾವ್ಯವೆಂದು ಜಗತ್ತು ಒಪ್ಪಿದೆ. ಸಂಸ್ಕೃತ ಭಾಷೆಯು ಎಲ್ಲ ಕಾಲಕ್ಕೂ ಹಿತವಾಗಿದ್ದೂ, ಜಗತ್ತಿನ ಶ್ರೇಷ್ಠವಾಹಿನಿಯಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಪ್ರೊ. ಟಿ.ಎನ್. ಪ್ರಭಾಕರ ತಿಳಿಸಿದರು.

ವಿಶ್ವವಿದ್ಯಾನಿಲಯ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಂಸ್ಕೃತ ವಿಭಾಗವು ಮಂಗಳವಾರ ಆಯೋಜಿಸಿದ್ದ ‘ಆಧುನಿಕಯುಗದಲ್ಲಿ ಸಂಸ್ಕೃತದ ಅವಶ್ಯಕತೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಸ್ಕೃದಲ್ಲಿರುವ ಕಾಳಿದಾಸನ ಮಹಾಕಾವ್ಯಗಳು ವಿಲಿಯಂ ಶೇಕ್ಸ್‌ಪಿಯರ್‌ನ ಸಾನೆಟ್‌ಗಳಿಗಿಂತಲೂ, ಪ್ರಾಚೀನ ಗ್ರೀಕ್ ಮಹಾಕಾವ್ಯಗಳಾದ ಇಲಿಯಡ್, ಒಡಿಸ್ಸಿಗಿಂತಲೂ ಉನ್ನತ ಮಟ್ಟದ್ದಾಗಿದೆ ಎಂದು ವಿದೇಶಿ ಕವಿಗಳೇ ಒಪ್ಪಿದ್ದಾರೆ ಎಂದರು.

ವಿಚಾರ ವಿನಿಮಯ, ವಿಷಯಗಳ ಮಂಥನಕ್ಕೆ ಸ್ವಾಗತಿಸಿದ ದೇಶ ಭಾರತ. ಕ್ಷತ್ರಿಯನ ಕರ್ತವ್ಯವನ್ನು ನೆನಪು ಮಾಡಲು ಭಗವದ್ಗೀತೆ ಹೊರಟಿತು. ಪ್ರಶ್ನೆ ಉತ್ತರಗಳ ಜಿಜ್ಞಾಸೆ ಇರಬೇಕು. ವಿಷಯಗಳ ಮಂಥನ, ವಿಮರ್ಶೆಗಳಾಗಬೇಕು. ಎಲ್ಲ ಕಾಲಕ್ಕೂ ಅವಶ್ಯಕವಾದ ಕಲೆ, ಸಾಹಿತ್ಯ, ಸಂಗೀತದ ಉದಯವಾಗಿದ್ದು ಸಂಸ್ಕೃತ ಭಾಷೆಯಲ್ಲಿ. ಕನ್ನಡ ಹೃದಯದ ಭಾಷೆಯಾದರೆ, ಸಂಸ್ಕೃತ ಪುಣ್ಯಾಮೃತದ ಭಾಷೆ ಎಂದು ಹೇಳಿದರು.

ಪರರಲ್ಲಿ ಇರುವ ಅಣು ಪ್ರಮಾಣದ ಗುಣವನ್ನು ಪರ್ವತದ ಎತ್ತರಕ್ಕೆ ಏರಿಸಿ ಹೃದಯದಲ್ಲಿ ಪ್ರತಿಷ್ಠಾಪನೆ ಮಾಡಿಕೊಳ್ಳಲು ಸಂಸ್ಕೃತ ಸಹಾಯ ಮಾಡುತ್ತದೆ. ಎಲ್ಲ ಅನ್ವೇಷಣೆಗಳ ಮೂಲ ತತ್ತ್ವವೇ ಸಂಸ್ಕೃತ. ಕಿರೀಟ ಪ್ರಾಯವಾದ ಭಾಷೆಯೇ ಸಂಸ್ಕೃತವಾಗಿದೆ. ಉಚ್ಚಾರಣೆಯ ಸ್ಪಷ್ಟತೆ ಬರಬೇಕಾದರೆ ಸಂಸ್ಕೃತ ಪಠಣ ಮಾಡಬೇಕು. ಸಂಸ್ಕೃತಾಧಾರಿತ ಭಾಷೆಗಳೇ ಕನ್ನಡ, ತಮಿಳು, ತೆಲುಗು ಎಂದು ತಿಳಿಸಿದರು.

‘ಸೊನ್ನೆಯಿಂದ ಶುರುವಾದ ಭಾರತ ಸಂಸ್ಕೃತ ಭಾಷೆಯಿಂದ ಎಲ್ಲರಿಗೂ ತಾಯಿಯಾಯಿತು’ ಎಂದು ಇತಿಹಾಸ ತಜ್ಞ ವಿಲ್ ಡ್ಯುರಾಂಟ್ ಹೇಳಿದ್ದಾರೆ. 170 ವರ್ಷಗಳ ಹಿಂದೆ ಭಾರತದ ಸರ್ವೋಚ್ಚ ನ್ಯಾಯಾಲಯದ ಮೊದಲ ನ್ಯಾಯಾಧೀಶರಾಗಿದ್ದ ವಿಲಿಯಂ ಜೋನ್ಸ್ 22ನೆಯ ಭಾಷೆಯಾಗಿ ಸಂಸ್ಕೃತಾಭ್ಯಾಸವನ್ನು ಐದು ವರ್ಷಗಳ ಕಾಲ ಮಾಡಿ, ಸಂಸ್ಕೃತದ ಪ್ರಾಚೀನತೆಯ ಕುರಿತು ಪುಸ್ತಕ ಬರೆದರು ಎಂದು ತಿಳಿಸಿದರು.

ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ. ಕರಿಯಣ್ಣ ಮಾತನಾಡಿ, ಜೀವನಕ್ಕಾಗಿ ಓದುವವರ ಸಂಖ್ಯೆ ಕಡಿಮೆಯಾಗಿದೆ. ಸಾಹಿತ್ಯ, ಸಂಗೀತವೂ ಮೃಗತ್ವದಿಂದ ಮನುಷ್ಯತ್ವಕ್ಕೆ ಕೊಂಡೊಯ್ಯುವ ಸಾಧನಗಳು. ಜ್ಞಾನದ ದಾಹವಿರದವನ ಬದುಕು ಅಪೂರ್ಣ. ವಿದ್ಯಾರ್ಥಿಗಳ ಆಸಕ್ತಿ ನಕಾರಾತ್ಮಕ ಚಿಂತನೆಗಳ ಕಡೆಗಿರುವುದು ತೆರೆದ ಸತ್ಯವಾಗಿದೆ. ಹಿತವಾದುದ್ದನ್ನು ಕುಳಿತು ಆಲಿಸುವ ಮನೋಭಾವ ಬೆಳೆಸಿಕೊಳ್ಳದಿದ್ದರೆ ವಿದ್ಯಾರ್ಥಿ ಜೀವನ ನಿಂತ ನೀರಿನಂತೆ, ಮುಚ್ಚಿದ ಪುಸ್ತಕದಂತೆ ಎಂದು ಕಳವಳ ವ್ಯಕ್ತಪಡಿಸಿದರು.

ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಪ್ರೇಮಾ ಅನಂತ ಮತ್ತು ಗಮಕಿ ಶ್ರೀದೇವಿ ಅನಂತರಾಜು ಗಮಕ ವಾಚನ ಮಾಡಿದರು. ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ.ಶೇಟ್, ಸಂಸ್ಕೃತ ವಿಭಾಗದ ಉಪನ್ಯಾಸಕರಾದ ಡಾ.ಡಿ.ವಿ. ಸುಬ್ರಹ್ಮಣ್ಯ ಶಾಸ್ತ್ರಿ, ಜಿ. ವತ್ಸಲ, ಲೋಕೇಶ್ ಎಂ.ಆರ್‌. ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios