'ಮೋದಿ ಮಾತಿಗೆ ಬೆಲೆ ನೀಡಿ ಹಂಪಿಯಲ್ಲೇ ಇದ್ದೇವೆ': 50 ದಿನಗಳಿಂದ ಹೋಟೆಲ್‌ನಲ್ಲಿರುವ ನಟಿ ಜಯಂತಿ
ಬಳ್ಳಾರಿ(ಏ.16): ನಾವಿಲ್ಲಿ ಬಂದು 50 ದಿನಕ್ಕೂ ಹೆಚ್ಚು ಸಮಯವಾಯಿತು. ಲಾಕ್‌ಡೌನ್ ಸಂದರ್ಭದಲ್ಲಿ ಪ್ರಧಾನಿ ಮೋದಿ ಯಾರು ಎಲ್ಲಿದ್ದೀರೋ ಅಲ್ಲೇ ಎಂದು ಕರೆ ನೀಡಿದ್ದರು. ನಾವು ಸಹ ಪ್ರಧಾನಿಯವರ ಮಾತಿಗೆ ಗೌರವ ನೀಡಿ ಇಲ್ಲೇ ಇದ್ದೇವೆ. ನಮಗೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವಿಲ್ಲಿ ಲಾಕ್ ಆಗಿ ಇಲ್ಲ. ಮನೆಯಲ್ಲೇ ಇದ್ದಂತೆ ತುಂಬಾ ಆರಾಮ ಆಗಿ ಇದ್ದೇವೆ. ಅಷ್ಟಕ್ಕೂ ಅಮ್ಮ (ಜಯಂತಿ)ನ ಊರು ಬಳ್ಳಾರಿಯೇ. ಅವರಿಗೆ ಜಿಲ್ಲೆಯ ಜೊತೆ ಭಾವನಾತ್ಮಕ ಸಂಬಂಧವಿದೆ. ಇಲ್ಲೇ ಹಾಯಾಗಿ ಇದ್ದೀವಿ.
ಕಳೆದ ಹಲವು ದಿನಗಳಿಂದ ಹಂಪಿಯ ಹೊಟೇಲ್ ಒಂದರಲ್ಲಿ ತಾಯಿ ಜೊತೆ ಉಳಿದಿರುವ ಹಿರಿಯ ನಟಿ ಜಂಯತಿ ಅವರ ಪುತ್ರ ಕೃಷ್ಣಕುಮಾರ್ ಅವರ ಮಾತಿದು. ಕನ್ನಡಪ್ರಭ ಜೊತೆ ಮಾತನಾಡಿದ ಅವರು, ನಾನು ಫೆಬ್ರವರಿ 26ರಂದು ಹೊಸಪೇಟೆ ತಾಲೂಕಿನ ಕಮಲಾಪುರ ಬಳಿಯ ಮಯೂರ ಭುವನೇಶ್ವರಿ ಹೋಟೆಲ್ಗೆ ಬಂದೆ. ಅಮ್ಮ 27ಕ್ಕೆ ಬಂದ್ರು. ಅಮ್ಮನ ಹುಟ್ಟೂರು ಬಳ್ಳಾರಿ. ಈ ಜಿಲ್ಲೆಯ ಬಗ್ಗೆ ಅಮ್ಮಗೆ ಬಹಳ ಪ್ರೀತಿ. ನಮ್ಮೂರಿಗೆ ಹೊರಟಿದ್ದೀಯಾ ನಾನು ಸಹ ಬರ್ತೀನಿ ಅಂದ್ರು. ನಾನು ಬಂದ ಮರುದಿನ ಅಮ್ಮ ಬಂದ್ರು. ನಾನು ಹಂಪಿ ಬೈ ನೈಟ್ ಟೆಂಡರ್ ಹಿಡಿದು ಕೆಲಸ ಮಾಡುತ್ತಿದ್ದೆ. ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಟ್ರಯಲ್ ನಡೆಯುತ್ತಿತ್ತು. ಒಂದು ವೇಳೆ ಲಾಕ್‌ಡೌನ್ ಆಗದಿದ್ದರೆ ಉದ್ಘಾಟನೆ ಸಹ ಆಗಬೇಕಿತ್ತು.
ಹಂಪಿ ಪ್ರವಾಸದಲ್ಲಿ ಸಿಲುಕಿರುವ ನಟಿ ಜಯಂತಿ ಹಾಗೂ ಪುತ್ರ ಫುಲ್ ಸೇಫ್!
ನಾನು, ಅಮ್ಮ ಬೆಂಗಳೂರಿನಿಂದ ಹೊರಟು ಬಂದು ಸುಮಾರು 50 ದಿನಗಳಿಂದ ಇಲ್ಲಿಯೇ ಉಳಿದಿದ್ದೇವೆ. ನಮಗ್ಯಾವ ಸಮಸ್ಯೆಯೂ ಆಗಿಲ್ಲ. ನಮ್ಮ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಮುಂದಿನ ಶನಿವಾರ ಬೆಂಗಳೂರಿಗೆ ಹೋಗೋಣ ಎಂದು ನಿರ್ಧರಿಸಿದ್ದೇವೆ. ವೈದ್ಯರ ಸಲಹೆ ನೋಡಿಕೊಂಡು ಜಿಲ್ಲಾಡಳಿತ ಅನುಮತಿ ಪಡೆದುಕೊಳ್ಳುತ್ತೇವೆ. ಅಮ್ಮಗೆ ಬಳ್ಳಾರಿಯಲ್ಲಿ ಒಂದಷ್ಟು ಕಾಲ ಉಳಿಯುವ ಆಸೆ ಇದೆ. ಲಾಕ್‌ಡೌನ್ ಮುಗಿದ ಬಳಿಕ ಇಲ್ಲಿಯೇ ಜಾಗ ನೋಡಿ ಒಂದು ಫಾರ್ಮ್ ಮಾಡು ಎಂದಿದ್ದಾರೆ. ಖಂಡಿತ ಆ ಕೆಲಸವೂ ಆಗಲಿದೆ ಎಂದರು.
ಇನ್ನು ಬೆಂಗಳೂರಿನಲ್ಲಿಯೂ ನಮಗೆ ಯಾವುದೇ ಕೆಲಸ ಇರಲಿಲ್ಲ. ಈ ಪರಿಸರದಲ್ಲಿಯೇ ಉತ್ತಮವಾಗಿ ಕಾಲ ಕಳೆಯುತ್ತಿದ್ದೇವೆ. ಇನ್ನು ಜಿಲ್ಲಾ ಆಡಳಿತ ಸಹ ಕೊರೋನಾ ನಿಯಂತ್ರಿಸುವ ವಿಚಾರದಲ್ಲಿ ತಲ್ಲೀನವಾಗಿದೆ. ನಾವು ಸಹ ಬೆಂಗಳೂರಿಗೆ ಹೋಗಲು ಪ್ಲ್ಯಾನ್ ಮಾಡಿಲ್ಲವಾದ್ದರಂದ ಪಾಸ್ ಸಹ ಕೇಳಿಲ್ಲ ಎಂದು ಅವರು ಹೇಳಿದರು.
ಇನ್ನು ಇಲ್ಲಿಯ ಹಂಪಿ ಬೈ ನೈಟ್ ಯೋಜನೆಗೆ ಸ್ಥಳೀಯ ಕಾರ್ಮಿಕರನ್ನೇ ಬಳಸಿಕೊಳ್ಳಲಾಗಿದ್ದು, ಹೊರಗಿನಿಂದ ಯಾರೂ ಬಂದಿಲ್ಲ. ಅಥವಾ ಯಾರೂ ಇಲ್ಲಿ ಸಿಲುಕಿಕೊಂಡಿಲ್ಲ. ಯಾವುದೇ ಸಮಸ್ಯೆ ತೊಂದರೆಯನ್ನು ನಾವು ಅನುಭವಿಸುತ್ತಿಲ್ಲ ಎಂದು ಕೃಷ್ಣಕುಮಾರ ಹೇಳಿದ್ದಾರೆ.