ಸಂಸ್ಕಾರದಿಂದ ಸನಾತನ ಸಂಸ್ಕೃತಿ ಜೀವಂತ: ಸಚಿವ ಶಿವರಾಮ ಹೆಬ್ಬಾರ್
ಎಲ್ಲ ಬುಡಕಟ್ಟು ಸಮುದಾಯಗಳನ್ನು ಒಂದು ವೇದಿಕೆಗೆ ತರುವ ಮೂಲಕ ಸನಾತನ ಸಂಸ್ಕೃತಿಯನ್ನು ಜೀವಂತವಾಗಿಡುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಮುಂಡಗೋಡ (ಡಿ.13) : ಎಲ್ಲ ಬುಡಕಟ್ಟು ಸಮುದಾಯಗಳನ್ನು ಒಂದು ವೇದಿಕೆಗೆ ತರುವ ಮೂಲಕ ಸನಾತನ ಸಂಸ್ಕೃತಿಯನ್ನು ಜೀವಂತವಾಗಿಡುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಪಟ್ಟಣದ ಲೋಯೋಲಾ ವಿಕಾಸ ಕೇಂದ್ರ ಸಭಾಂಗಣದಲ್ಲಿ ಮುಂಡಗೋಡ ತಾಲೂಕು ಸಂಘಟನಾ ಸಮಿತಿ ಆಶ್ರಯದಲ್ಲಿ ಜರುಗಿದ ಬುಡಕಟ್ಟು ಮತ್ತು ತಳಸಮುದಾಯಗಳ ಸಾಂಸ್ಕೃತಿಕ ಕಲಾ ಮೇಳವನ್ನು ತಬಲಾ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಿದ್ದಿ, ಗೌಳಿ, ಲಂಬಾಣಿ ಸಮುದಾಯದ ಹೆಣ್ಣು ಮಕ್ಕಳು ಸನಾತನ ಕಲೆಗಳನ್ನು ಪ್ರದರ್ಶಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಾರೆ. ಉತ್ತಮ ಸಂಸ್ಕಾರದಿಂದ ಸನಾತನ ಸಂಸ್ಕೃತಿ ಉಳಿಯಲು ಸಾಧ್ಯ. ಪಾಶ್ಚಿಮಾತ್ಯಕ್ಕೆ ಮಾರು ಹೋಗುತ್ತಿರುವ ನಾವು ನಮ್ಮ ಸಂಸ್ಕೃತಿಯನ್ನು ಕಳೆದುಕೊಂಡಿದ್ದೇವೆ. ಅದನ್ನು ಕಿಂಚಿತ್ತಾದರೂ ಉಳಿಸಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುವುದು ಅತ್ಯಗತ್ಯವಾಗಿದೆ ಎಂದರು.
ಉತ್ತರಕನ್ನಡ ಜಿಲ್ಲೆ ಇಬ್ಭಾಗದ ನಿರ್ಧಾರಕ್ಕೆ ನಾನು ಉಸ್ತುವಾರಿಯಲ್ಲ: ಸಚಿವ ಹೆಬ್ಬಾರ
ಹಿಂದೆ ಶಿಕ್ಷಣದ ಕೊರತೆಯಿಂದಾಗಿ ಅವಕಾಶಗಳು ಕೂಡ ಕಡಿಮೆ ಇದ್ದವು. ಆದರೆ ಈಗ ಎಲ್ಲ ಸಮುದಾಯಗಳು ಶಿಕ್ಷಣ ಪಡೆಯುತ್ತಿವೆ. ಯಾರು ಕೂಡ ಶಿಕ್ಷಣದಿಂದ ವಂಚಿತರಾಗದಿರಲಿ ಎಂದು ಸರ್ಕಾರ ಕೂಡ ಪ್ರತಿಯೊಬ್ಬರನ್ನು ಮುಖ್ಯವಾಹಿನಿಗೆ ತರುವ ನಿರಂತರ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಬುಡಕಟ್ಟು ಮಹಿಳೆಯೊಬ್ಬರು ಇಂದು ರಾಷ್ಟ್ರಪತಿಯಂತಹ ಉನ್ನತ ಸ್ಥಾನ ಅಲಂಕರಿಸಿದ್ದು, ಇದು ಬುಡಕಟ್ಟು ಸಮುದಾಯಕ್ಕೆ ಸಿಕ್ಕ ಗೌರವ. ಬುಡಕಟ್ಟು ಜನಾಂಗ ಕೂಡ ಯಾವುದರಲ್ಲಿ ಕಡಿಮೆ ಇಲ್ಲ ಎಂಬ ಸಂದೇಶ ಸಾರುತ್ತಿದೆ ಎಂದು ಸಚಿವರು ಹೇಳಿದರು.
ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಮಕ್ಕಳಿಗೆ ಕಲೆ, ಸಂಸ್ಕೃತಿಯೊಂದಿಗೆ ಉತ್ತಮ ಶಿಕ್ಷಣ ನೀಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯೋಗ್ಯತೆ ಮತ್ತು ಸಾಮರ್ಥ್ಯದಿಂದ ಗುರುತಿಸಲಾಗುತ್ತದೆ. ಸಮಾಜದಲ್ಲಿ ಜಾತಿಯಿಂದ ಯಾರನ್ನೂ ಗುರುತಿಸಲಾಗುವುದಿಲ್ಲ ಎಂದರು.
ಬಡತನದಿಂದ ಬಂದವರಿಗೆ ಕಾರ್ಮಿಕರ ನೋವು ಅರಿವಾಗುತ್ತೆ: ಆಯನೂರು
ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ತಾಲೂಕಾ ಸಂಘಟನಾ ಸಮಿತಿ ಅಧ್ಯಕ್ಷ ಸುಭಾಸ ವಡ್ಡರ, ಮರಾಠಾ ಸಮಾಜದ ಧುರೀಣ ಮರಿಯೋಜಿ ರಾವ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಹದೇವ ನಡಗೇರಿ, ಗೌಳಿ ಸಮಾಜದ ರಾಜ್ಯಾಧ್ಯಕ್ಷ ದೇವು ಪಾಟೀಲ, ಲೋಯೋಲಾ ಸಮೂಹ ಮುಖ್ಯಸ್ಥ ಜಾನ್ಸನ್ ಪಿಂಟೋ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರ, ರತ್ನವ್ವ ಗೊಲ್ಲರ, ರಾಮಣ್ಣ ಲಮಾಣಿ, ಹನುಮಂತಪ್ಪ ಆರೆಗೊಪ್ಪ, ಇಬ್ರಾಹೀಂ ಸಿದ್ದಿ, ಬಸವಂತಪ್ಪ ಕಟ್ಟಿಮನಿ, ಪ್ರಸನ್ನ ಚವ್ಹಾಣ, ಡಿ.ಎಫ್. ಮಡ್ಲಿ, ಬಸಯ್ಯ ನಡುವಿನಮನಿ ಉಪಸ್ಥಿತರಿದ್ದರು.