ಬೆಂಗಳೂರು(ನ.20): ಡಿಜೆ ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಮಾಜಿ ಮೇಯರ್‌ ಸಂಪತ್‌ ರಾಜ್‌ ತಮಿಳುನಾಡಿನಲ್ಲಿ ಧಾರ್ಮಿಕ ಕ್ಷೇತ್ರಗಳ ಯಾತ್ರೆ ನಡೆಸಿ ಸಂಕಷ್ಟ ನಿವಾರಣೆಗೆ ಪ್ರಾರ್ಥಿಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

"

ಕೊರೋನಾ ಸೋಂಕು ಚಿಕಿತ್ಸೆ ದಾಖಲಾಗಿದ್ದ ಕನ್ನಿಂಗ್‌ ಹ್ಯಾಮ್‌ ರಸ್ತೆಯ ಪೋರ್ಟಿಸ್‌ ಆಸ್ಪತ್ರೆಯಿಂದ ರಾತ್ರೋರಾತ್ರಿ ಪರಾರಿಯಾದ ಸಂಪತ್‌ ರಾಜ್‌ ಅವರು ಗೆಳೆಯರ ಸಹಕಾರ ಪಡೆದು ನಾಗರಹೊಳೆ ತಲುಪಿದ್ದರು. ಅಲ್ಲಿ ಕೆಲವು ದಿನಗಳು ತಂಗಿದ್ದ ಅವರು, ನಂತರ ತಮಿಳುನಾಡಿಗೆ ತೆರಳಿದ್ದರು. ವೆಲ್ಲೂರು, ತಿರುವಣಾ ಮಲೈ, ರಾಮೇಶ್ವರ ಹಾಗೂ ಶ್ರೀರಂಗಂ ಸೇರಿದಂತೆ ಕೆಲವು ದೇವಾಲಯಗಳು ಹಾಗೂ ಚಚ್‌ರ್‍ಗಳಿಗೆ ಸಂಪತ್‌ ರಾಜ್‌ ಭೇಟಿ ನೀಡಿದ್ದರು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಕೊನೆಗೂ ಸಂಪತ್‌ರಾಜ್ ಅರೆಸ್ಟ್, ಎಲ್ಲಿ ಅಡಗಿ ಕುಳಿತಿದ್ದರು?

‘ನನಗೆ ನಿರೀಕ್ಷಣಾ ಜಾಮೀನು ಸಿಗುವ ನಿರೀಕ್ಷೆ ಇತ್ತು. ಆದರೆ ನ್ಯಾಯಾಲಯದಲ್ಲಿ ಅರ್ಜಿ ತಿರಸ್ಕೃತಗೊಂಡ ಬಳಿಕ ಬಂಧನ ಭೀತಿ ಉಂಟಾಯಿತು. ಹೀಗಾಗಿ ಆಸ್ಪತ್ರೆಯಿಂದ ತಕ್ಷಣವೇ ಬಿಡುಗಡೆ ಮಾಡಿಸಿಕೊಂಡಿದ್ದೆ. ನನಗೆ ತಮಿಳುನಾಡಿನಲ್ಲಿ ಗೆಳೆಯರಿದ್ದಾರೆ. ಈ ಸ್ನೇಹದಲ್ಲಿ ನನಗೆ ಆಶ್ರಯ ಸಿಕ್ಕಿತು. ಒಂದು ಕಡೆ ನೆಲೆ ನಿಲ್ಲದೆ ಧಾರ್ಮಿಕ ಕ್ಷೇತ್ರಗಳಿಗೆ ಸುತ್ತಾಡಿದೆ. ಹಲವು ದೇವರಲ್ಲಿ ಸಂಕಷ್ಟದಿಂದ ಪಾರು ಮಾಡುವಂತೆ ಕೋರಿಕೆ ಸಲ್ಲಿಸಿದೆ. ಆದರೆ ಕೊನೆಗೂ ನನ್ನ ಬಂಧನ ತಪ್ಪಲಿಲ್ಲ’ ಎಂದು ವಿಚಾರಣೆ ವೇಳೆ ಮಾಜಿ ಮೇಯರ್‌ ಅಲವತ್ತು ಕೊಂಡಿರುವುದಾಗಿ ಮೂಲಗಳು ಹೇಳಿವೆ.

"

ಮತ್ತೆ 1 ದಿನ ಸಿಸಿಬಿ ವಶಕ್ಕೆ

ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಹೆಚ್ಚಿನ ವಿಚಾರಣೆ ಸಲುವಾಗಿ ಮತ್ತೆ ಒಂದು ದಿನ ಮಟ್ಟಿಗೆ ಸಂಪತ್‌ ರಾಜ್‌ ಅವರನ್ನು ಸಿಸಿಬಿ ವಶಕ್ಕೆ ನೀಡಿ ಗುರುವಾರ ನ್ಯಾಯಾಲಯವು ಆದೇಶಿಸಿದೆ. ಎರಡು ದಿನಗಳ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಮಾಜಿ ಮೇಯರ್‌ ಸಂಪತ್‌ ರಾಜ್‌ನನ್ನು ಪೊಲೀಸರು ಹಾಜರು ಪಡಿಸಿದ್ದರು. ಆಗ ವಿಚಾರಣೆಗೆ ಆರೋಪಿ ಸಹಕರಿಸುತ್ತಿಲ್ಲ. ಸಮಯದ ಕೊರತೆ ಉಂಟಾಯಿತು. ಹೀಗಾಗಿ ವಿಚಾರಣೆಗೆ ನಾಲ್ಕು ದಿನಗಳು ಆರೋಪಿ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಸಿಸಿಬಿ ಮನವಿ ಸಲ್ಲಿಸಿತು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, ಶುಕ್ರವಾರದವರೆಗೆ ಸಿಸಿಬಿ ಕಸ್ಟಡಿ ವಿಸ್ತರಿಸಿ ಆದೇಶಿಸಿತು.