ಮೈಸೂರು (ನ.12):  ಕಡಿತವಾಗಿರುವ ವೇತನ ನೀಡುವುದು, ತುಟ್ಟಿಭತ್ಯೆ ಸೌಲಭ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಆರ್‌ಎಸ್‌ ಫ್ಯಾಂಟಸಿ ಪಾರ್ಕ್ ಎಂಪ್ಲಾಯೀಸ್‌ ಯೂನಿಯನ್‌ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.

ಜಿಆರ್‌ಎಸ್‌ ಪ್ಯಾಂಟಸಿ ಪಾರ್ಕ್ ಆರಂಭವಾಗಿ 21 ವರ್ಷವಾಗಿದ್ದು, ಯಾವುದೇ ತೊಂದರೆ ಇಲ್ಲದೆ ಯಶಸ್ವಿಯಾಗಿ ಸೇವೆ ನೀಡುತ್ತ ಬಂದಿದೆ. ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಸಾಕಷ್ಟುಹಣ ಸಂದಾಯವಾಗಿದೆ. ಕಳೆದ ಮಾ. 20 ರಿಂದ ಕೋವಿಡ್‌-19ನಿಂದಾಗಿ ಅಲ್ಲಿ ದುಡಿಯುತ್ತಿದ್ದ ಸುಮಾರು 300ಕ್ಕೂ ಹೆಚ್ಚು ಕಾರ್ಮಿಕರಿಗೆ ಕೆಲಸವಿಲ್ಲವಾಗಿದೆ. 

ಪ್ರಿ ವೆಡ್ಡಿಂಗ್ ಪೋಟೋ ಶೂಟ್ ದುರಂತಕ್ಕೆ ಇದೆ ಕಾರಣ, ಎಚ್ಚರಿಕೆ ಕೊಟ್ಟ ಅವಘಡ! .

ಅಲ್ಲಿ ಕೆಲಸ ಮಾಡುತ್ತಿದ್ದ ಬಡ ಕಾರ್ಮಿಕರು ಈ ಕೆಲಸವನ್ನೇ ನಂಬಿ ಜೀವನ ನಡೆಸುತ್ತಿದ್ದು ಕೋವಿಡ್‌- 19ನಿಂದ ಸರ್ಕಾರ ಅನುಮತಿ ನೀಡದಿರುವುದರಿಂದ ಇದನ್ನೇ ನೆಪಮಾಡಿಕೊಂಡು ಕಾರ್ಮಿಕರಿಗೆ ತಿಂಗಳಿಗೆ ಶೇ. 75, ನಂತರ ಶೇ. 60ರಷ್ಟುವೇತನ ನೀಡುತ್ತಿದ್ದಾರೆ. ಅಗತ್ಯ ವಸ್ತಗಳ ಬೆಲೆಯೇರಿಕೆಯ ದಿನಗಳಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ಸಿನಿಮಾ ಹಾಲ್‌, ಮದುವೆ, ವ್ಯಾಯಾಮ ಮುಂತಾದವುಗಳಿಗೆ ಅನುಮತಿ ನೀಡಿದಂತೆ ಜಿಆರ್‌ಎಸ್‌ ಫ್ಯಾಂಟಸಿ ಪಾರ್ಕ್ಗೂ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಯೂನಿಯನ್‌ ಅಧ್ಯಕ್ಷ ಜಿ. ಜಯರಾಂ, ಉಪಾಧ್ಯಕ್ಷ ಎಂ. ಕುಮಾರ್‌, ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಜಗದೀಶ್‌, ಜಂಟಿ ಕಾರ್ಯದರ್ಶಿ ಯು.ಎಸ್‌. ಶ್ರೀನಿವಾಸ್‌, ಸಂಘಟನಾ ಕಾರ್ಯದರ್ಶಿ ಕೆ.ಎಂ. ರಮೇಶ್‌ ಇದ್ದರು.