ಸಾಯಿ ಲೇಔಟ್‌  ನಲ್ಲಿ ಮತ್ತೆ ಮನೆಗಳಿಗೆ ನುಗ್ಗಿದ ನೀರು.  ಪ್ರತಿ ಬಾರಿ ಮಳೆಗೂ ಸಮಸ್ಯೆಗೆ ಸಿಲುಕುವ ಲೇಔಟ್‌ . ಬಿಬಿಎಂಪಿಗೆ ಸ್ಥಳೀಯರ ಹಿಡಿ ಶಾಪ.  50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯನ್ನುಂಟು ಮಾಡಿದ ಮಳೆ

ಬೆಂಗಳೂರು (ಆ.3): ನಗರದಲ್ಲಿ ಸೋಮವಾರ ತಡರಾತ್ರಿ ಸುರಿದ ಧಾರಾಕಾರ ಮಳೆ ಮತ್ತೊಮ್ಮೆ ಅವಾಂತರ ಸೃಷ್ಟಿಸಿದೆ. ಸಾಯಿ ಲೇಔಟ್‌ ಭಾಗಶಃ ಮುಳುಗಡೆಯಾಗಿದ್ದು, ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ ಪ್ರಕರಣಗಳು ನಡೆದಿವೆ. ರಾತ್ರಿ 9ಕ್ಕೆ ಆರಂಭಗೊಂಡ ಮಳೆ ತಡರಾತ್ರಿವರೆಗೂ ಮುಂದುವರಿದಿದ್ದರಿಂದ ಸಾಯಿಲೇಔಟ್‌ ಪ್ರದೇಶ ಕೆರೆಯಂತಾಗಿದ್ದು 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯನ್ನುಂಟು ಮಾಡಿತ್ತು. ಗೃಹೋಪಯೋಗ ವಸ್ತುಗಳು ಸೇರಿದಂತೆ ಹಲವು ವಸ್ತುಗಳು ನೀರು ಪಾಲಾಗಿತ್ತು. ಮಾಹಿತಿ ತಿಳಿದ ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರು ಹೊರ ಹಾಕುವ ಕ್ರಮಕೈಗೊಂಡಿದ್ದು, ಹಾನಿಗೊಳಗಾದ ಮನೆಗಳು ಮತ್ತು ವಸ್ತುಗಳ ಪಟ್ಟಿಯನ್ನು ಮಾಡಿಕೊಂಡಿದ್ದು, ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ. ಆದರೆ, ಪ್ರತಿ ಭಾರಿ ಮಳೆ ಸುರಿದಾಗಲೂ ನೀರು ಇಡೀ ಬಡಾವಣೆಯನ್ನು ಸುತ್ತುವರಿಯುತ್ತಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ಕೂಡಲೇ ಸರ್ಕಾರ ಇಲ್ಲಿನ ನಿವಾಸಿಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸಬೇಕು ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದರಿಂದ ಇಂತಹ ಸಮಸ್ಯೆ ಎದುರಾಗುತ್ತಿದೆ. ಸ್ಥಳೀಯ ಶಾಸಕರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಹೋದವರು ಇದುವರೆಗೂ ಇತ್ತ ಮುಖ ಹಾಕಿಲ್ಲ. ಬಿಬಿಎಂಪಿ ಕೂಡಲೇ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಬಡಾವಣೆಗೆ ನೀರು ನುಗ್ಗದಂತೆ ತಡೆಯೊಡ್ಡಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಲಕ್ಷ್ಮೇನಾರಾಯಣ ಬಡಾವಣೆ ಮತ್ತು ಶ್ರೀರಾಂಪುರ 3ನೇ ಕ್ರಾಸ್‌ ರಾಮಮಂದಿರ ಸಮೀಪದಲ್ಲಿ ಮನೆಗಳಿಗೆ ನೀರು ನುಗ್ಗಿದ್ದರೂ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಕುಟುಂಬದವರೇ ಮನೆಗೆ ನುಗ್ಗಿದ ನೀರನ್ನು ಹೊರ ಹಾಕಿದ್ದಾರೆ.

ಶಿವಾನಂದ ವೃತ್ತ, ಹೆಬ್ಬಾಳ, ಮೇಖ್ರಿ ವೃತ್ತ, ಭೂಪಸಂದ್ರ ಮುಖ್ಯರಸ್ತೆ, ಮಹಾಲಕ್ಷ್ಮಿ ಲೇಔಟ್‌, ವಿಜಯ ನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವೆಡೆ ಅಂಡರ್‌ಪಾಸ್‌ಗೆ ನೀರು ನುಗ್ಗಿದ್ದು, ರಸ್ತೆಗಳಲ್ಲಿ ನೀರು ನಿಂತು ಕೆರೆಯಂತಾಗಿತ್ತು. ವಾಹನ ಸವಾರರ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು.

ಕರ್ನಾಟಕದಲ್ಲಿ ಮಳೆಯಬ್ಬರಕ್ಕೆ 11 ಬಲಿ: ಕೆಲವು ದಿನಗಳ ಬಿಡುವು ಬಳಿಕ ವರುಣನ ಆರ್ಭಟ

ಧರೆಗುರುಳಿದ ಮರಗಳು: ಆರ್‌.ಆರ್‌.ನಗರ ಐಡಿಯಲ್‌ ಸೈಟ್‌ ಎಫ್‌ಕ್ರಾಸ್‌, ನಾಗರಬಾವಿ 6ನೇ ಮೈನ್‌ 10ನೇ ಕ್ರಾಸ್‌, ಮಲ್ಲೇಶ್ವರದ ವಿಶಾಲ ಭವನ, ಬಸವನಗುಡಿಯ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪ ಬಿದ್ದ ಮರಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು. ಆದರೆ, ಬಳ್ಳಾರಿ ರಸ್ತೆಯ ಮೇಖ್ರಿ ವೃತ್ತ ಸಮೀಪದ ಸ್ಕೈವಾಕ್‌ ಬಳಿ ಮರವೊಂದು ಮುರಿದು ವಿದ್ಯುತ್‌ ತಂತಿ ಮತ್ತು ಕೇಬಲ್‌ ಸಮೇತ ರಸ್ತೆಗೆ ಅಡ್ಡ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟು ಮಾಡಿತ್ತು. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿರುತ್ತವೆ. ಮರ ಬಿದ್ದಿದ್ದರಿಂದ ರಾತ್ರಿ ಸುಮಾರು ಒಂದು ಗಂಟೆಗೂ ಅಧಿಕ ಸಮಯ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಸಂಚಾರಿ ಪೊಲೀಸರು ಬಿದ್ದ ಮರವನ್ನು ತೆರವುಗೊಳಿಸಿದ ನಂತರ ವಾಹನ ಸಂಚಾರ ಸುಗಮಗೊಂಡಿತು.

ಮಳೆಯಿಂದ ಹಾನಿಯಾದ ಮನೆಗಳಿಗೆ 2ನೇ ಬಾರಿ ಪರಿಹಾರವಿಲ್ಲ, ಸರಕಾರ ಆದೇಶ

ನಗರದಲ್ಲಿ ಮಂಗಳವಾರ ರಾತ್ರಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು ಅವಾಂತರ ಸೃಷ್ಟಿಸಿತ್ತು. ಬೆಳಗ್ಗಿನಿಂದಲೇ ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿತ್ತು. ಕೆಲವೆಡೆ ಸೂರ್ಯನ ಉರಿ ಬಿಸಿಲು ಕೂಡ ಇತ್ತಾದರೂ ಮಧ್ಯಾಹ್ನದ ಬಳಿಕ ದಟ್ಟಮೋಡ ಆವರಿಸಿತು. ಸಂಜೆ ಹೊತ್ತು ಮಳೆ ಸುರಿದಿದ್ದರಿಂದ ವಾಹನ ಸವಾರರು, ಬೀದಿಬದಿ ವ್ಯಾಪಾರಿಗಳು, ಪಾದಚಾರಿಗಳು ತೊಂದರೆ ಅನುಭವಿಸಬೇಕಾಯಿತು. ತಗ್ಗು ರಸ್ತೆಗಳು, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.