ಕರ್ನಾಟಕದಲ್ಲಿ ಮಳೆಯಬ್ಬರಕ್ಕೆ 11 ಬಲಿ: ಕೆಲವು ದಿನಗಳ ಬಿಡುವು ಬಳಿಕ ವರುಣನ ಆರ್ಭಟ

ಭಟ್ಕಳವೊಂದರಲ್ಲೇ 400ಕ್ಕೂ ಹೆಚ್ಚು ಸೇರಿ ರಾಜ್ಯಾದ್ಯಂತ 550ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತ 

11 Killed Due to Heavy Rain in Karnataka grg

ಬೆಂಗಳೂರು(ಆ.03): ಹಲವು ದಿನಗಳ ಬಿಡುವಿನ ಬಳಿಕ ರಾಜ್ಯದ 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮತ್ತೆ ಮಳೆ ಅಬ್ಬರಿಸಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮನೆಯೊಂದರ ಮೇಲೆ ಗುಡ್ಡಕುಸಿದು ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿಯಾಗಿದ್ದು ಸೇರಿ ರಾಜ್ಯದಲ್ಲಿ ಮಳೆ ಸಂಬಂಧಿ ಅನಾಹುತಕ್ಕೆ ಮಂಗಳವಾರ ಒಟ್ಟು 11 ಮಂದಿ ಮಂದಿ ಬಲಿಯಾಗಿದ್ದಾರೆ. ಭಟ್ಕಳವೊಂದರಲ್ಲೇ 400ಕ್ಕೂ ಹೆಚ್ಚು ಸೇರಿ ರಾಜ್ಯಾದ್ಯಂತ 550ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ, ಕೊಪ್ಪಳ, ಮಂಡ್ಯ, ಬಾಗಲಕೋಟೆ, ರಾಯಚೂರು, ಯಾದಗಿರಿ, ಕಲಬುರಗಿ, ಹಾವೇರಿ, ಹಾವೇರಿ, ಕೊಪ್ಪಳ, ಗದಗದಲ್ಲಿ ಸೋಮವಾರ ರಾತ್ರಿಯಿಂದೀಚೆಗೆ ಅಬ್ಬರದ ಮಳೆಯಾಗಿದ್ದರೆ, ಮೈಸೂರು, ತುಮಕೂರು, ರಾಮನಗರ, ಶಿವಮೊಗ್ಗ, ಧಾರವಾಡ ಜಿಲ್ಲೆಗಳಲ್ಲಿ ಕೆಲ ಗಂಟೆಗಳ ಕಾಲ ಉತ್ತಮ ಮಳೆ ಸುರಿದಿದೆ. ಭರ್ಜರಿ ಮಳೆಯಿಂದಾಗಿ ರಾಜ್ಯಾದ್ಯಂತ 30ಕ್ಕೂ ಹೆಚ್ಚು ಕೆರೆಗಳು ಕೋಡಿ ಬಿದ್ದಿದ್ದು, ಬೆಂಗಳೂರು-ಮೈಸೂರು, ಭಟ್ಕಳ-ಪುಣೆ ಹೆದ್ದಾರಿ ಸೇರಿ 18ಕ್ಕೂ ಹೆಚ್ಚಿನ ಕಡೆ ರಸ್ತೆಸಂಪರ್ಕ ಕಡಿತಗೊಂಡಿದೆ. ನೂರಾರು ಹೆಕ್ಟೇರ್‌ ರೈತರ ಹೊಲಗಳಿಗೆ ನೀರು ನುಗ್ಗಿ ಭಾರೀ ಹಾನಿಯಾಗಿದೆ.
ಮಳೆಯಬ್ಬರದ ಹಿನ್ನೆಲೆಯಲ್ಲಿ ಗದಗ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳು ಹಾಗೂ ಭಟ್ಕಳ, ಬೈಂದೂರು, ಕುಂದಾಪುರ ತಾಲೂಕು ಹಾಗೂ ಸುಬ್ರಹ್ಮಣ್ಯ ಭಾಗದಲ್ಲಿ ಶಾಲಾ-ಕಾಲೇಜುಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳವಾರ ರಜೆ ಘೋಷಿಸಲಾಗಿತ್ತು.

ವರುಣನ ಆರ್ಭಟಕ್ಕೆ ರಾಮನಗರ ತತ್ತರ: ಸಂಕಷ್ಟಕ್ಕೆ ಸಿಲುಕಿದ ರೈತರು

ಭಟ್ಕಳದಲ್ಲಿ ಮುಸಲಧಾರೆ: ಭಟ್ಕಳದಲ್ಲಿ ಭಾರೀ ಮಳೆಯಾಗಿದ್ದು, ತಾಲೂಕಿನಲ್ಲಿ ಹಳ್ಳ ಕೊಳ್ಳಗಳೆಲ್ಲ ತುಂಬಿ ಹರಿಯುತ್ತಿದ್ದು ಮಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ನಾಲ್ಕಾರು ಅಡಿ ನೀರು ನಿಂತಿದೆ. ರೈಲು ಹಳಿಯ ಮೇಲೆ ಹಳ್ಳ ಹರಿಯುತ್ತಿದ್ದುದರಿಂದ ರೈಲು ಸಂಚಾರ ಸ್ಥಗಿತವಾಗಿದೆ. 400 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡ ಹತ್ತಾರು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಈ ಮಧ್ಯೆ, ತಾಲೂಕಿನ ಮುಟ್ಟಳ್ಳಿಯಲ್ಲಿ ಭಾರೀ ಮಳೆಗೆ ಮುಂಜಾನೆ ಗೌರಮ್ಮಜ್ಜಿ ಕುಟುಂಬದ ಸ್ಲಾ್ಯಬ್‌ ಮನೆ ಮೇಲೆ ಗುಡ್ಡ ಕುಸಿದು ಬಿದ್ದು ಅವಶೇಷಗಳಡಿ ಸಿಲುಕಿ ಲಕ್ಷೀ ನಾಯ್ಕ (48), ಅನಂತ ನಾರಾಯಣ ನಾಯ್ಕ (32), ಲಕ್ಷ್ಮೀ ನಾರಾಯಣ ನಾಯ್ಕ (33), ಪ್ರವೀಣ ಬಾಲಕೃಷ್ಣ ನಾಯ್ಕ ಬಡೇಭಾಗ (19) ಮೃತಪಟ್ಟಿದ್ದಾರೆ.

ಮಂಡ್ಯ ನಗರ ತತ್ತರ: ರಾತ್ರಿಡಿಯೀ ಸುರಿದ ಮಳೆಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಕೆರೆಗಳ ಕೋಡಿ ಬಿದ್ದು, ನೂರಾರು ಎಕರೆ ಬೆಳೆ ಜಲಾವೃತಗೊಂಡಿದೆ. ಮಂಡ್ಯ ನಗರದ ಹಲವು ಕಾಲೊನಿಗಳಿಗೆ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗ​ಳೂ​ರು-ಮೈ​ಸೂ​ರು ರಾ​ಷ್ಟ್ರೀಯ ಹೆ​ದ್ದಾ​ರಿಗೆ ನೀರು ನು​ಗ್ಗಿ ಹಲವು ಗಂಟೆಗಳ ಕಾಲ ಸಂಚಾರ ಬಂದ್‌ ಆಗಿತ್ತು. ಕುದರಗುಂಡಿ ಗ್ರಾಮದ ಕೋಳಿ ಫಾರಂಗೆ ನೀರು ನುಗ್ಗಿ 4 ಸಾವಿರ ಕೋಳಿ ಮರಿಗಳು ಮೃತಪಟ್ಟಿವೆ.
ಇನ್ನು ಉಡುಪಿ ಜಿಲ್ಲೆಯಲ್ಲಿ ಉಳಿದೆಡೆ ಮಳೆಯಬ್ಬರ ಕಡಿಮೆ ಇದ್ದರೂ ಬೈಂದೂರು ಜಿಲ್ಲೆಯ ಶಿರೂರಿನಲ್ಲಿ ಮಾತ್ರ ಶಿರೂರು ನದಿ ತುಂಬಿ ಹರಿದು 25ಕ್ಕೂ ಹೆಚ್ಚು ಮನೆಗಳಿಗೆ, ಬಳ್ಳಾರಿಯಲ್ಲಿ ರಾಯರಾಳು ಗ್ರಾಮದ 30ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು, ಮನೆಯಲ್ಲಿದ್ದ ವಸ್ತುಗಳೆಲ್ಲ ನೀರು ಪಾಲಾಗಿವೆ. ಕಲಬುರಗಿಯಲ್ಲಿ ಆಳಂದ, ಕಲಬುರಗಿ, ಅಫಜಲ್ಪುರ, ಚಿಂಚೋಳಿ ತಾಲೂಕುಗಳಲ್ಲಿ ಮಳೆಯಿಂದ ಭಾರೀ ಅನಾಹುತ ಸೃಷ್ಟಿಯಾಗಿದೆ. ಆಳಂದ-ನಿರಗುಡಿ ಗ್ರಾಮದ ಸಂಪರ್ಕ ರಸ್ತೆಯ ಸೇತುವೆ ಭಾಗಶಃ ಕೊಚ್ಚಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

6 ಮಂದಿ ನೀರು ಪಾಲು: 

ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೆರೆ ದಾಟುವಾಗ ಹಾಗೂ ಮೀನುಹಿಡಿಯಲು ಹೋಗಿ ಸಂಭವಿಸಿದ ದುರಂತದಲ್ಲಿ ರಾಜ್ಯದಲ್ಲಿ ಆರು ಮಂದಿ ನೀರುಪಾಲಾಗಿದ್ದಾರೆ. ವಿಜಯನಗರ ಜಿಲ್ಲೆ ಗರಗ-ನಾಗಲಾಪುರದಲ್ಲಿ ಹಳ್ಳ ದಾಟುವಾಗ ರೈತ ಬೊಮ್ಮಪ್ಪ(55), ತುಮಕೂರು ಜಿಲ್ಲೆಯ ಶಿರಾದ ಚೆನ್ನನಕುಂಟೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹಳ್ಳದಾಟುವಾಗ ಶಿಕ್ಷಣ ಆರೀಫ್‌ ಉಲ್ಲಾ(55), ಬಳ್ಳಾರಿಯ ಸಂಡೂರು ತಾಲೂಕಿನ ಅಂಕಮನಾಳದಲ್ಲಿ ದ್ವಿಚಕ್ರವಾಹನದಲ್ಲಿ ಸೇತುವೆ ದಾಟುವಾಗ ಕೃಷ್ಣಕುಮಾರ್‌ ಮತ್ತು ಮೈಸೂರಿನ ಪಿರಿಯಾಪಟ್ಟಣದಲ್ಲಿ ಕೆಲ್ಲೂರು-ಹೊಸಕೋಟೆ ಸೇತುವೆ ಸಾಗುತ್ತಿದ್ದಾಗ ಕೆರೆ ಏರಿಮೇಲೆ ಬೈಕ್‌ನಿಂದ ಕೆಳಗೆ ಬಿದ್ದ ಹೆಲ್ಮೆಟ್‌ ಎತ್ತಿಕೊಳ್ಳಲು ಹೋಗಿ ಕಾರ್ತಿಕ್‌ (17) ನೀರುಪಾಲಾಗಿದ್ದಾರೆ. ಅದೇ ರೀತಿ ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ನಾಲೆಯಲ್ಲಿ ಮೀನು ಹಿಡಿಯಲು ಹೋದ ರಾಜಪ್ಪ ತಿಮ್ಮಯ್ಯ (45), ಪುತ್ರ ಮಹೇಶ್‌ (12) ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಇನ್ನು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೆಂಚನಕೆರೆಯಲ್ಲಿ ಮನೆ ಗೋಡೆ ಕುಸಿದು ಬಿದ್ದು ವೃದ್ಧೆ ಶಾಂತಮ್ಮ(65) ಸಾವಿಗೀಡಾಗಿದ್ದಾರೆ.

ಕೊಪ್ಪಳದಲ್ಲಿ ಧಾರಾಕಾರ ಮಳೆ: ಶಾಲೆ-ಕಾಲೇಜು, ಅಂಗನವಾಡಿಗಳಿಗೆ ರಜೆ!

ಕರಾವಳಿ, ಮಲೆನಾಡಿಗೆ 4 ದಿನ ರೆಡ್‌ ಅಲರ್ಟ್‌

ಬೆಂಗಳೂರು: ರಾಜ್ಯಾದ್ಯಂತ ಮುಂದಿನ ನಾಲ್ಕು ದಿನಗಳ ಕಾಲ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಮುಂದಿನ ಶನಿವಾರದವರೆಗೆ (ಆ. 6) ‘ರೆಡ್‌ ಅಲರ್ಟ್‌’ ಘೋಷಿಸಿದೆ. ಉಳಿದಂತೆ ಒಳನಾಡಿನ ಹಲವು ಜಿಲ್ಲೆಗಳಿಗೆ ‘ಆರೆಂಜ್‌’ ಮತ್ತು ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ.

ನೆರೆ ಸಂತ್ರಸ್ತರಿಗೆ ತ್ವರಿತ ನೆರವು: ಸಿಎಂ ಸೂಚನೆ

ಬೆಂಗಳೂರು: ರಾಜ್ಯದ ನೆರೆ ಸಂತ್ರಸ್ತರಿಗೆ ತಕ್ಷಣ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಹಾನಿಗೊಳಗಾಗಿರುವ ಮೀನುಗಾರರ ದೋಣಿಗಳ ದುರಸ್ತಿಗೆ ತಗಲುವ ವೆಚ್ಚವನ್ನು ಅಂದಾಜು ಮಾಡುವಂತೆಯೂ ಅವರು ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಸೂಚನೆ ನೀಡಿದ್ದಾರೆ.
 

Latest Videos
Follow Us:
Download App:
  • android
  • ios