ಮಂದಾರ್ತಿ 3 ನೇ ಮೇಳದ ಸಿ. ಸಾಧು ಕೊಠಾರಿ ನಿಧನ
ಚೌಕಿಮನೆಯಲ್ಲಿ ಸ್ವಲ್ಪ ವಿಶ್ರಾಂತಿ ಪಡೆದ ಬಳಿಕ ಎದೆನೋವು |ಮಂದಾರ್ತಿ 3 ನೇ ಮೇಳದ ಒತ್ತು ಎರಡನೇ ವೇಷಧಾರಿ ಸಿ. ಸಾಧು ಕೊಠಾರಿ ನಿಧನ
ಉಡುಪಿ(ಜ.05): ಮಂದಾರ್ತಿ 3 ನೇ ಮೇಳದ ಒತ್ತು ಎರಡನೇ ವೇಷಧಾರಿ ಸಿ. ಸಾಧು ಕೊಠಾರಿ (58 ವರ್ಷ) ಇಂದು (05-01-2021) ಮುಂಜಾನೆ 5 ಗಂಟೆಗೆ ದೈವಾಧೀನರಾದರು.
ಸೈಬರಕಟ್ಟೆ ಬಳಿ ಕಾಜ್ರಳ್ಳಿಯಲ್ಲಿ ಜರಗಿದ ಮಧುರಾ ಮಹೀಂದ್ರ ಪ್ರಸಂಗದಲ್ಲಿ ಮಾಗಧನ ಪಾತ್ರವನ್ನು ಸೊಗಸಾಗಿ ನಿರ್ವಹಿಸಿ ಚೌಕಿಮನೆಯಲ್ಲಿ ಸ್ವಲ್ಪ ವಿಶ್ರಾಂತಿ ಪಡೆದ ಬಳಿಕ ಎದೆನೋವು ಬಂದುದರಿಂದ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಹ ಕಲಾವಿದರು ವಾಹನದಲ್ಲಿ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಹಾರ್ಟ್ ಎಟ್ಯಾಕ್ ಆಗಿದೆ.
ಕೊಚ್ಚಿ-ಮಂಗಳೂರು ಗ್ಯಾಸ್ ಪೈಪ್ ಲೈನ್ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ
15ನೇ ವರ್ಷಕ್ಕೆ ಮೇಳ ಸೇರಿದ ಇವರು ಗೋಳಿಗರಡಿ, ಕಮಲಶಿಲೆ, ಅಮೃತೇಶ್ವರೀ, ಸಾಲಿಗ್ರಾಮ, ಸೌಕೂರು, ಹಾಲಾಡಿ ಮತ್ತು ದೀರ್ಘಕಾಲ ಮಂದಾರ್ತಿ ಮೇಳದಲ್ಲಿ ವೈವಿಧ್ಯಮಯ ವೇಷಗಳನ್ನು ಮಾಡಿ ಕಲಾ ಸೇವೆ ಗೈದಿರುತ್ತಾರೆ. ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದು, ಅಂತ್ಯಕ್ರಿಯೆಯನ್ನು ಇಂದು ಸಂಜೆ ಬಾರ್ಕೂರಿನ ಬಳಿ ಹೇರಾಡಿಯಲ್ಲಿ ನೆರೆವೇರಿಸಲಾಗುವುದು.
ಯಕ್ಷಗಾನ ಕಲಾರಂಗದಲ್ಲಿ ರೂ 1 ಲಕ್ಷ ಜೀವನ ಆನಂದ ವಿಮಾ ಯೋಜನೆಯನ್ನು ಮಾಡಿಕೊಂಡಿದ್ದು, ಯಕ್ಷನಿಧಿಯ ಎಲ್ಲಾ ಯೋಜನೆಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡ ಸರಳ ಸಜ್ಜನಿಕೆಯ ಕಲಾವಿದರಾಗಿದ್ದ ಇವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.