Asianet Suvarna News Asianet Suvarna News

ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಗೆ ಸದಾಶಿವಯ್ಯ ಒತ್ತಾಯ

ಕೇಂದ್ರ ಸರ್ಕಾರ ಘೋಷಿತ 11730 ರು. ಬೆಂಬಲ ಬೆಲೆಯಲ್ಲಿ ನಫೆಡ್ ಮೂಲಕ ಖರೀದಿಸಲು ಕೊಬ್ಬರಿ ಖರೀದಿ ಕೇಂದ್ರ ಕೂಡಲೇ ತಾಲೂಕು ಕೇಂದ್ರಗಳಲ್ಲಿ ತೆರೆಯಬೇಕೆಂದು ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿ ಹಾಗೂ ಬಿಜೆಪಿ ಮುಖಂಡ ಕೆ.ಎಸ್.ಸದಾಶಿವಯ್ಯಆಗ್ರಹಿಸಿದ್ದಾರೆ.

Sadashivayya insists on buying coconut at support price snr
Author
First Published Nov 24, 2023, 7:56 AM IST

  ತಿಪಟೂರು:  ಕೇಂದ್ರ ಸರ್ಕಾರ ಘೋಷಿತ 11730 ರು. ಬೆಂಬಲ ಬೆಲೆಯಲ್ಲಿ ನಫೆಡ್ ಮೂಲಕ ಖರೀದಿಸಲು ಕೊಬ್ಬರಿ ಖರೀದಿ ಕೇಂದ್ರ ಕೂಡಲೇ ತಾಲೂಕು ಕೇಂದ್ರಗಳಲ್ಲಿ ತೆರೆಯಬೇಕೆಂದು ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿ ಹಾಗೂ ಬಿಜೆಪಿ ಮುಖಂಡ ಕೆ.ಎಸ್.ಸದಾಶಿವಯ್ಯಆಗ್ರಹಿಸಿದ್ದಾರೆ.

ಕಳೆದ ವರ್ಷ ಕ್ವಿಂಟಾಲ್ ಕೊಬ್ಬರಿ ಬೆಲೆ 17 ಸಾವಿರವಿತ್ತು. ಆದರೆ, ಈಗ ಕೊಬ್ಬರಿ ಬೆಲೆ  8500 ಕ್ಕೆ ಇಳಿದಿದೆ. ಸರ್ಕಾರ 11730 ರು. ಬೆಂಬಲ ಘೋಷಿಸಿದ್ದರೂ ಮುಕ್ತ ಮಾರುಕಟ್ಟೆಯಲ್ಲಿ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಕೊಬ್ಬರಿ ಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಘೋಷಿತ ಬೆಂಬಲ ಬೆಲೆಗೂ ಕಡಿಮೆ ದರದಲ್ಲಿ ವರ್ತಕರು ಕೊಬ್ಬರಿ ಖರೀದಿಸುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿ ಶಾಸಕರು ಜಾಣ ಕುರುಡಾಗಿದ್ದಾರೆ. ಕಳೆದ ವರ್ಷ ಜಿಲ್ಲೆಯ ರೈತರು ಕೊಬ್ಬರಿಗೆ ಬೆಂಬಲ ಬೆಲೆ ಕೋರಿ ನಡೆಸಿದ ಪ್ರತಿಭಟನೆ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಮ್ಮ ಸರ್ಕಾರ ಬಂದರೆ ಕ್ವಿಂಟಾಲ್ ಕೊಬ್ಬರಿಗೆ15000 ರು. ಬೆಂಬಲ ಬೆಲೆ ನೀಡುವ ಘೋಷಣೆ ಮಾಡುವುದಾಗಿ ಹೇಳಿ ರೈತರಿಗೆ ಕೊಟ್ಟ ಮಾತನ್ನು ತಪ್ಪಿದ್ದಾರೆ.

ಸರ್ಕಾರ ಕೂಡಲೇ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಗೆ ಕೊಬ್ಬರಿ ಖರೀದಿ ಕೇಂದ್ರ ತೆರೆಯಬೇಕು. ಈ ಬಗ್ಗೆ ಬೆಳಗಾವಿಯಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾವನೆ ಮಾಡಿ ತೆಂಗು ಬೆಳೆಗಾರರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜೆಯೇಂದ್ರ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಿ

 ತಿಪಟೂರು: ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಕೇಂದ್ರ ಸರ್ಕಾರ ರು. 11750  ಬೆಂಬಲ ಬೆಲೆ ನೀಡಿದ್ದರೂ, ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ರು. 8 ಸಾವಿರಕ್ಕೆ ತೀವ್ರ ಕುಸಿತ ಕಂಡಿರುವುದರಿಂದ ಕೂಡಲೆ ಕೇಂದ್ರ ಸರ್ಕಾರ ನಫೆಡ್ ಖರೀದಿ ಕೇಂದ್ರ ತೆರೆಯುವ ಮೂಲಕ ಸಂಕಷ್ಟದಲ್ಲಿರುವ ರೈತರಿಂದ ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸಬೇಕೆಂದು ಕಾಂಗ್ರೆಸ್ ಸೇವಾ ದಳದ ರಾಜ್ಯ ಕಾರ್ಯದರ್ಶಿ ಮಾದೀಹಳ್ಳಿ ಉಮೇಶ್ ಒತ್ತಾಯಿಸಿದ್ದಾರೆ.

ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ, ಬೆಂಬಲ ಬೆಲೆಗಿಂತ ಕಡಿಮೆಯಾದ ತಕ್ಷಣ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನಫೆಡ್ ಮೂಲಕ ಖರೀದಿ ಕೇಂದ್ರ ತೆರೆದು ತಾನು ನೀಡಿರುವ ಬೆಂಬಲ ಬೆಲೆಗೆ ರೈತರಿಂದ ಕೊಬ್ಬರಿ ಖರೀದಿಸಬೇಕೆಂಬ ನಿಯಮವಿದೆ. ಆದರೆ, ಕಳೆದ ಒಂದು ವರ್ಷದಿಂದಲೂ ಕೊಬ್ಬರಿ ಬೆಲೆ ರು.೮೦೦೦ಕ್ಕೆ ತೀವ್ರ ಕುಸಿತ ಕಂಡು ಬೆಳೆಗಾರರು ಸಂಕಷ್ಟದಲ್ಲಿದ್ದರೂ ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸದಿರುವುದರಿಂದ ಬೆಳೆಗಾರರು ತೀವ್ರ ನಷ್ಟಕ್ಕೊಳಗಾಗಿದ್ದಾರೆ.

ಕೊಬ್ಬರಿ ಬೆಲೆ ತೀವ್ರ ಕುಸಿತ ಮನಗಂಡ ರಾಜ್ಯ ಸರ್ಕಾರ, ಕಳೆದ ವಿಧಾನಸಭಾ ಅಧಿವೇಶನದಲ್ಲಿ ನಫೆಡ್ ಮೂಲಕ ಬೆಂಬಲ ಬೆಲೆಗೆ ಕೊಬ್ಬರಿ ಮಾರುವ ರೈತರಿಗೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 1250  ರು. ಪ್ರೋತ್ಸಾಹ ಬೆಲೆ ನೀಡುವ ಘೋಷಣೆ ಮಾಡಿದೆಯಾದರೂ ನಫೆಡ್ ಖರೀದಿ ಕೇಂದ್ರಗಳು ಸಹ ಬಂದ್ ಆಗಿರುವುರಿಂದ ಕೊಬ್ಬರಿ ಬೆಳೆಗಾರರಿಗೆ ಈ ಪ್ರೋತ್ಸಾಹ ಬೆಲೆ ಸಿಗದೆ ತೀವ್ರ ಹತಾಶರಾಗಿದ್ದಾರೆ. ನಫೆಡ್ ಮೂಲಕ ರೈತರು ಕೊಬ್ಬರಿ ಮಾರಿದರೆ ಒಂದು ಕ್ವಿಂಟಾಲ್ ಕೊಬ್ಬರಿಗೆ ಬೆಂಬಲ ಬೆಲೆ ಹಾಗೂ ಪ್ರೋತ್ಸಾಹ ಬೆಲೆ ಎರಡೂ ಸೇರಿ ಒಟ್ಟು ಒಂದು ಕ್ವಿಂಟಾಲ್‌ಗೆ ರು. 13 ಸಾವಿರ ಬೆಲೆ ಸಿಗುತ್ತದೆ. ನಫೆಡ್ ಕೇಂದ್ರ ತೆರೆಯದ ಕಾರಣ ರೈತರು ಕೊಬ್ಬರಿಯನ್ನು ಕೇವಲ ರು. 8 ಸಾವಿರಕ್ಕೆ ಮಾರುವಂತಾಗಿದೆ. ಕೂಡಲೆ ರಾಜ್ಯದ ಸಂಸದರು ಕೊಬ್ಬರಿಯನ್ನು ಬೆಂಬಲ ಬೆಲೆಗೆ ಕೊಳ್ಳುವಂತೆ ಕೇಂದ್ರದ ಮೇಲೆ ಒತ್ತಡ ಹಾಕಿ ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ನೆರವಾಗಬೇಕೆಂದು ಮಾದೀಹಳ್ಳಿ ಉಮೇಶ್ ಒತ್ತಾಯಿಸಿದ್ದಾರೆ

Latest Videos
Follow Us:
Download App:
  • android
  • ios