ಕೆ.ಆರ್‌. ನಗರ (ಫೆ.02):  ತಾಲೂಕಿನ ನಾಮಧಾರಿ ಸಮಾಜದವರು 2ಎ ವರ್ಗಕ್ಕೆ ಸೇರುವುದನ್ನು 25 ವರ್ಷಗಳ ಹಿಂದೆ ಶಾಸಕರಾಗಿದ್ದವರು ತಪ್ಪಿಸಿದರು ಎಂದು ಶಾಸಕ ಸಾ.ರಾ. ಮಹೇಶ್‌ ನನ್ನ ವಿರುದ್ಧ ಆರೋಪ ಮಾಡಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

1994ರಲ್ಲಿ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡರು ತಾಲೂಕಿನ ನಾರಾಯಣಪುರ ಮತ್ತು ಕಗ್ಗೆರೆ ಗ್ರಾಮಗಳಿಗೆ ಎಸ್‌. ನಂಜಪ್ಪ ಅವರೊಡನೆ ಬಂದು ಚುನಾವಣಾ ಪ್ರಚಾರ ಮಾಡುವಾಗ ನಾಮಧಾರಿ ಸಮಾಜವನ್ನು 2ಎ ವರ್ಗಕ್ಕೆ ಸೇರುವಂತೆ ಮಾಡುತ್ತೇವೆಂದು ಭರವಸೆ ನೀಡಿ ಹೋಗಿದ್ದರು, ಆದರೆ ಈವರೆಗೆ ಯಾಕೆ ಆಕೆಲಸ ಮಾಡಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.

ಕುಮಾರಸ್ವಾಮಿ ಬಿಜೆಪಿಗೆ ರಗ್ಗನ್ನೇ ಹಾಸಿದ್ದಾರೆ: ತಿರುಗೇಟು ಕೊಟ್ಟ MLC ..

ಈಗ ಶಾಸಕ ಸಾ.ರಾ. ಮಹೇಶ್‌ ಅವರು ನಾಮಧಾರಿ ಸಮಾಜದ ಸಭೆಯಲ್ಲಿ ಅವರನ್ನು 2ಎ ಪ್ರವರ್ಗಕ್ಕೆ ಸೇರಿಸುವುದೇ ನನ್ನ ಜೀವನದ ಗುರಿ ಎಂದು ಹೇಳಿಕೊಂಡು ಆ ಸಮಾಜದ ಬಾಂಧವರನ್ನು ದಾರಿ ತಪ್ಪಿಸುತ್ತಿದ್ದು, ಇಂತಹ ಹಸಿ ಸುಳ್ಳು ಹೇಳುವುದನ್ನು ಬಿಡಬೇಕೆಂದು ಅವರು ಮಾರ್ಗದರ್ಶನ ಮಾಡಿದರು.

ದೇವೇಗೌಡರು ಪ್ರಧಾನಮಂತ್ರಿಗಳಾಗಿದ್ದಾಗ ಎಚ್‌.ಡಿ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಮತ್ತು ಸಾ.ರಾ. ಮಹೇಶ್‌ ಸಚಿವರಾಗಿದ್ದಾಗ ಆಗದ ಕೆಲಸ ಈಗ ಅವರಿಂದ ಆಗುತ್ತದೆಯೆ ಎಂದರಲ್ಲದೆ, ದಯಮಾಡಿ ನಾಮಧಾರಿ ಸಮಾಜದವರು ಇಂತಹ ಸುಳ್ಳನ್ನು ನಂಬಬೇಡಿ ಎಂದು ಮನವಿ ಮಾಡಿದರು.

ಯಾವುದೇ ಸಮಾಜ 2ಎ ಪ್ರವರ್ಗಕ್ಕೆ ಸೇರಬೇಕಾದರೆ ಆ ಸಮುದಾಯದವರು ಕಾನೂನಾತ್ಮಕವಾಗಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮುಂದೆ ಅರ್ಜಿ ಸಲ್ಲಿಸಿ ಮನವಿ ಮಾಡಿ ನಂತರ ಪ್ರಬಲ ವಾದ ಮಂಡಿಸಬೇಕೆ ಹೊರತು ರಾಜಕಾರಣಿಗಳಿಗೆ ಅರ್ಜಿ ಕೊಡುವ ಕೆಲಸದಿಂದಲ್ಲ ಎಂದು ಅವರು ಸ್ಪಷ್ಟಪಡಿಸಿದರು.

20 ವರ್ಷಗಳಿಂದ ಮಾಡದ ಕೆಲಸವನ್ನು ಈಗ ಮಾಡುತ್ತೇನೆ ಎಂದು ಹೇಳುತ್ತಿರುವ ಅವರು, ಇಷ್ಟುವರ್ಷ ಏನು ಮಾಡುತ್ತಿದ್ದರು ಎಂಬದನ್ನು ಸಮಾಜದ ಜನತೆ ಗಮನಿಸಬೇಕೆಂದ ಎಚ್‌.ವಿಶ್ವನಾಥ್‌ ಅವರ ಮಾತನ್ನು ಯಾರು ನಂಬಬಾರದು ಎಂದರು.

'ಬಿಜೆಪಿಯನ್ನು ಟೀಕಿಸುತ್ತಿರುವ ವಿಶ್ವನಾಥ್ ಯಾವ ಪಕ್ಷಕ್ಕೆ ಹೋಗ್ತಾರೆ'? .

ನಾಮಧಾರಿ ಸಮಾಜದ ಬಾಂಧವರಲ್ಲಿ ನನ್ನ ಮನವಿ ಏನೆಂದರೆ ಮುಂದೆ ನೀವುಗಳು ನಿಮ್ಮ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಿ ಎಂದು ರಾಜಕಾರಣಿಗಳ ಬಳಿ ಅರ್ಜಿ ಹಿಡಿದು ಹೋಗುವ ಬದಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮುಂದೆ ಅರ್ಜಿ ಸಲ್ಲಿಸಿ ಸಮರ್ಥವಾಗಿ ವಾದ ಮಂಡಿಸಿ ಎಂದು ಸಲಹೆ ನೀಡಿದರು.

ಜತೆಗೆ ಸುಳ್ಳು ಹೇಳಿಕೆ ನೀಡಿ ಇತರರ ಮೇಲೆ ಆರೋಪ ಹೊರಿಸುವ ಕೆಲಸವನ್ನು ಶಾಸಕರು ಬಿಡಬೇಕು ಎಂದು ಅವರು ಸಲಹೆ ನೀಡಿದರು. ಮೂಳೆ ತಜ್ಞ ಡಾ. ಮೆಹಬೂಬ್‌ಖಾನ್‌ ಇದ್ದರು.