ಬೆಂಗಳೂರು(ನ.27):  ಪ್ರಾಧಿಕಾರಕ್ಕೆ ಅಂಟಿರುವ ಕಳಂಕ ತೊಳೆದು ಒಂದು ವರ್ಷದೊಳಗೆ ಬಿಡಿಎ ಖಾತೆಯಲ್ಲಿ ಎರಡ್ಮೂರು ಸಾವಿರ ಕೋಟಿ ರು.ಗಳು ಇರುವಂತೆ ಆರ್ಥಿಕವಾಗಿ ಅಭಿವೃದ್ಧಿಪಡಿಸುವುದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನೂತನ ಅಧ್ಯಕ್ಷ ಎಸ್‌.ಎಸ್‌.ವಿಶ್ವನಾಥ್‌ ಹೇಳಿದ್ದಾರೆ. 

ಗುರುವಾರ ಬಿಡಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ವೈಭವದಿಂದ ಕೂಡಿದ್ದ ಸಂಸ್ಥೆ ಇದಾಗಿತ್ತು. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಪ್ರಗತಿಗಿಂತ ಭ್ರಷ್ಟಾಚಾರವೇ ಹೆಚ್ಚು ಸದ್ದು ಮಾಡುತ್ತಿದೆ. ಯಾವುದೇ ಭ್ರಷ್ಟಅಧಿಕಾರಿಗಳಿಗೂ ಮುಲಾಜು ಮಾಡುವುದಿಲ್ಲ. ತಮ್ಮ ಕೆಲಸದ ವೈಖರಿಯೇ ಬೇರೆಯದ್ದಾಗಿದ್ದು ನಾಳೆ ಆಗುವ ಕೆಲಸ ಇಂದೇ ಆಗಬೇಕು ಎಂಬುದು ತಮ್ಮ ಉದ್ದೇಶ ಎಂದರು.

ಕೆಲವು ಭ್ರಷ್ಟಅಧಿಕಾರಿಗಳಿಂದ ಪ್ರಾಧಿಕಾರಕ್ಕೆ ಕಪ್ಪು ಚುಕ್ಕೆ ಬಂದಿದೆ. ಅದನ್ನು ತೊಡೆದು ಹಾಕಲಾಗುವುದು. ಭ್ರಷ್ಟಾಚಾರ ಮಟ್ಟಹಾಕಿ ಬಿಡಿಎಗೆ ಹೊಸ ಕಾಯಕಲ್ಪ ನೀಡುತ್ತೇನೆ. ಈಗಾಗಲೇ ಬಿಡಿಎಗೆ ಹಣ ಪಾವತಿ ಮಾಡಿರುವ ಗ್ರಾಹಕರಿಗೆ ಅರ್ಕಾವತಿ, ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಮಾಡಬೇಕೆಂದು ಸುಪ್ರೀಂಕೋರ್ಟ್‌ ಸೂಚಿಸಿರುವ ಕಾರಣ ರೈತರ ಮನವೊಲಿಸಿ ಭೂಸ್ವಾಧೀನ ಮಾಡಿಕೊಳ್ಳಲಾಗುವುದು ಎಂದರು.

ಬಿಡಿಎ ಅಧ್ಯಕ್ಷರಾಗಿ ಇಂದು ಎಸ್ ಆರ್ ವಿಶ್ವನಾಥ್ ಅಧಿಕಾರ ಸ್ವೀಕಾರ

ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಬಾಕಿ ಉಳಿದಿರುವ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಎಲ್ಲ ರೀತಿಯ ಕ್ರಮ ಜರುಗಿಸಲಾಗುವುದು ಎಂದರು.

ಎಂಟಿಬಿಗೆ ಸಚಿವ ಸ್ಥಾನದ ಮೇಲೆ ಆಸೆ

ಎಂಟಿಬಿ ನಾಗರಾಜ್‌ ಬಿಡಿಎ ಅಧ್ಯಕ್ಷ ಸ್ಥಾನದ ಮೇಲಲ್ಲ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ತಾವು ಯಾವುದೇ ಸ್ಥಾನದ ಮೇಲೆ ಆಸೆ ಹೊಂದಿರಲಿಲ್ಲ. ಇದುವರೆಗೂ ಮಂತ್ರಿ ಸ್ಥಾನ ಆಗಲೀ, ನಿಗಮ ಮಂಡಳಿ ಸ್ಥಾನವನ್ನಾಗಲೀ ಕೇಳಿಲ್ಲ. ಮುಖ್ಯಮಂತ್ರಿಗಳೇ ಈ ಹುದ್ದೆ ಕೊಟ್ಟಿದ್ದಾರೆ ಎಂದು ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದರು.