ಬೆಂಗಳೂರು (ನ.26): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಧ್ಯಕ್ಷರಾಗಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಸ್.ಆರ್.ವಿಶ್ವನಾಥ್ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. 

ಬಯಸದೇ ಬಂದ ಈ ಭಾಗ್ಯಕ್ಕಾಗಿ ವಿಶ್ವನಾಥ್ ಮುಖ್ಯಮಂತ್ರಿ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ನಿಜ ಹೇಳಬೇಕು ಎಂದರೆ ಈ ಮಹತ್ವದ ಹುದ್ದೆಗೆ ವಿಶ್ವನಾಥ್, ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ಶೆಟ್ಟಿ ಪರ ಬ್ಯಾಟಿಂಗ್ ಮಾಡಿದ್ದರು. ನೋಡಿರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, 'ಇದು ಒಳ್ಳೆ ಹುದ್ದೆ, ನೀನೇ ನಿಭಾಯಿಸು' ಎಂದು ವಿಶ್ವನಾಥ್ ಅವರಿಗೇ ಹುದ್ದೆ ನೀಡಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿರುವ ವಿಶ್ವನಾಥ್, ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 
 
 

ಕರ್ನಾಟಕ ಸಂಪುಟ ವಿಸ್ತರಣೆಗೆ ಬಿಜೆಪಿ ಹೈ ಕಮಾಂಡಾ ಗ್ರೀನ್ ಸಿಗ್ನಲ್ ನೀಡಿದಿ. ಈ ಬೆನ್ನಲ್ಲೇ ಮೂರನೇ ಬಾರಿ ಯಲಹಂಕ ಶಾಸಕರಾಗಿ ಆಯ್ಕೆಯಾಗಿರುವ ವಿಶ್ವನಾಥ್ ಅವರಿಗೆ ಮುಖ್ಯಮಂತ್ರಿ ಬಿಡಿಎ ಮುಖ್ಯಸ್ಥ ಸ್ಥಾನವನ್ನು ನೀಡಿದ್ದಾರೆ. ಒಟ್ಟಿನಲ್ಲಿ ಇದು ಅವರಿಗೆ ಬಯಸದೇ ಬಂದ ಭಾಗ್ಯ.

ಅಸಮಾಧಾನದ ಹೊಗೆ:
ನಿಗಮ ಮಂಡಳಿಗಳ ನೇಮಕ ಬೆನ್ನಲ್ಲೇ ಅಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ಹೊಗೆ ಬುಗಿಲೆದ್ದಿದೆ. ಪಕ್ಷದ ನಿಷ್ಠಾವಂತ ಮುಖಂಡರು ಅಥವಾ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ನೀಡುವ ಬದಲು ಕೆಲವೇ ನಾಯಕರ ಹಿಂಬಾಲಕರಿಗೆ ಪ್ರಾಶಸ್ತ್ಯ ನೀಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರ ಗಮನಕ್ಕೆ ತರಲು ಹಲವು ಮುಖಂಡರು ಮುಂದಾಗಿದ್ದಾರೆ. 

ಪಕ್ಷದ ವತಿಯಿಂದ ಮುಖ್ಯಮಂತ್ರಿಗೆ ಕಳುಹಿಸಿದ ಪಟ್ಟಿಯಲ್ಲಿನ ಹೆಸರುಗಳಿಗೆ ಪ್ರಾಧಾನ್ಯತೆ ನೀಡಿಲ್ಲ. ಬೇರೆಯವರಿಗೆ ಮಣೆ ಹಾಕಲಾಗಿದೆ. ಪಕ್ಷಕ್ಕಾಗಿ ಹಲವು ದಶಕಗಳಿಂದ ದುಡಿದ ಕಾರ್ಯಕರ್ತರು ಹಾಗೂ ಮುಖಂಡರನ್ನು ನಿಗಮ ಮಂಡಳಿ ನೇಮಕಾತಿ ವೇಳೆ ನಿರ್ಲಕ್ಷಿಸಲಾಗಿದೆ, ಎನ್ನಲಾಗುತ್ತಿದೆ.