'ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ'
ಮಂಗಳೂರು ಗಲಭೆ: ನಿವೃತ್ತ ಹೈ ಜಡ್ಜ್‌ಗಳಿಂದ ತನಿಖೆ ನಡೆಯಲಿ| ಯಡಿಯೂರಪ್ಪನವರ ಮೂಗಿನ ಕೆಳಗಡೆ ಕೆಲಸ ಮಾಡುವವರು ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಿಲ್ಲ: ಎಸ್ ಆರ್ ಪಾಟೀಲ| ಸಂಶೋಧಕ ಚಿದಾನಂದ ಮೂರ್ತಿಗಳ ನಿಧನ ಹಿನ್ನೆಲೆಯಲ್ಲಿ ಕನ್ನಡ ಸಾರಸ್ವತ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ|
ಬಾಗಲಕೋಟೆ(ಜ.12): ಮಂಗಳೂರು ಗಲಭೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡಿರುವ ವಿಚಾರವನ್ನು ಬೆಂಬಲಿಸಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ, ಎಷ್ಟೇ ದೊಡ್ಡ ಮಟ್ಟದ ಅಧಿಕಾರಿಗಳಾಗಿದ್ದರೂ ಸಿಎಂ ಯಡಿಯೂರಪ್ಪನವರ ಮೂಗಿನ ಕೆಳಗಡೆ ಕೆಲಸ ಮಾಡುವವರು. ಹೀಗಾಗಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿದರೆ ಮಾತ್ರ ಈ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಗಲಭೆ ಪ್ರಕರಣದಲ್ಲಿ ಪೊಲೀಸರು ಫೈರಿಂಗ್ ಅವಶ್ಯಕತೆ ಇರಲಿಲ್ಲ ಅನಿಸುತ್ತೆ. ದೂರದರ್ಶನದಲ್ಲಿ ನೋಡಿದಾಗ ಅವರೆದುರು ಜನರು ಇಲ್ಲದಾಗ ಫೈರಿಂಗ್ ಮಾಡಿದ್ದಾರೆ. ನಾನು ವಿಪಕ್ಷ ಸ್ಥಾನದಲ್ಲಿದ್ದು ಮಂಗಳೂರಿನ ಜನರಿಗೆ ಶಾಂತಿ ಕಾಪಾಡಲು ಮನವಿ ಮಾಡುವುದು ಸೇರಿದಂತೆ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಹೋದರೆ ವಿಮಾನ ನಿಲ್ದಾಣದಿಂದಲೂ ನಮ್ಮನ್ನು ಹೊರ ಹೋಗಲು ಬಿಡಲಿಲ್ಲ. ನಾವು ಸಹ ಶಾಂತಿಗೆ ಭಂಗವಾಗದಂತೆ ನೋಡಿಕೊಳ್ಳುವಂತೆ ಹೇಳಲು ಹೋದರೆ ನಮಗೆ ನಿಜಾಂಶ ಗೊತ್ತಾದೀತು ಎನ್ನುವ ಕಾರಣಕ್ಕೆ ನಮ್ಮನ್ನು ಬಿಡಲಿಲ್ಲ. ಹೀಗಾಗಿ ನಮಗೀಗ ಅನ್ನಿಸುತ್ತೆ ನಮ್ಮನ್ನು ಬಿಡದಿರಲು ಹಿಂದೆ ಬಲವಾದ ಕಾರಣ ಇತ್ತು ಎಂಬುದು ಈಗ ಗೊತ್ತಾಗಿದೆ. ಕುಮಾರಸ್ವಾಮಿ ಅವರು ಮುಂದಿನ ಅಧಿವೇಶನದಲ್ಲಿ ಸದನ ಸಮಿತಿ ನೇಮಿಸಲು ಹೇಳಿದ್ದಾರೆ. ಈ ಬಗ್ಗೆ ಜಂಟಿ ಸದನ ಸಮಿತಿ ನೇಮಕವಾಗುವುದರ ಜೊತೆಗೆ ನ್ಯಾಯಾಂಗ ತನಿಖೆಯಾಗಬೇಕು ಎಂದರು.
ಲಿಂಗಾಯತರಿಗೆ ಮೀಸಲಾತಿ ಹೆಚ್ಚಲಿ:
ಲಿಂಗಾಯತ ಸಮುದಾಯದಲ್ಲಿ ಒಪ್ಪತ್ತಿನ ಊಟ ಇಲ್ಲದ ಕಡುಬಡವರೂ ಇದ್ದಾರೆ. ಯಾಕೆ ಲಿಂಗಾಯತ ಮೀಸಲಾತಿ ಹೆಚ್ಚಿಸಬಾರದು, ಲಿಂಗಾಯತರಿಗೆ ಶೇ.16 ರಷ್ಟು ಮೀಸಲಾತಿ ಕೊಡುವುದು ಸೂಕ್ತ. ನಾನು ಕೂಡ ನೂರಕ್ಕೆ ನೂರು ಬೆಂಬಲಿಸುತ್ತೇನೆ. ಹೊರಟ್ಟಿ ಸೇರಿದಂತೆ ಇತರೆ ಮುಖಂಡರ ಮೀಸಲಾತಿ ಹೆಚ್ಚಿಸುವ ವಿಚಾರವನ್ನು ಒಪ್ಪುತ್ತೇನೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತಂತೆ ಪಕ್ಷದಲ್ಲಿ ಭಿನ್ನಮತ ಕುರಿತು ಮಾತನಾಡಿದ ಅವರು, ಡಾ.ಜಿ.ಪರಮೇಶ್ವರ ಒಬ್ಬರನ್ನೇ ಕರೆದರೆ ಅದು ಇತರರಿಗೆ ಶಾಕ್ ಕೊಟ್ಟಂತಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯಕ್ಕೆ ತಮ್ಮ ಪ್ರತಿನಿಧಿಯನ್ನು ಕಳುಹಿಸಿದ್ದರು. ಅಂದಾಜು 60 ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅದಕ್ಕನುಗುಣವಾಗಿ ನಿರ್ಣಯ ಪ್ರಕಟಿಸುವುದು ಬಾಕಿ ಉಳಿದಿದೆ ಎಂದರು.
ಪರಮೇಶ್ವರ್ ತಮ್ಮ ನಿವಾಸದಲ್ಲಿ 18 ಜನ ಕಾಂಗ್ರೆಸ್ ಮುಖಂಡರ ಸಭೆ ಕರೆದಿದ್ದರು. ಆದರೆ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಅದರ ವರದಿ ಕಾಂಗ್ರೆಸ್ ರಾಜ್ಯ ಉಸ್ತುವಾರಿಗೆ ಕೊಟ್ಟಿದ್ದಾರೆ. ಸದ್ಯದಲ್ಲಿ ನಿರ್ಣಯ ಪ್ರಕಟವಾಗುವ ಸಾಧ್ಯತೆಯಿದೆ. ಕಾಂಗ್ರೆಸ್‌ನಲ್ಲಿ ನಾವು ಒಗ್ಗಟ್ಟಾಗಿದ್ದೇವೆ. ಭಿನ್ನಭಿಪ್ರಾಯವಿಲ್ಲ. ಕಾಂಗ್ರೆಸ್‌ನಲ್ಲಿ ಗುಂಪು, ಬಣ ಇಲ್ಲ. ನಾನೂ ಸಭೆಗೆ ಹೋಗಿದ್ದೆ. ಸಭೆಯಲ್ಲಿ ಯಾರೂ ಅಪಸ್ವರ ಎತ್ತಿಲ್ಲ. ಒಗ್ಗಟ್ಟಿಗೆ ಈ ಸಭೆ ಸಾಕ್ಷಿ ಆಗಿತ್ತು. ಈ ಮಧ್ಯೆ ಡಿಕೆಶಿ ತಮ್ಮ ವೈಯಕ್ತಿಕ ಕೆಲಸವಿದೆ ಎಂದು ಹೇಳಿ ಸಭೆಯಿಂದ ಹೊರ ಹೋಗಿದ್ದಾರೆ. ಅದಕ್ಕೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಯಾವುದಕ್ಕೂ ಲಾಬಿ ಮಾಡಿಲ್ಲ:
ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಪಕ್ಷದ ಸಂಘಟನೆ ದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪ್ರಮುಖ ಹುದ್ದೆ, ಅಪೇಕ್ಷವಿದ್ದವರು ಮನವಿ ಸಲ್ಲಿಸಿರುತ್ತಾರೆ. ನನ್ನ ಬದುಕಿನುದ್ದಕ್ಕೂ ಯಾವ ಸ್ಥಾನಕ್ಕೂ ನಾ ಲಾಬಿ-ಲೋಬಿ ಮಾಡಿದವನಲ್ಲ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತೆ ಅದನ್ನ ನಾನು ಶಿರಸಾವಹಿಸಿ ಪಾಲನೆ ಮಾಡಿದವ, ಪಕ್ಷದ ವರಿಷ್ಠರು ನಿರ್ಣಯ ಕೈಗೊಂಡು ಹೇಳಿದರೆ ನಾನು ನೂರಕ್ಕೆ ನೂರರಷ್ಟುನಿಷ್ಠೆ, ಬದ್ಧತೆಯಿಂದ ಕಾರ್ಯನಿರ್ವಹಿಸುವೆ ಎಂದರು.
ಮನಸ್ತಾಪವಿಲ್ಲ:
ಇತ್ತೀಚಿಗೆ ಎಸ್.ಆರ್.ಪಾಟೀಲ, ಸಿದ್ದರಾಮಯ್ಯರೊಂದಿಗೆ ಅಂತರ ಕಾಪಾಡಿಕೊಂಡಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ಬಾದಾಮಿಗೆ ಬಂದಾಗ ನಾನು ಹೋಗಿದ್ದೇನೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇಲ್ಲ. ಒಳ್ಳೆ ಸಂಬಂಧವಿದೆ. ಅಂತರ ಕಾಪಾಡಿಕೊಳ್ಳುತ್ತೇನೆ ಅನ್ನೋ ಭಾವನೆ ತಪ್ಪು. ನಾನು ಮೇಲ್ಮನೆ ಪ್ರತಿಪಕ್ಷದ ನಾಯಕ, ನನಗೂ ನನ್ನದೆಯಾದ ಕಾರ್ಯಕ್ರಮವಿರುತ್ತೆ. ಅವರ ಜೊತೆಗಿನ ಕಾರ್ಯಕ್ರಮವಿದ್ದಾಗ ಅವರ ಜೊತೆ ಭಾಗಿಯಾಗಿದ್ದೇನೆ ಎಂದು ಹೇಳಿದರು.
ಈ ಮಧ್ಯೆ ಸಂಶೋಧಕ ಚಿದಾನಂದ ಮೂರ್ತಿಗಳ ನಿಧನ ಹಿನ್ನೆಲೆಯಲ್ಲಿ ಕನ್ನಡ ಸಾರಸ್ವತ ಸಾಹಿತ್ಯ ಲೋಕಕ್ಕೆ ತುಂಬಲಾರದ ಹಾನಿಯಾಗಿದ್ದು, ಕನ್ನಡ ಶಾಸ್ತ್ರೀಯ ಭಾಷೆಯಾಗುವುದು ಸೇರಿದಂತೆ ವಚನ ಸಾಹಿತ್ಯ ಮತ್ತು ಹಸ್ತಪ್ರತಿಗೆ ಅವರ ಸೇವೆ ಅಪಾರವಾಗಿದೆ. ಅವರ ಅಗಲಿಕೆ ತೀವ್ರ ನೋವು ತಂದಿದೆ ಎಂದು ಹೇಳಿ ಅವರ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಎಸ್.ಆರ್.ಪಾಟೀಲ ಹೇಳಿದರು.