ಹುಬ್ಬಳ್ಳಿ(ಸೆ.26): ಗಾನ ಗಾರುಡಿಗ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೂ ಹುಬ್ಬಳ್ಳಿಗೂ ವಿಶೇಷ ನಂಟು ಇತ್ತು. ಎರಡು ವರ್ಷದ ಹಿಂದೆ ಆಗಮಿಸಿದ್ದ ಅವರು ಇಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದರು. ಅಲ್ಲದೆ ಇಲ್ಲಿ ತಮ್ಮ ನೇತ್ರ ಪರೀಕ್ಷೆಯನ್ನೂ ಮಾಡಿಸಿಕೊಂಡಿದ್ದರು.

ಇಲ್ಲಿನ ಪ್ರತಿಷ್ಠಿತ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸುವರ್ಣ ಸಂಭ್ರಮ ಹಾಗೂ ಎಂ.ಎಂ.ಜೋಶಿ ಅವರ 70 ವರ್ಷದ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಎರಡು ದಿನ(2018ರ ಜ. 26- 27) ಇಲ್ಲಿಯೇ ವಾಸ್ತವ್ಯ ಮಾಡಿದ್ದರು.

ಜ. 26ರಂದು ಕಾರ್ಯಕ್ರಮದ ನಿಮಿತ್ತ ಅವರು ನಡೆಸಿಕೊಟ್ಟಿದ್ದ ‘ಸಂಗೀತೋತ್ಸವ’ ಅಸ್ವಾದಿಸಿದ್ದ ಇಲ್ಲಿನ ಜನತೆ ಕುಣಿದು ಕುಪ್ಪಳಿಸಿದ್ದರು. ‘ವಂದೇ ಮಾತರಂ’ ದೇಶಭಕ್ತಿ ಗೀತೆ ಸೇರಿ ಹಲವು ಚಿತ್ರಗೀತೆಗಳನ್ನು ಜನರನ್ನು ರಂಜಿಸಿದ್ದರು.

ಎಸ್‌ಪಿಬಿ ಎಂಬ ಸ್ವರ ಮಾಂತ್ರಿಕನ 51 ದಿನಗಳ ಹೋರಾಟ ಹೀಗಿತ್ತು

ಕಣ್ಣಿನ ಪರೀಕ್ಷೆ:

ಮರುದಿನ ಎಂ.ಎಂ.ಜೋಶಿ ಆಸ್ಪತ್ರೆಯಲ್ಲಿ ಕಣ್ಣಿನ ತಪಾಸಣೆಯನ್ನೂ ಮಾಡಿಸಿಕೊಂಡಿದ್ದರು. ಕಣ್ಣಿನ ರಕ್ಷಣೆ ಕುರಿತು ವೈದ್ಯರಿಂದ ಸಲಹೆ ಪಡೆದಿದ್ದರು ಎಂದು ಸ್ಮರಿಸಿಕೊಳ್ಳುವ ಡಾ. ಶ್ರೀನಿವಾಸ ಜೋಶಿ, ನಮ್ಮ ತಂದೆಯವರ(ಎಂ.ಎಂ. ಜೋಶಿ) ಪ್ರತಿ ಜನ್ಮದಿನಕ್ಕೂ ಮರೆಯದೆ ಅವರು ಶುಭ ಕೋರುತ್ತಿದ್ದರು. ಅವರ ಜನ್ಮದಿನಕ್ಕೂ ನಾವು ಶುಭ ಹಾರೈಸುತ್ತಿದ್ದೆವು. ಅವರ ನಿಧನ ತೀವ್ರ ದುಃಖಕರ ಎಂದರು.

ಇನ್ನು ಗಂಗೂಬಾಯಿ ಹಾನಗಲ್‌ ಅವರ ಪುತ್ರ ಬಾಬುರಾವ್‌ ಹಾನಗಲ್‌, ಹುಬ್ಬಳ್ಳಿಗೆ ಎರಡು ವರ್ಷದ ಹಿಂದೆ ದೇಶಪಾಂಡೆ ನಗರದಲ್ಲಿರುವ ನಮ್ಮ ಮನೆಗೆ ಬಂದಿದ್ದರು. ಮನೆಯಲ್ಲಿ ಅಮ್ಮನವರ ಕಾರ್ಯಕ್ರಮದ ವೇಳೆ ಬಳಸಿದ ವಿವಿಧ ವಾದ್ಯಗಳ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿ ಸಂತೋಷ ಪಟ್ಟಿದ್ದರು. ಬೆಂಗಳೂರಿನಲ್ಲಿ ಅಮ್ಮನ ಹಲವು ಕಾರ್ಯಕ್ರಮಕ್ಕೆ ಅವರು ಆಗಮಿಸಿ ವೀಕ್ಷಿಸಿದ್ದರು. ಅವರ ಅಗಲಿಕೆ ಹಾನಗಲ್‌ ಕುಟುಂಬ ಸಂತಾಪ ವ್ಯಕ್ತಪಡಿಸುತ್ತದೆ ಎಂದರು.

ಬೆಂಗಳೂರು ಎಂದರೆ ಎಸ್‌ಪಿಬಿಗೆ ಅಚ್ಚುಮೆಚ್ಚು

ಹುಬ್ಬಳ್ಳಿಯಲ್ಲಿ ಎಸ್ಪಿಬಿ ಕೊನೆ ಮಾತು

ಜ. 26ರಂದು ಗಣರಾಜ್ಯೋತ್ಸವದಂದು ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಎಸ್ಪಿಬಿ, ನಾವೆಲ್ಲ ಭಾರತೀಯರು ಅದ್ಭುತವಾದ ಸಂಸ್ಕೃತಿ ಹೊಂದಿದ್ದೇವೆ. ಯಾವುದೇ ಒಂದು ಜಾತಿಗೆ ಸೀಮಿತವಾಗದೇ ಈ ಮಣ್ಣಿಗೆ ಸೇರಿದ ಮಕ್ಕಳು ನಾವಾಗಿದ್ದೇವೆ. ಬರೀ ಗಣರಾಜ್ಯೋತ್ಸವದಲ್ಲಿ ಮಾತ್ರವಲ್ಲ. ಸದಾ ನಾವು ಭಾರತೀಯರು ಎಂಬ ಭಾವನೆ ನಮ್ಮಲ್ಲಿರಬೇಕು ಎಂದಿದ್ದರು.