ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 94ನೇ ಹುಟ್ಟುಹಬ್ಬದ ಅಂಗವಾಗಿ ಸೊರಬದಲ್ಲಿ ಬಂಗಾರ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ಈ ವೇಳೆ ಮಾತನಾಡಿದ ಗಣ್ಯರು, ಬಂಗಾರಪ್ಪನವರ ಜನಪರ ಕಾಳಜಿ, ರಾಜಕೀಯ ಸಾಧನೆಗಳು ಮತ್ತು ಅವರು ರೂಪಿಸಿದ ಶಾಶ್ವತ ಯೋಜನೆಗಳನ್ನು ಸ್ಮರಿಸಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೊರಬ: ಎಸ್. ಬಂಗಾರಪ್ಪ ರಾಜ್ಯ ಕಂಡ ಅಪರೂಪದ ರಾಜಕಾರಣಿ. ಅಷ್ಟೇ ಅಲ್ಲ ಜನಸೇವೆಯ ಜನನಾಯಕ. ಹಾಗಾಗಿ ಅವರು ಯಾವುದೇ ಪಕ್ಷದಲ್ಲಿದ್ದರೂ ಆ ಪಕ್ಷದ ಉತ್ತುಂಗಕ್ಕಾಗಿ ಶ್ರಮಿಸುವ ಮೂಲಕ ಪಕ್ಷಾತೀತ ನಾಯಕರಾಗಿದ್ದರು ಎಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಹೇಳಿದರು.
ಬಂಗಾರಧಾಮದ ಆವರಣದಲ್ಲಿ ಎಸ್. ಬಂಗಾರಪ್ಪ ಫೌಂಡೇಶನ್ ಮತ್ತು ಎಸ್. ಬಂಗಾರಪ್ಪ ವಿಚಾರ ವೇದಿಕೆ ವತಿಯಿಂದ ಬಂಗಾರಪ್ಪ ಅವರ 94ನೇ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಮ್ಮಿಕೊಂಡಿದ್ದ ಬಂಗಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬಂಗಾರಪ್ಪ ಮಾಸ್ ಲೀಡರ್
ಬಂಗಾರಪ್ಪ ಒಬ್ಬ ಮಾಸ್ ಲೀಡರ್. ನೋಡಿದಾಕ್ಷಣ ಯುವಕರನ್ನು ಸೆಳೆಯುವ ಎಲ್ಲಾ ಲಕ್ಷಣ ಅವರಲ್ಲಿತ್ತು. ಯುವಕರಿಗೆ ಸ್ಫೂರ್ತಿ ನೀಡಿದ ಜತೆಗೆ ರಾಜಕೀಯ ಶಕ್ತಿ ತುಂಬಿದ್ದಾರೆ. ಅವರ ಗರಡಿಯಲ್ಲಿ ಬೆಳೆದವರು ಶಾಸಕರಾಗಿ, ಸಂಸದರಾಗಿ, ಮಂತ್ರಿಯಾಗಿ, ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದಾರೆ. ರಾಜ್ಯದಲ್ಲಿ ಅವರ ನೇತೃತ್ವದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 178 ಸ್ಥಾನಗಳನ್ನು ಮತ್ತು ಲೋಕಸಭಾ ಚುನಾವಣೆಯ 23ರಲ್ಲಿ 23 ಕ್ಷೇತ್ರವನ್ನು ಗೆದ್ದು ಕಾಂಗ್ರೆಸ್ ಪಕ್ಷವನ್ನು ಉತ್ತುಂಗಕ್ಕೇರಿಸಿದ ಕೀರ್ತಿ ಸಲ್ಲುತ್ತದೆ ಅವರ ಈ ದಾಖಲೆ ಅಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದರು.
ಬಂಗಾರಪ್ಪ ಅವರು ಅಧಿಕಾರ ಅನುಭವಿಸಿದ್ದು ಕೆಲವೆ ವರ್ಷಗಳು. ಆದರೆ, ಅವರ ಜನಪರ ಕಾಳಜಿ ಮತ್ತು ಬಡವರನ್ನು ಉನ್ನತ ಸ್ಥಾನಕ್ಕೆ ತರುವ ದೃಷ್ಟಿಯಿಂದ ಮುಖ್ಯಮಂತ್ರಿಯಾಗಿ ರೂಪಿಸಿದ ಯೋಜನೆಗಳು ಇಂದಿಗೂ ಶಾಶ್ವತವಾಗಿ ಉಳಿದಿವೆ. ಹಾಗಾಗಿ, ಅವರು ಜನಾಕರ್ಷಣೆ ಮತ್ತು ಸಾಮಾಜಿಕ ಕಾಳಜಿಯ ಶೋಷಿತ ವರ್ಗಗಳ ನಾಯಕರಾಗಿದ್ದಾರೆ ಎಂದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಂದೆಯ ಹಾದಿಯಲ್ಲೇ ಸಾಗುತ್ತಿದ್ದು, ಅವರೂ ಕೂಡಾ ಜನಪರ ಕಾಳಜಿ ಹೊಂದಿದ್ದಾರೆ. ಈ ಕಾರಣದಿಂದ ಮಧು ಬಂಗಾರಪ್ಪ ಭವಿಷ್ಯದ ನಾಯಕರಾಗಿ ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಅವರ ರಾಜಕೀಯ ಜೀವನ ಇನ್ನಷ್ಟು ಉಜ್ವಲವಾಗುವುದರಲ್ಲಿ ಸಂದೇಹವೇ ಇಲ್ಲ ಎಂದರು.
ಸಚಿವ ಡಾ. ಅಜಯ್ ಧರ್ಮಸಿಂಗ್ ಮಾತನಾಡಿ, ಅಧಿಕಾರ ದೊರೆತಾಗ ಜನರಿಗಾಗಿ ಮಾಡಿದ ಕೆಲಸವನ್ನು ಜನತೆ ಸದಾ ಸ್ಮರಿಸುತ್ತಾರೆ. ಈ ನಿಟ್ಟಿನಲ್ಲಿ ಮಾಜಿ ಸಿಎಂ ಎಸ್. ಬಂಗಾರಪ್ಪ, ರಾಜ್ಯದ ಜನತೆಗೆ ನೀಡಿದ ಕೊಡುಗೆ ಅಪಾರ ಎಂದರು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲನಾಯಕ, ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಮಾಜಿ ಶಾಸಕ ಮಹಿಮಾ ಪಟೇಲ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮೆಹರೂಜ್ ಖಾನ್ ಮೊದಲಾದವರು ಹಾಜರಿದ್ದರು.
ಬಂಗಾರ ಪ್ರಶಸ್ತಿ ಪ್ರದಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರೊ. ಜಯದೇವ ಜಿ.ಎಸ್. ಚಾಮರಾಜನಗರ, ನಟರಾಜ ಹುಳಿಯಾರ್ ತುಮಕೂರು, ಶೇಖ್ ಮಾಸ್ತರ್ ಕಲಬುರ್ಗಿ ಮತ್ತು ಬಿ.ಸಿ. ರಮೇಶ್ ಬೆಂಗಳೂರು ಅವರಿಗೆ ಬಂಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.







