ಬಡಪಾಯಿ ಸಾಯಿಬಣ್ಣ ಸಾವಿಗೆ ಹೊಣೆ ಯಾರು? ಮನೆ ಮಂದಿ ಕಣ್ಣೀರ ಕೋಡಿ ಇನ್ನೂ ನಿಂತಿಲ್ಲ

ಕಲಬುರಗಿ(ಸೆ.06): ಕಳೆದ 4 ದಿನಿದಂದ ವಾಂತಿ ಭೇದಿ ಉಲ್ಬಣಗೊಂಡಿರುವ ಕಮಲಾಪುರ ತಾಲೂಕಿನ ಗೊಬ್ಬುರವಾಡಿ ಗ್ರಾಮದಲ್ಲಿನ ಈ ಪಿಡುಗಿಗೆ ಇಲ್ಲಿನ ತುಕ್ಕು ಹಿಡಿದ ನೀರು ಪೂರೈಕೆ ಕೊಳವೆ ಜಾಲ ಕಾರಣವೆ. ಹೌದೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲೀನಾಥ ರಾವೂರ್‌ ಹಾಗೂ ಇತರರು ಹೇಳುತ್ತಿದ್ದಾರೆ. ಸುಮಾರು 2 ಸಾವಿರ ಜನಸಂಖ್ಯೆ ಇರುವ ಗೊಬ್ಬುರವಾಡಿಯಲ್ಲಿ ಅಶೋಕ ಸ್ವಾಮಿ ಮನೆ ಹತ್ತಿರವಿರುವ ಕೊಳವೆ ಬಾವಿಗೆ ಜೋಡಿಸಿರುವ ಪೈಪ್‌ಲೈನ್‌ ಎರಡೂವರೆ ದಶಕಗಳಷ್ಟು ಹಳೆಯದ್ದಾಗಿದೆ. ಕಳವೆ ಅಲ್ಲಲ್ಲಿ ತುಕ್ಕು ಹಿಡಿದಿದೆ. ಹೀಗಿದ್ದರೂ ಇದನ್ನು ಬದಲಿಸುವ ಕೆಲಸವಾಗಿಲ್ಲ. ಇದೀಗ ಇದೇ ನೀರು ಗ್ರಾಮದಲ್ಲಿ ಸರಬರಾಜು ಆಗುತ್ತದೆ. ಇದನ್ನೇ ಕುಡಿದಿರುವ ಊರವರು ಅಸ್ವಸ್ಥರಾಗಿದ್ದಾರೆ.

ಊರಿನ ಸತೀಶ ಮೈಸಲಗಿ ಮನೆಯಿಂದ ಹಿಟ್ಟಿನಗಿರಣಿವರೆಗಿನ 1 ಸಾವಿರ ಅಡಿವರೆಗೂ ಕಬ್ಬಿಣದ ಪೈಪ್‌ಲೈನ್‌ ಇದಾಗಿದ್ದು 25 ವರ್ಷದಿಂದ ನಿರ್ವಹಣೆಯನ್ನೇ ಕಂಡಿಲ್ಲ. ಹೀಗಾಗಿ ಈ ಪೈಪ್‌ಲೈನ್‌ ನೀರೇ ದೋಷಪೂರಿತವಾಗಿ ಊರವರನ್ನು ತಿಕ್ಕಿಮುಕ್ಕುತ್ತಿವೆ ಎಂದು ಗೊತ್ತಾಗಿದೆ.

KALABURAGI: ಫ್ಲೈ ಓವರ್‌ ಅಂದಾಜು ವೆಚ್ಚದಲ್ಲಿ ಏಕಾಏಕಿ ಏರಿಕೆ: ಪ್ರಿಯಾಂಕ್‌ ಖರ್ಗೆ

ಈ ಕುಡಿವ ನೀರಿನ ಬೋರ್‌ವೆಲ್‌ ಪಕ್ಕದಲ್ಲೇ ಬಟ್ಟೆತೊಳೆಯಲಾಗುತ್ತದೆ. ಇಂಗುಗುಂಡಿಯಿಂದ ಕೊಚ್ಚೆ ಸೇರಿಕೊಂಡಿದೆ. ಈ ಊರಿನ 270 ಮನೆಗಳ ಪೈಕಿ 150 ಮನೆಗಳಿಗೆ ಜಲ ಜೀವನ ಮಿಷನ್‌ ಯೋಜನೆಯಡಿ ನೀರು ಪೂರೈಕೆಯಾಗುತ್ತಿದೆ. ಆರೆ ಇದನ್ನು ಜನ ಕುಡಿಯಲು ಬಳಸೋದಿಲ್ಲ. ತುಕ್ಕು ಹಿಡಿದ ಕೊಳವೆ ಜಾಲ ತೆಗೆದು ಹಾಕಿ ಹೊಸತಾಗಿ ಪೈಪ್‌ಲೈನ್‌ ಅಳವಡಿಸಬೇಕಾಗಿದೆ. ಹೀಗಾದಲ್ಲಿ ಮಾತ್ರ ಗೊಬ್ಬುರವಾಡಿ ಸಮಸ್ಯೆಗೆ ಕಾಯಂ ಪರಿಹಾರ ದೊರಕಲಿದೆ. ವಾಂತಿ ಭೇದಿ ಇನ್ನೂ ಏರಿಕೆ ಹಂತದಲ್ಲಿಯೇ ಇದೆ. ಗ್ರಾಮದಲ್ಲಿಯೇ ಆರೋಗ್ಯ ಅಧಿಕಾರಿಗಳು ಬೀಡುಬಿಟ್ಟಿದ್ದು, ಅಸ್ವಸ್ಥರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವೆನಿಸಿದರೆ ಆಂಬ್ಯುಲನ್ಸ… ಮೂಲಕ ಜಿಲ್ಲಾಸ್ಪತ್ರೆಗೆ ಕಳಿಸಲಾಗುತ್ತಿದೆ.

ಸಾಯಿಬಣ್ಣ ಸಾವಿಗೆ ಹೊಣೆ ಯಾರು?:

ವಾಂತಿ ಭೇದಿ ಅದಾಗಲೇ ಗ್ರಾಮದ ವಯೋವೃದ್ಧ ಸೈಬಣ್ಣನ ಬಲಿ ಪಡೆದಿದೆ. ಸೈಬಣ್ಣ ಮನೆಯಲ್ಲಿ ಮೂವರಿಗೆ ತೊಂದರೆ ಕಾಡಿತ್ತು. ಇಬ್ಬರು ಗುಣಮುಖರಾಗಿ ಮನೆಗೆ ಮರಳಿದರೆ ಸೈಬಣ್ಣ ಸಾವನ್ನಪ್ಪಿದ್ದಾನೆ. ಮೃತ ಸಾಯಿಬಣ್ಣಾ ಚೆನ್ನಾಗಿಯೇ ಇದ್ದರು, ಆದ್ರೆ ಕೇವಲ ಎರಡು ದಿನಗಳಲ್ಲಿ ನಿತ್ರಾಣಗೊಂಡು ಮೃತಪಟ್ಟಿದ್ದಾರೆ, ಕಲುಷಿತ ನೀರಿನ ಸೇವನೆಯೇ ಸಾವಿಗೆ ಕಾರಣ. ಇದಕ್ಕೆ ಯಾರು ಹೊಣೆ ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಸದ್ಯಕ್ಕೆ ಪಕ್ಕದ ಮಹಾಗಾಂವ್‌ ಕ್ರಾಸ್‌ದಿಂದ ಫಿಲ್ಟರ್‌ ನೀರು ಗ್ರಾಮಕ್ಕೆ ಸರಬರಾಜು ಮಾಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದಷ್ಟುಬೇಗ ಗ್ರಾಮದಲ್ಲಿ ಆರ್‌ಓ ಪ್ಲ್ಯಾಂಟ್‌ ಕೂಡಾ ನಿರ್ಮಾಣ ಮಾಡಲಾಗುವುದು. ಶುಕ್ರವಾರ ಮೃತನಾದ ಸಾಯಿಬಣ್ಣ ಭಜಂತ್ರಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ವರದಿ ಬಂದ ನಂತರ ಸಾವಿಗೆ ಕಾರಣ ತಿಳಿದುಕೊಂಡು ಮುಂದಿನ ಯೋಜನೆ ರೂಪಿಸುವುದಾಗಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಬಸವರಾಜ ಮತ್ತಿಮೂಡ ತಿಳಿಸಿದ್ದಾರೆ.