ವಿಜಯಪುರ(ಜು.22):  ಕೊರೋನಾ ಸೋಂಕು ಶೀಘ್ರ ಪತ್ತೆ ಹಚ್ಚಲು ನೆರವಿಗಾಗಿ ಬಿಎಲ್‌ಡಿಇ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ನೂತನವಾದ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಮಂಗಳವಾರ ಲೋಕಾರ್ಪಣೆಗೊಂಡಿದೆ.

ವಿಧಾನ ಪರಿಷತ್‌ ಸದಸ್ಯ ಅರುಣ ಶಹಪುರ ಹಾಗೂ ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಬಿಎಲ್‌ಡಿಇ ಆಡಳಿತ ಮಂಡಳಿ ಸದಸ್ಯ ಹಾಗೂ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಚಾಲನೆ ನೀಡಿದರು. ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಮಾತನಾಡಿ, ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರು ಮತ್ತು ಶಂಕಿತ 150 ರೋಗಿಗಳನ್ನು ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಗುಣಮುಖರಾಗಿ ಮನೆಗೆ ಮರಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇಲ್ಲಿಯೇ ಪ್ರಯೋಗಾಲಯ ಆರಂಭವಾಗಿರುವುದರಿಂದ 24 ಗಂಟೆಗಳಲ್ಲಿ ವರದಿ ವೈದ್ಯರ ಕೈ ಸೇರಲಿದ್ದು, ಚಿಕಿತ್ಸೆಗೆ ಅನುಕೂಲವಾಗುತ್ತದೆ. ಅಲ್ಲದೇ ಈ ಪರೀಕ್ಷೆಗಾಗಿ ಸರ್ಕಾರ ನಿಗದಿಪಡಿಸಿದ 4500 ರೋಗಿಗಳು ಪಾವತಿಸಬೇಕು ಎಂದು ಮಾಹಿತಿ ನೀಡಿದರು.

ವಿಜಯಪುರ: ಜ್ವರಪೀಡಿತ ಪತಿ ಜತೆ 2 ಗಂಟೆ ಆ್ಯಂಬುಲೆನ್ಸ್‌ಗೆ ಕಾದ ಪತ್ನಿ..!

ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ, ಉಪಕುಲಪತಿ ಡಾ. ಎಂ.ಎಸ್‌. ಬಿರಾದಾರ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಡಾ. ವಿಜಯ ವಾರದ, ಡಾ. ಅರುಣ ಇನಾಮದಾರ, ಡಾ. ವಿದ್ಯಾ ಪಾಟೀಲ, ಡಾ. ಸುನೀಲ ಬಿರಾದಾರ, ಮೈಕ್ರೋಬಯಾಲಾಜಿ ಡಾ. ಅಪರ್ಣಾ ತಕ್ಪರೆ, ಡಾ.ಪ್ರವೀಣ ಶಹಾಪುರ, ಡಾ. ಸ್ಮೀತಾ ಬಗಲಿ, ವೈದ್ಯಾಧಿಕಾರಿಗಳಾದ ಡಾ. ಗುಂಡಪ್ಪ, ಡಾ. ಮಲ್ಲನಗೌಡ ಬಿರಾದಾರ ಅನೇ​ಕ​ರಿ​ದ್ದರು.