ಆಲಮೇಲ(ಜು.20): ಮಿತಿ ಮೀರುತ್ತಿರುವ ಕೊರೋನಾ ವೈರಸ್‌ಗೆ ಜನಸಾಮಾನ್ಯರು ನರಳಾಡುವಂತಾಗಿದೆ. ಅದರಂತೆ ರೋಗಿಯೊಬ್ಬನನ್ನು ಆಸ್ಪತ್ರೆಗೆ ಸೇರಿಸಲು ಆತನ ಪತ್ನಿ ಸತತ ಎರಡು ಗಂಟೆಗಳ ಕಾಲ ರಸ್ತೆಯಲ್ಲಿಯೇ ಕುಳಿತ ಘಟನೆ ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ಭಾನುವಾರ ನಡೆದಿದೆ.

"

ಆಲಮೇಲ ತಾಲೂಕಿನ ಕುಬತ್ತಳ್ಳಿ ಗ್ರಾಮದ ಶಂಕರ ಜಂಜಂಗಿ ಎಂಬ ವ್ಯಕ್ತಿಗೆ ಎರಡು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಭಾನುವಾರ ಪತ್ನಿ ಶೋಭಾ ಆಲಮೇಲ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ವಿಪರೀತ ಜ್ವರ ಇದ್ದ ಕಾರಣ ಇಲ್ಲಿನ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಬಡವರಾದ ಅವರು ಖಾಸಗಿ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕಿದ್ದಾರೆ. ನಂತರ ಮುಂದೇನು ಮಾಡಬೇಕು ಎಂದು ತೋಚದೆ ರಸ್ತೆಯಲ್ಲಿಯೇ ಕುಳಿತುಕೊಂಡಿದ್ದಾರೆ.

ಇದೇನು ಕ್ವಾರಂಟೈನ್ ಕೇಂದ್ರವೇ, ಕಸದ ತೊಟ್ಟಿಯೇ! ಯಪ್ಪಾ ಗಬ್ಬು

ನಂತರ ಸ್ಥಳೀಯರು ವಿಷಯ ತಿಳಿದು ಕನ್ನಡಪ್ರಭಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ನಂತರ ಈ ವಿಷಯವನ್ನು ಸಿಂದಗಿ ತಹಸೀಲ್ದಾರ ಸಂಜುಕುಮಾರ ದಾಸರ, ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಯಿತು. ನಂತರ ಈ ವಿಚಾರ ಕನ್ನಡಪ್ರಭ ಸಹೋದರ ಸಂಸ್ಥೆ ಸುವರ್ಣ ಸುದ್ದಿ ವಾಹಿನಿಯಲ್ಲಿ ಪ್ರಸಾರಗೊಂಡಿತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಕೂಡಲೇ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿದರು. ನಂತರ ಆ್ಯಂಬುಲೆನ್ಸ್‌ನಲ್ಲಿಯೇ ರೋಗಿಯನ್ನು ಸಿಂದಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.

ಜನರ ಆಕ್ರೋಶ:

ಸುಮಾರು 2 ಗಂಟೆಯ ನಂತರ ಆ್ಯಂಬುಲೆನ್ಸ್‌ ಬಂದರೂ ನಾವು ಕರೆದುಕೊಂಡು ಹೋಗಲ್ಲ ಎಂದು 108 ಆ್ಯಂಬುಲೆನ್ಸ್‌ ಸಿಬ್ಬಂದಿ ತಗಾದೆ ತೆಗೆದರು. ನಂತರ ಸ್ಥಳದಲ್ಲಿ ಜಮಾಯಿಸಿದ ಜನರು ಆಕ್ರೋಶ ವ್ಯಕ್ತಪಡಿಸಿ ವ್ಯಕ್ತಿಗೆ ಜ್ವರ ಬಂದಿವೆ ಇನ್ನೂ ಏನು ಎಂಬುವುದೇ ಗೊತ್ತಿಲ್ಲ. ನೀವು ಹೀಗೆ ನಿರ್ಲಕ್ಷ ತೋರಿಸಬೇಡಿ ಎಂದಾಗ ಸಿಬ್ಬಂದಿ ರೋಗಿಯನ್ನು ಕರೆದುಕೊಂಡು ಹೋದರು.

ರೋಗಿ ಸುಮಾರು 2 ಗಂಟೆಗಳ ಕಾಲ ಪತ್ನಿಯೊಂದಿಗೆ ಕಾದು ಕುಳಿತ್ತಿದ್ದರು. ಯಾವ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಾರದಿದ್ದಾಗ ನಾವು ಕನ್ನಡಪ್ರಭ ವರದಿಗಾರಿಗೆ ಮಾಹಿತಿ ನೀಡಿದೆವು. ನಂತರ ವಿಷಯ ಎಲ್ಲರಿಗೂ ತಿಳಿಯುತ್ತಿದ್ದಂತೆ ಅಧಿಕಾರಿಗಳು ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿದರು ಎಂದು ಶಶಿಧರ ನಾಯ್ಕೋಡಿ ಅವರು ಹೇಳಿದ್ದಾರೆ.