ಹಾಸನ(ಏ.04): ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ನಾಮ್‌ಕೇ ವಾಸ್ತೆ ಸಚಿವ. ಅವರಿಗೆ ಯಾವ ಅಧಿಕಾರವೂ ಇಲ್ಲ. ಹಿರಿಯರಾದರೂ ಅವರ ಇಲಾಖೆಯಲ್ಲೇ ಅವರ ಮಾತು ನಡೆಯಲ್ಲ. ನಾನಾಗಿದ್ದರೆ ಒಂದು ಸೆಕೆಂಡೂ ಸಚಿವನಾಗಿರುತ್ತಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನ ಜುಂಬೂರಿನಲ್ಲಿ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಹಾಗೂ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ವಿರುದ್ಧ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅದರಲ್ಲೇ ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಅವರ ಪುತ್ರನ ಸರ್ಕಾರ ಇದೆ ಎಂಬುದು ಗೊತ್ತಾಗುತ್ತದೆ. ನಾನಾಗಿದ್ದರೆ ಒಂದು ಸೆಕೆಂಡ್‌ ಕೂಡ ಸಚಿವನಾಗಿರುತ್ತಿರಲಿಲ್ಲ, ರಾಜೀನಾಮೆ ಬಿಸಾಕುತ್ತಿದ್ದೆ. ರಾಜಕೀಯ ಜೀವನದಲ್ಲಿ ಇನ್ನೊಬ್ಬರಿಗೆ ಗೊಡ್ಡು ಸಲಾಂ ಹೊಡೆದು ರಾಜಕೀಯ ಮಾಡಲ್ಲ, 40 ವರ್ಷಗಳ ರಾಜಕೀಯ ಜೀವನದಲ್ಲಿ ಹೀಗೇ ಇದ್ದೇನೆ, ಮುಂದೆಯೂ ಇರ್ತೇನೆ. ಯಾರಿಗೂ ಜಗ್ಗಲ್ಲ, ಬಗ್ಗಲ್ಲವೆಂದು ಟಾಂಗ್‌ ನೀಡಿದರು ಸಿದ್ದರಾಮಯ್ಯ.

'ಈಶ್ವರಪ್ಪರಂತಹ ಹಿಂದುಳಿದ ವರ್ಗಗಳ ನಾಯಕರನ್ನು ಮುಗಿಸಲು ಯಡಿಯೂರಪ್ಪ ಸ್ಕೆಚ್'

ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನೇ ದಿವಾಳಿ ಮಾಡಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಇದೀಗ ಹಣದ ಮೂಲಕ ಉಪ ಚುನಾವಣೆಗಳನ್ನು ಗೆಲ್ಲಲು ಹೊರಟಿದ್ದಾರೆ ಎಂದು ಕಿಡಿಕಾರಿದ ಅವರು, ಬಿಜೆಪಿಯಲ್ಲಿ ಒಳಬೇಗುದಿ ಆರಂಭವಾಗಿದೆ. ಈ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂದರು.

ಜನಪ್ರಿಯ ಕಾರ್ಯಕ್ರಮ ನೀಡಿದ್ದ ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಎಲ್ಲರೂ ಸೇರಿ ನನ್ನನ್ನು ಸೋಲಿಸಿದರು. ಚಾಮುಂಡೇಶ್ವರಿ ಕ್ಷೇತ್ರದ ಜನ ನಾನು ನೀಡಿದ ಅಕ್ಕಿ ತಿಂದು ಮತ ನೀಡಲಿಲ್ಲ ಎಂದು ಇದೇ ವೇಳೆ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.