Asianet Suvarna News Asianet Suvarna News

ಚನ್ನಪಟ್ಟಣದ ಅಡ್ವಾಣಿ ಎಂದು ಖ್ಯಾತರಾಗಿದ್ದ ರಾಮಚಂದ್ರ ನಿಧನ

ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ಧುರೀಣರಾದ ಸುಷ್ಮಾ ಸ್ವರಾಜ್, ಮುರಳಿ ಮನೋಹರ ಜೋಷಿ ಹಾಗೂ ದೆಹಲಿಯ ಅನೇಕ ನಾಯಕರು ಚನ್ನಪಟ್ಟಣಕ್ಕೆ ಭೇಟಿ ನೀಡಿದಾಗ ಅವರ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡಿದ ಕೀರ್ತಿಗೆ ಪಾತ್ರರಾಗಿದ್ದರು. ರಾಮಚಂದ್ರ ಅವರ ಅಗಲಿಕೆಯಿಂದ ಆರ್‌ಎಸ್‌ಎಸ್‌ನ ಬಲಿಷ್ಠ ಕೊಂಡಿಯೊಂದು ಕಳಚಿದಂತಾಗಿದೆ. ತಾಲೂಕಿನ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

RSS Senior Organizer D Ramachandra Passed Away at Channapatna in Ramanagara grg
Author
First Published Apr 6, 2024, 8:02 AM IST

ಚನ್ನಪಟ್ಟಣ(ಏ.06):  ಚನ್ನಪಟ್ಟಣದ ಲಾಲ್ ಕೃಷ್ಣ ಅಡ್ವಾಣಿ ಎಂದೇ ಖ್ಯಾತರಾಗಿದ್ದ ಆರ್‌ಎಸ್‌ಎಸ್ ಹಿರಿಯ ಸಂಚಾಲಕ ಡಿ.ರಾಮಚಂದ್ರ(90) ವಯೋಸಹಜ ಕಾಯಿಲೆಯಿಂದ ಶುಕ್ರವಾರ ನಿಧನರಾದರು. ಮೃತರು ಪತ್ನಿ ಸುಶೀಲಮ್ಮ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕಾಲಿಕೆರೆ ಮನೆತನದವರೆಂದೇ ಹೆಸರು ಪಡೆದಿದ್ದ ರಾಮಚಂದ್ರ ಅವರು 1ನೇ ಮಾರ್ಚ್‌ 1935ರಲ್ಲಿ ತಾಲೂಕಿನ ಕೋಡಂಬಳ್ಳಿ ಬಳಿಯ ಕಾಲಿಕೆರೆ ಗ್ರಾಮದಲ್ಲಿ ಜನಿಸಿದ್ದರು. ಅನೇಕ ಸಂಘ ಸಂಸ್ಥೆಗಳ ಮುಖಾಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಕರಸೇವೆಯಲ್ಲಿ ಭಾಗಿ:ಹಿಂದಿನ ಪುರಸಭೆ ಸದಸ್ಯರಾಗಿ ರಾಮಚಂದ್ರ ಕಾರ್ಯನಿರ್ವಹಿಸಿದ್ದರು. ಕುವೆಂಪು ಕಾಲೇಜು ಆಡಳಿತ ಮಂಡಳಿಯ ಸದಸ್ಯರಾಗಿ ಕರ್ತವ್ಯ ಸಹ ಕರ್ತವ್ಯ ನಿರ್ವಹಿಸಿದ್ದ ಅವರು, ಬಹುಭಾಷಾ ಪಂಡಿತರು ಎಂಬ ಹಿರಿಮೆಗೆ ಪಾತ್ರರಾಗಿದ್ದರು. ರಾಮಚಂದ್ರ ಅವರು 1992ರ ರಾಮಜನ್ಮಭೂಮಿ ನಿರ್ಮಾಣ ಸಮಿತಿಯಲ್ಲಿ ಸಾದ್ವಿ ರುತಂಬರ ಜತೆ ಕರಸೇವೆ ಸತ್ಕಾರ್ಯದಲ್ಲಿ ತೊಡಗಿಸಿಕೊಂಡವರು. ಜಮ್ಮುವಿನ ಲಾಲ್ ಚೌಕ್‌ನಲ್ಲಿ ನಡೆದ ಏಕತಾ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಜೊತೆಯಲ್ಲಿ ಕೆಲಸ ಮಾಡಿದ್ದರು.

ಚಿತ್ರನಟ, ರಂಗಭೂಮಿ ಕಲಾವಿದ ಯೇಸುಪ್ರಕಾಶ್ ಕಲ್ಲುಕೊಪ್ಪ ವಿಧಿವಶ!

1967ರ ವಿಧಾನಸಭಾ ಚುನಾವಣೆಗೆ ಚನ್ನಪಟ್ಟಣ ಕ್ಷೇತ್ರದ ಜನಸಂಘದಿಂದ ಸ್ಪರ್ಧಿಸಿದ್ದರು. 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕೆಲವು ದಿನಗಳವರೆಗೆ ಭೂಗತರಾಗಿದ್ದು ನಂತರ ಬೆಂಗಳೂರಿನಲ್ಲಿ ಸೆರೆಮನೆ ವಾಸ ಅನುಭವಿಸಿದ್ದರು. ಚನ್ನಪಟ್ಟಣದಲ್ಲಿ ಮುದ್ರಣಾಲಯ ಕೊರತೆ ಇದ್ದಾಗ ಅಯ್ಯಪ್ಪಸ್ವಾಮಿ ಮುದ್ರಣಾಲಯ ತೆರೆದಿದ್ದರು. ಪ್ರತಿಯೊಬ್ಬ ಪೊಲೀಸರು ಓದಲೇಬೇಕಾದಂತಹ ಪುಸ್ತಕ ಪೊಲೀಸ್ ಕೈಪಿಡಿ ಬರೆದ ಹೆಗ್ಗಳಿಕೆ ಇವರದು.
ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ಧುರೀಣರಾದ ಸುಷ್ಮಾ ಸ್ವರಾಜ್, ಮುರಳಿ ಮನೋಹರ ಜೋಷಿ ಹಾಗೂ ದೆಹಲಿಯ ಅನೇಕ ನಾಯಕರು ಚನ್ನಪಟ್ಟಣಕ್ಕೆ ಭೇಟಿ ನೀಡಿದಾಗ ಅವರ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡಿದ ಕೀರ್ತಿಗೆ ಪಾತ್ರರಾಗಿದ್ದರು. ರಾಮಚಂದ್ರ ಅವರ ಅಗಲಿಕೆಯಿಂದ ಆರ್‌ಎಸ್‌ಎಸ್‌ನ ಬಲಿಷ್ಠ ಕೊಂಡಿಯೊಂದು ಕಳಚಿದಂತಾಗಿದೆ. ತಾಲೂಕಿನ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ದೇಹದಾನದ ಸಾರ್ಥಕತೆ

ಡಿ.ರಾಮಚಂದ್ರ ಅವರು ವೈದ್ಯಕೀಯ ಶಿಕ್ಷಣಕ್ಕಾಗಿ ತಮ್ಮ ದೇಹವನ್ನು ದಾನ ಮಾಡಿದ್ದರು. 2001ರಲ್ಲಿ ಭಾರತ ವಿಕಾಸ ಪರಿಷದ್‌ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಈ ಕುರಿತು ಘೋಷಣೆ ಮಾಡಿದ್ದರು. ದೇಹದಾನ ಮಾಡಿದ್ದ ಕಾರಣ ಅಂತ್ಯ ಸಂಸ್ಕಾರ ನಡೆಯಲಿಲ್ಲ. ಡಿ.ರಾಮಚಂದ್ರ ಅವರ ಕುಟುಂಬದ ಸಹಕಾರದೊಂದಿಗೆ ವೈದ್ಯಕೀಯ ಸಂಸ್ಥೆಯವರು ಮೃತ ದೇಹವನ್ನು ಕೊಂಡೊಯ್ದರು. ಡಿ.ರಾಮಚಂದ್ರ ಅವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದದ್ದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಯಿತು.

Follow Us:
Download App:
  • android
  • ios