ಬೆಂಗಳೂರಿನ ಕಂಟೋನ್ಮೆಂಟ್‌ ರೈಲ್ವೇ ನಿಲ್ದಾಣದ ಬಳಿಯ 8.61 ಎಕರೆ ಪ್ರದೇಶದಲ್ಲಿರುವ 371 ಮರಗಳನ್ನು ಕಡಿಯದಂತೆ ಹೈಕೋರ್ಟ್‌ ಕಟ್ಟುನಿಟ್ಟಿನ ಆದೇಶ ನೀಡಿದೆ. ವಾಣಿಜ್ಯ ಬಳಕೆಗಾಗಿ ಈ ಜಾಗವನ್ನು ಗುತ್ತಿಗೆಗೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿ ಮರ ಕಡಿಯಬಾರದು ಎಂದಿದೆ.

ಬೆಂಗಳೂರು: ಬೆಂಗಳೂರು ನಗರದ ಕಂಟೋನ್ಮೆಂಟ್‌ ರೈಲ್ವೇ ನಿಲ್ದಾಣದ ಬಳಿಯ ಸುಮಾರು 8.61 ಎಕರೆ ಪ್ರದೇಶದಲ್ಲಿ ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ಯಾವುದೇ ಮರ ಕತ್ತರಿಸಬಾರದು ಎಂದು ಹೈಕೋರ್ಟ್‌ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ಕುರಿತಂತೆ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠವು ಈ ಮಧ್ಯಂತರ ಆದೇಶ ಮಾಡಿದೆ.

371 ಮರಗಳಿಗೆ ಕುತ್ತು

ವಿಚಾರಣೆ ವೇವಳೆ ಅರ್ಜಿದಾರರ ಪರ ವಕೀಲರು, ಭಾರತೀಯ ರೈಲ್ವೆಗೆ ಸೇರಿದ ಈ ಎಂಟು ಎಕರೆ ಪ್ರದೇಶ ಅರಣ್ಯ ಮತ್ತು ಜೀವ ವೈವಿಧ್ಯ ಪ್ರದೇಶದಂತಿದೆ. ಸುಮಾರು 371 ಮರಗಳಿವೆ. ಈ ಜಾಗಕ್ಕೆ ಜೀವ ವೈವಿಧ್ಯತೆಯ ತಾಣ ಎಂದು ಮಾನ್ಯತೆ ನೀಡಿದ್ದ ಆದೇಶವನ್ನು ಅರಣ್ಯ ಇಲಾಖೆ ಏಕಾಏಕಿ ಹಿಂಪಡೆದಿದೆ. ಸದ್ಯ ಈ ಜಾಗವನ್ನು ವಾಣಿಜ್ಯ ಬಳಕೆಗಾಗಿ ಖಾಸಗಿ ಸಂಸ್ಥೆಗೆ ಗುತ್ತಿಗೆಗೆ ನೀಡಲಾಗಿದೆ. ಈಗಾಗಲೇ ಬುಲ್ಡೋಜರ್‌ಗಳನ್ನು ವಿವಾದಿತ ಜಾಗದಲ್ಲಿ ನಿಲ್ಲಿಸಲಾಗಿದ್ದು, ಮರಗಳನ್ನು ಕಡಿಯಲಾಗುತ್ತಿದೆ.

ಆದ್ದರಿಂದ ಮರ ಕಡಿಯಲು ಅವಕಾಶ ನೀಡಬಾರದು ಎಂದು ಬಲವಾಗಿ ವಾದಿಸಿದರು. ರೈಲ್ವೇ ಜಾಗ ಅಭಿವೃದ್ಧಿ ಪ್ರಾಧಿಕಾರದ ಪರ ಕೇಂದ್ರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಅರಣ್ಯ ತಜ್ಞರ ಸಮಿತಿಯ ಅನುಮತಿಯಿಲ್ಲದೆ ಮರ ಕಡಿಯುವುದಿಲ್ಲ ಎಂದು ಭರವಸೆ ನೀಡಿದರು. ಅದನ್ನು ಪರಿಗಣಿಸಿದ ನ್ಯಾಯಾಲಯ, ತನ್ನ ಅನುಮತಿಯಿಲ್ಲದೆ ಈ ಪ್ರದೇಶದಲ್ಲಿ ಯಾವುದೇ ಮರ ಕಡಿಯಬಾರದು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ಯಾರಿಗೆಲ್ಲ ನೋಟಿಸ್ ಜಾರಿ

ಮರಗಳನ್ನು ಕಡಿಯದಂತೆ ರಾಜ್ಯ, ಕೇಂದ್ರ, ಕರ್ನಾಟಕ ಜೀವವೈವಿಧ್ಯ ಮಂಡಳಿ, ಮರ ಅಧಿಕಾರಿ ಮತ್ತು ಇತರರಿಗೆ ಪೀಠ ನೋಟಿಸ್ ಜಾರಿ ಮಾಡಿದೆ. ಪ್ರಶ್ನಾರ್ಹ ಭೂಮಿ ದಶಕಗಳಷ್ಟು ಹಳೆಯದಾದ ' ಗ್ರೀನ್ ಝೋನ್' ಎಂದು ಹೇಳಲಾಗಿದೆ. ಇದು ರೈಲ್ವೆ ಇಲಾಖೆಗೆ ಸೇರಿದೆ. ಇದು ಬೆಂಗಳೂರಿನ ಹೃದಯ ಭಾಗದಲ್ಲಿದ್ದು, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಭಾಗವಾಗಿದೆ, ಆದರೆ ರಸ್ತೆಯಿಂದ ಇಬ್ಭಾಗವಾಗಿದೆ. ಇದು ಜೀವವೈವಿಧ್ಯದಿಂದ ಸಮೃದ್ಧವಾಗಿದೆ ಮತ್ತು 371 ದೊಡ್ಡ ಮರಗಳನ್ನು ಹೊಂದಿದೆ.

ಏಪ್ರಿಲ್ 25 ರಂದು ಪತ್ರಿಕೆಗಳಲ್ಲಿ ಅಧಿಕಾರಿ ಸಾರ್ವಜನಿಕ ಪ್ರಕಟಣೆ ನೀಡಿ, 368 ಮರಗಳನ್ನು ತೆಗೆಯಲು ರೈಲ್ವೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಜನರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದಾರೆ ಎಂಬುದು ಆಘಾತಕಾರಿ. ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿರುವ 34,856 ಚದರ ಮೀಟರ್ ಅಳತೆಯ ಭೂಮಿಯಲ್ಲಿ ವಾಣಿಜ್ಯ ಅಭಿವೃದ್ಧಿ ಯೋಜನೆ ಆರಂಭವಾಗಲಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮರಗಳನ್ನು ಕಡಿಯುವ ಕ್ರಮದ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದಲ್ಲದೆ, ನೋಟಿಸ್‌ಗೆ ಆಕ್ಷೇಪಣೆಗಳನ್ನು ಸಹ ಎತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.