ಗದಗ(ಫೆ.25): ರಾಜ್ಯದಲ್ಲಿ ಇಂದು ಯಾವುದೇ ಅಭಿವೃದ್ಧಿ ಚರ್ಚೆಗಳಾಗದೇ, ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರ್‌ಎಸ್‌ಎಸ್‌ ಹಿಂದೆ ನಿಂತು ವಿವಿಧ ಸಮುದಾಯಗಳ ಮೀಸಲಾತಿ ಹೋರಾಟ ಮಾಡಿಸುತ್ತಿದೆ ಎಂದು ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಗಂಭೀರ ಆರೋಪ ಮಾಡಿದ್ದಾರೆ. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಮೀಸಲಾತಿ ಹೋರಾಟಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ವಾಲ್ಮೀಕಿ, ಕುರುಬ, ಪಂಚಮಸಾಲಿಗರು, ಒಕ್ಕಲಿಗರು, ಮಡಿವಾಳರು ಹೀಗೆ ಹಲವಾರು ಸಮುದಾಯದವರು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಹೋರಾಟ ಮಾಡುತ್ತಿರುವವರು ಯಾರು? ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳಲ್ಲಿರುವವರೇ. ಏನಿದರ ಅರ್ಥ? ಅವರೆಲ್ಲ ಯಾವ ಉದ್ದೇಶಕ್ಕೆ ಇದನ್ನು ಮಾಡುತ್ತಿದ್ದಾರೆ ಎನ್ನುವುದು ಜನರಿಗೆ ಅರ್ಥವಾಗುತ್ತಿಲ್ಲ. ಅದರಲ್ಲಿಯೂ ಆಯಾ ಸಮುದಾಯದವರಲ್ಲಿ ಜಾತಿಯ ವಿಷ ಬೀಜವನ್ನು ಮತ್ತಷ್ಟುಗಟ್ಟಿಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಮೀಸಲಾತಿ ಹೋರಾಟಗಳಲ್ಲಿ ಸಮುದಾಯಗಳ ಹಿತಾಸಕ್ತಿ ಅಡಗಿಲ್ಲ. ಅದಕ್ಕಾಗಿ ಹೋರಾಟಗಳು ನಡೆಯುತ್ತಿಲ್ಲ. ಮೀಸಲಾತಿ ಹೆಸರಿನಲ್ಲಿ ರಾಜಕೀಯ ಪಕ್ಷಗಳು ತಮ್ಮ ವೋಟ್‌ ಬ್ಯಾಂಕ್‌ ಗಟ್ಟಿಮಾಡಿಕೊಳ್ಳುವ ಹುನ್ನಾರವಿದು. ರಾಜಕೀಯವಾಗಿ ಬಳಸಿಕೊಳ್ಳುವ ಉದ್ದೇಶಕ್ಕಾಗಿಯೇ ಹೋರಾಟಗಳನ್ನು ರೂಪಗೊಳಿಸಲಾಗುತ್ತಿದೆ. ಹೋರಾಟದ ಮುಂಚೂಣಿಯಲ್ಲಿ ಇರುವವರು ಆಡಳಿತ ಪಕ್ಷದ ಶಾಸಕ, ಸಚಿವರೇ, ಅವರೇ ಅವರ ಸರ್ಕಾರದ ವಿರುದ್ಧ ಹೋರಾಟ ಮಾಡುವುದೇ? ಇದಕ್ಕೆ ಆ ಪಕ್ಷದ ವರಿಷ್ಠರು ಏಕೆ ಮೌನ ವಹಿಸಿದ್ದಾರೆ? ಮೀಸಲಾತಿ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸಿ, ಸಮುದಾಯ, ಜಾತಿ ಜನರನ್ನು ವಂಚಿಸುವ ಅವರ ಸಮುದಾಯಗಳ ನಾಯಕರಿಂದ ಅವರ ಸಮುದಾಯದವರ ಸಾಮಾನ್ಯ ಜನರ ಕಣ್ಣಿಗೆ ಮಣ್ಣು ಎರಚುವ, ಬುದ್ದಿಗೆ ಮಂಕುಬೂದಿ ತಿಕ್ಕುವ ಕೆಲಸ ಇದಾಗಿದೆ ಎಂದರೆ ತಪ್ಪಾಗಲಾರದು. ಈ ಕೆಲಸವನ್ನು ಸ್ವಾಮೀಜಿಗಳೇ ಮುಂದೆ ನಿಂತು ಮಾಡುತ್ತಿರುವುದು ದೊಡ್ಡ ಆತಂಕದ ಬೆಳವಣಿಗೆಯಾಗಿದೆ ಎಂದರು.

'ರೈತರ ಬಗ್ಗೆ ಕಾಳಜಿಯಿದ್ದ ಯಡಿಯೂರಪ್ಪರ ಕಟ್ಟಿ ಹಾಕಿದ ಬಿಜೆಪಿ ಹೈಕಮಾಂಡ್‌'

ಸುದ್ದಿಗೋಷ್ಠಿಯಲ್ಲಿ ಶರೀಫ ಬಿಳೆಯಲಿ, ಶೇಕಣ್ಣ ಕವಳಿಕಾಯಿ, ರಮೇಶ್‌ ಕೊಳೂರ, ಮುತ್ತು ಬಿಳೆಯಲಿ, ಅನಿಲ… ಕಾಳೆ, ಯಲ್ಲಪ್ಪ ರಾಮಗೇರಿ, ಪರಶುರಾಮ ಕಾಳೆ, ಶಿವಾನಂದ ತಮ್ಮಣ್ಣವರ, ಅಶೋಕ ಬರಗುಂದಿ ಹಾಜರಿದ್ದರು.

ಜನರ ಗಮನ ಬೇರೆಡೆ ಸೆಳೆಯುವ ತಂತ್ರ...

ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಗಳ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ದೇಶದಲ್ಲಿನ ವಿದ್ಯಮಾನಗಳ ಕುರಿತು ಸಾರ್ವಜನಿಕರಲ್ಲಿ ಚರ್ಚೆಯಾಗಬಾರದು ಎನ್ನುವುದು ಒಂದು ಅಂಶವಾದರೆ, ಅವರ ಗಮನವನ್ನು ಬೇರೆಡೆ ಸೆಳೆಯುವ ತಂತ್ರಗಾರಿಕೆ ಇದಾಗಿದೆ. ದೇಶದಲ್ಲಿ ಮೀಸಲಾತಿಯನ್ನೇ ಅಪ್ರಸ್ತುತಗೊಳಿಸುವ ದೊಡ್ಡ ಪ್ರಮಾಣದ ಹುನ್ನಾರವೂ ನಡೆಯುತ್ತಿದೆ. ಸದ್ದಿಲ್ಲದೇ ಖಾಸಗೀಕರಣ ಮಾಡುವ ಕೆಲಸವಾಗುತ್ತಿದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ 43 ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದ್ದು, 2 ಕೋಟಿ ಉದ್ಯೋಗ ನಷ್ಟವಾಗಿವೆ. ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣಗೊಳಿಸಿದಲ್ಲಿ ಅಲ್ಲಿ ಮೀಸಲಾತಿಯ ಪ್ರಶ್ನೆಯೇ ಬರುವುದಿಲ್ಲ. ಇದನ್ನೆಲ್ಲ ದೇಶ ಮಟ್ಟದಲ್ಲಿ ಅವರು ಮಾಡುತ್ತಿದ್ದು, ದೇಶದ ಸೈನ್ಯವನ್ನು ಅವರು ಖಾಸಗೀಕರಣ ಮಾಡಿದರೂ ಆಶ್ಚರ್ಯಪಡುವಂತಿಲ್ಲ. ಈ ಕುರಿತು ಜನರು ಜಾಗೃತರಾಗಬೇಕಿದೆ. ರಾಜ್ಯದಲ್ಲಿ ಮೀಸಲಾತಿಯ ಬಗ್ಗೆ ಇಂದು ಮಾತನಾಡುವ ಯಾರೊಬ್ಬರೂ ಮೀಸಲಾತಿ ನೀಡಿದ ಅಂಬೇಡ್ಕರ್‌ ಬಗ್ಗೆ ಮಾತನಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರ ವಿರುದ್ಧ ಸೂಳಿಬಾವಿ ವಾಗ್ದಾಳಿ ನಡೆಸಿದರು.

ಈಗಾಗಲೇ ಮೀಸಲಾತಿಯಲ್ಲಿ ಇರುವವರು ನಾವು ಹಿಂದುಳಿದವರಿಗೆ ಸೇರಿದ್ದೇವೆಯೇ? ಎಂಬುದಕ್ಕೆ ಯಾವುದಾದರೂ ನಿಖರವಾದ ಸಮೀಕ್ಷೆ ಇದೆಯಾ? ದಾಖಲೆಗಳು ಇವೆಯಾ? ಇಲ್ಲ, ಇಷ್ಟೆಲ್ಲ ಮಾತನಾಡುವ ಸರ್ಕಾರ ಕೂಡಲೇ ಕೆಂಪರಾಜು ವರದಿ ಅಂಗೀಕರಿಸಲಿ, ಅದರಲ್ಲಿಯೂ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಬೇಕು. ಅದರಿಂದ ಯಾವ ಜಾತಿ ಯಾವ ಸ್ಥಿತಿಯಲ್ಲಿದೆ ಎನ್ನುವುದು ಸ್ಪಷ್ಟವಾಗುತ್ತದೆ. ದಾಖಲಾತಿ, ಸಮೀಕ್ಷೆ, ಗಣತಿ ಇಲ್ಲದೇ ನಡೆಯುತ್ತಿರುವ ಈ ಮೀಸಲಾತಿ ಹೋರಾಟಗಳು ಸಹಜವಾದದ್ದು ಅಲ್ಲ, ಇದು ಆರ್‌ಎಸ್‌ಎಸ್‌ ಷಡ್ಯಂತ್ರ ಎಂದು ಪ್ರಗತಿಪರ ಚಿಂತಕ, ಸಾಹಿತಿ ಬಸವರಾಜ ಸೂಳಿಬಾವಿ ಹೇಳಿದ್ದಾರೆ.