'ರೈತರ ಬಗ್ಗೆ ಕಾಳಜಿಯಿದ್ದ ಯಡಿಯೂರಪ್ಪರ ಕಟ್ಟಿ ಹಾಕಿದ ಬಿಜೆಪಿ ಹೈಕಮಾಂಡ್‌'

ಭೂಸುಧಾರಣಾ ಕಾಯ್ದೆ, ತೈಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ| ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಪ್ರತಿಭಟನೆ| ಬಿಜೆಪಿ ಸರ್ಕಾರ ಬಡವರ, ದಲಿತರ ವಿರೋಧಿ| ಎಮ್ಮೆಗೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಹಾಕಿ ಪ್ರತಿಭಟನೆ| 
 

Congress Held Protest Against BJP Government in Naragund in Gadag grg

ನರಗುಂದ(ಫೆ.24): ಭೂಸುಧಾರಣಾ ಕಾಯ್ದೆ, ತೈಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನರಗುಂದ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್‌ ಕಮಿಟಿ ವತಿಯಿಂದ ನರಗುಂದ ಪಟ್ಟಣದಲ್ಲಿ ಬೃಹತ್‌ ಟ್ರ್ಯಾಕ್ಟರ್‌ ರ‍್ಯಾಲಿ, ಎತ್ತು ಚಕ್ಕಡಿಗಳೊಂದಿಗೆ ಪ್ರತಿಭಟನೆ ನಡೆಸಿ, ಎಮ್ಮೆಗೆ ಮೋದಿ ಭಾವಚಿತ್ರ ಕಟ್ಟಿ ಮಂಗಳವಾರ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪಟ್ಟಣದ ಶಿವಾಜಿ ಮಹಾರಾಜ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭೂಸುಧಾರಣಾ ಕಾಯಿದೆ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಬೈಕ್‌ ಮತ್ತು ಟ್ರ್ಯಾಕ್ಟರ್‌ಗಳ ರ‍್ಯಾಲಿಯನ್ನು ನಡೆಸಿ, ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಶವಯಾತ್ರೆಯನ್ನು ನಡೆಸಿ ಪ್ರತಿಕೃತಿ ದಹನ ಮಾಡಿದರು.

ಮಾಜಿ ಶಾಸಕ ಬಿ.ಆರ್‌. ಯಾವಗಲ್ಲ ಮಾತನಾಡಿ, ಬಿಜೆಪಿ ಸರ್ಕಾರ ಬಡವರ, ದಲಿತರ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ವಿರೋಧಿಯಾಗಿದೆ. ದೇಶದ ಜನತೆಗೆ ಹೊಸ ಮುಖ ಬೇಕಾಗಿರುವ ಕಾರಣದಿಂದ ಮೋದಿಯನ್ನು ಚುನಾಯಿಸಿದ್ದಾರೆ. ಪುಲ್ವಾಮಾ ದಾಳಿಯಲ್ಲಿ 40 ಸೈನಿಕರು ಸತ್ತರೆಂದು ಮೋದಿ ಸರ್ಜಿಕಲ್‌ ಸ್ಟ್ರೈಕ್‌ ಮಾಡಿ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಅಲ್ಲಿ ಜನರನ್ನು ಕೊಂದು ಹಾಕುವುದರೊಂದಿಗೆ ರಾಜಕಾರಣ ಮಾಡಿದ್ದಾರೆ. ಮೋದಿ ಅಧಿಕಾರಕ್ಕಾಗಿ ದೇಶದ ಜನರನ್ನು ಹಾಳು ಮಾಡುತ್ತಾ ಏನೇನೋ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಮಾಜಿ ಶಾಸಕ ಜಿ.ಎಸ್‌. ಪಾಟೀಲ ಮಾತನಾಡಿ, ರೈತ ವಿರೋಧಿ ಭೂಸುಧಾರಣಾ ಕಾಯಿದೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದೇಶದ ಜನತೆ ಕಷ್ಟವನ್ನು ಎದುರಿಸುತ್ತಿದ್ದಾರೆ. ಬಿಜೆಪಿಯ ಅಚ್ಚೇ ದಿನ್‌ ಎಲ್ಲಿದೆ? ಮೋದಿ ಅವರು ಗುಜರಾತಿನ ಒಬ್ಬ ವ್ಯಾಪಾರಿ, ಅವರಿಗೆ ರೈತರ ಬಗ್ಗೆ ಏನೂ ಅರಿವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗದಗ ಮಾಜಿ ಶಾಸಕ ಡಿ.ಆರ್‌. ಪಾಟೀಲ ಮಾತನಾಡಿ, ರೈತರ ಕೃಷಿ ಉತ್ಪನ್ನಗಳು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗದಂತೆ ಕಾಯಿದೆಯನ್ನು ಜಾರಿಗೆ ತನ್ನಿ, ಬಿಜೆಪಿ ಸರ್ಕಾರವು ಒಡೆದಾಳುವ ನೀತಿಯನ್ನು ಬ್ರಿಟಿಷರಂತೆ ದೇಶದಲ್ಲಿ ನಡೆಸುತ್ತಿದೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟವನ್ನು ಕೆಲವು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಒಡೆದು ಹಾಕಿದ್ದಾರೆ. 70 ವರ್ಷದಿಂದ ಕಾಂಗ್ರೆಸ್‌ ಏನೂ ಮಾಡಿಲ್ಲವೆಂದು ಬಿಜೆಪಿಗರು ಹೇಳುವುದಾದರೆ, 7 ವರ್ಷದಲ್ಲಿ ಮೋದಿ ಏನೂ ಮಾಡಿದ್ದಾರೆ ಹೇಳಿ ಎಂದು ಸವಾಲು ಹಾಕಿದರು. ಮೋದಿಜಿ ಅವರು ತಮ್ಮ ಅವಧಿಯಲ್ಲಿ 107 ಲಕ್ಷ ಕೋಟಿ ಸಾಲ ಮಾಡಿದ್ದಾರೆಂದು ಆಪಾದಿಸಿದ ಅವರು, ಯಡಿಯೂರಪ್ಪ ಅವರಿಗೆ ರೈತರ ಬಗ್ಗೆ ಕಾಳಜಿಯಿತ್ತು, ಆದರೆ ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪ ಅವರನ್ನು ಕಟ್ಟಿಹಾಕಿದೆ ಎಂದರು.

ಪ್ರತಿಭಟನೆಯಲ್ಲಿ ತಾಪಂ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ, ಜಿಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ, ಪ್ರವೀಣ ಯಾವಗಲ್ಲ, ವಿವೇಕ ಯಾವಗಲ್ಲ, ವಾಸಣ್ಣ ಕುರಡಗಿ, ಮಲ್ಲಪ್ಪ ಕೋಳೇರಿ, ವಿಠ್ಠಲ ಶಿಂಧೆ, ರಾಜು ಕಲಾಲ, ಯಲ್ಲಪ್ಪಗೌಡ ನಾಯ್ಕರ, ಟಿ.ಬಿ. ಶಿರಿಯಪ್ಪಗೌಡ್ರ, ದ್ಯಾಮಣ್ಣ ಕಾಡಪ್ಪನವರ, ಪ್ರಕಾಶ ತಿರಕನಗೌಡ್ರ, ಗಿರೀಶ ನೀಲರಡ್ಡಿ, ಎಂ.ಬಿ. ಅರಹುಣಸಿ, ಗುರುಪಾದಪ್ಪ ಗುರುಹಟ್ಟಿ, ರಾಜೇಶ್ವರಿ ವೀರನಗೌಡ್ರ, ಗೀತಾ ದ್ಯಾವನಗೌಡ್ರ, ಅಪ್ಪಣ್ಣ ನಾಯ್ಕರ, ಬಸವರಾಜ ನವಲಗುಂದ, ಪ್ರಕಾಶ ಹಡಗಲಿ, ಫಕೀರಪ್ಪ ಸವದತ್ತಿ, ವಿಷ್ಣು ಸಾಠೆ, ವೀರೇಶ ಚುಳಕಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಹಾಜರಿದ್ದರು.

ಗಮನ ಸೆಳೆದ ಎಮ್ಮೆ

ಮಂಗಳವಾರ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಬೈಕ್‌ ಮತ್ತು ಟ್ರ್ಯಾಕ್ಟರ್‌ಗಳ ರ‍್ಯಾಲಿ  ನಡೆದಿದ್ದು, ರಾರ‍ಯಲಿಯಲ್ಲಿ ಎಮ್ಮೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹಾಕಿ ಪ್ರತಿಭಟನೆ ಮಾಡಿದ್ದು ಜನರ ಗಮನ ಸೆಳೆಯಿತು.

Latest Videos
Follow Us:
Download App:
  • android
  • ios