*  ಡಾ. ಮೋಹನ ಭಾಗವತ್‌ ನೇತೃತ್ವದಲ್ಲಿ ನಡೆಯಲಿದೆ ಭೈಠಕ್‌*  ಬೈಠಕ್‌ನಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಸೇರಿ ಹಲವು ವಿಷಯಗಳ ಚರ್ಚೆ*  ಭದ್ರತೆಗೆ ಪೊಲೀಸರ ನಿಯೋಜನೆ 

ಧಾರವಾಡ(ಅ.27): ದೇಶದ ಹಿತದೃಷ್ಟಿಯಿಂದ ಅನುಷ್ಠಾನಗೊಳ್ಳಬೇಕಾದ ಮುಂದಿನ ಯೋಜನೆಗಳು ಹಾಗೂ ಅಭಿವೃದ್ಧಿ ಚರ್ಚೆಗಳ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌(RSS) ಸರಸಂಘಚಾಲಕ ಡಾ. ಮೋಹನ್‌ ಭಾಗವತ್‌(Mohan Bhagwat) ನೇತೃತ್ವದಲ್ಲಿ ಅ. 28ರಿಂದ 30ರ ವರೆಗೆ ಗರಗ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್‌ ನಡೆಯಲಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ ಅಂಬೇಕರ, ಪ್ರತಿ ವರ್ಷದಂತೆ ಈ ವರ್ಷವೂ ಬೈಠಕ್‌(Baithak) ನಡೆಸಲಾಗುತ್ತಿದ್ದು, ಅ. 28ರಂದು ಬೆಳಗ್ಗೆ 9 ಗಂಟೆಗೆ ಭಠಕ್‌ ಉದ್ಘಾಟನೆಗೊಳ್ಳಲಿದೆ ಎಂದರು.

ಈ ಬೈಠಕ್‌ನಲ್ಲಿ ಸರಸಂಘಚಾಲಕ ಡಾ. ಮೋಹನ್‌ ಭಾಗವತ, ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ(Dattatreya Hosabale), ಅಖಿಲ ಭಾರತೀಯ ಕ್ಷೇತ್ರೀಯ ಮತ್ತು ಪ್ರಾಂತ ಸ್ತರದ ಕಾರ್ಯಕರ್ತರು ಸೇರಿದಂತೆ ದೇಶದ ಸುಮಾರು 350 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮಾರ್ಚ್‌ ತಿಂಗಳಲ್ಲಿ ನಡೆಯುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಸಂಘ ಯೋಜನೆ ರೂಪಿಸುತ್ತದೆ. ಇದಾದ 6 ತಿಂಗಳ ನಂತರ ನಡೆಯುವ ಅಖಿಲ ಭಾರತೀಯ ಕಾರ್ಯಕಾರಿ ಮಂಡಳ ಬೈಠಕ್‌ ಪರಿಶೀಲನಾ ಸಭೆ, ವಿಸ್ತರಣೆಯ ಯೋಜನೆಗಳು, ಕಾರ್ಯಕರ್ತರ ತರಬೇತಿ, ಸಂಘಟನಾತ್ಮಕ ಚಟುವಟಿಕೆ ಬಗ್ಗೆ ಚರ್ಚಿಸಲಿದೆ ಎಂದರು.

ಮಂಗಳೂರಿನಲ್ಲಿ ವಿಹಿಂಪ ಕೇಂದ್ರೀಯ ಬೈಠಕ್‌, ವಿದೇಶದಿಂದಲೂ ಜನ ಭಾಗಿ

ಪ್ರಮುಖ ವಿಷಯಗಳ ಚರ್ಚೆ:

ಬಾಂಗ್ಲಾ ದೇಶದಲ್ಲಿ(Bangladesh) ದುರ್ಗಾಪೂಜಾ(Durga Pooja) ಸಂದರ್ಭದಲ್ಲೇ ಹಿಂದೂಗಳ ಮೇಲೆ ದಾಳಿ ಹಾಗೂ ದೇವಸ್ಥಾನಗಳನ್ನು(Temple) ಧ್ವಂಸ ಮಾಡಿರುವುದು. ಈ ದಾಳಿಯಲ್ಲಿ(Attack) ಅನೇಕರು ಸಾವಿಗೀಡಾಗಿದ್ದಾರೆ. ಈ ವಿಷಯದ ಕುರಿತು ಸಹ ಚರ್ಚೆ ನಡೆಯುವ ಸಾಧ್ಯತೆ ಇದೆ. ಇನ್ನು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಸಂದ ಹಿನ್ನೆಲೆಯಲ್ಲಿ ಸಂಘದಿಂದ ಯಾವ ರೀತಿ ಕಾರ್ಯಕ್ರಮ ಆಯೋಜಿಸಬಹುದು ಎಂಬುದು ಸೇರಿ ಇನ್ನೂ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗುತ್ತದೆ. 1925ನೇ ಇಸ್ವಿಯಲ್ಲಿ ಆರ್‌ಎಸ್‌ಎಸ್‌ ಪ್ರಾರಂಭವಾಗಿದ್ದು ಐದು ವರ್ಷಗಳಲ್ಲಿ ಶತಮಾನ ಕಾಣಲಿದೆ. ಈ ಸಂಭ್ರಮ ಸಮಯದಲ್ಲಿ 2021ರಿಂದ 2024ರ ಅವಧಿಯಲ್ಲಿ ಮೂರು ವರ್ಷಗಳಲ್ಲಿ ಸಂಘದಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವುದು ಹಾಗೂ ಸಂಘವನ್ನು ಇನ್ನಷ್ಟುಗಟ್ಟಿಗೊಳಿಸುವಲ್ಲಿ ಏನೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದು ಸೇರಿದಂತೆ ದೇಶ ಹಾಗೂ ನಮ್ಮ ಸ್ವಾಭಿಮಾನದ ಕುರಿತು ತೆಗೆದುಕೊಳ್ಳಬೇಕಾದ ನಿಲುವುಗಳ ಬಗೆಗೆ ಚರ್ಚೆಗಳು ನಡೆಯಲಿವೆ ಎಂದರು.

ದೇಶದಲ್ಲಿ(India) ಕೋವಿಡ್‌(Covi19) ಹಾವಳಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಸೇವಾ ಭಾರತಿ ಮೂಲಕ ಅನೇಕ ಕಾರ್ಯಕರ್ತರು ಸೇವೆ ಸಲ್ಲಿಸಿದ್ದಾರೆ. 3ನೇ ಅಲೆ ಬರುವ ನಿರೀಕ್ಷೆ ಇರುವ ಕಾರಣಕ್ಕೆ 1.50 ಲಕ್ಷ ಸ್ಥಳಗಳಲ್ಲಿ ಸುಮಾರು 10 ಲಕ್ಷ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಲಾಗಿದೆ. 3ನೇ ಅಲೆ ಬಂದಿದ್ದೇ ಆದಲ್ಲಿ ಅದನ್ನು ಸಮರ್ಥವಾಗಿ ಎದುರಿಸಿ ಜನರಿಗೆ ಸೂಕ್ತ ಸೇವೆ ನೀಡುವ ಬಗ್ಗೆ ತರಬೇತಿ ನೀಡಲಾಗಿದೆ. ಇದು ಎಷ್ಟರ ಮಟ್ಟಿಗೆ ಸಫಲವಾಗಿದೆ ಎಂಬ ವಿಮರ್ಶೆ ಮಾಡಲಾಗುವುದು ಎಂದರು. ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದ ಸುನೀಲ ಅಂಬೇಕರ, ಈ ಬೈಠಕ್‌ನಲ್ಲಿ ಕೇಂದ್ರ ಸೇರಿದಂತೆ ರಾಜ್ಯದ ಯಾವ ಸಚಿವರೂ ಪಾಲ್ಗೊಳ್ಳುವುದಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ(Siddaramaiah) ಹಾಗೂ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಆರ್‌ಎಸ್‌ಎಸ್‌ ಬಗ್ಗೆ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್‌ ತನ್ನ ಕೆಲಸ ಮಾಡುತ್ತಿದೆ. ಸಾಮಾಜಿಕ ಸೇವೆ ಮಾಡುತ್ತಲೇ ಮುನ್ನಡೆಯುತ್ತಿದೆ. ಟೀಕಾಕಾರರ ಬಗ್ಗೆ ನಾವು ಪ್ರತಿಕ್ರಿಯಿಸೋದಿಲ್ಲ. ಪಂಜಾಬ್‌(Punjab) ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌(Amarinder Singh) ಪಾಕಿಸ್ತಾನದ(Pakistan) ಪತ್ರಕರ್ತೆ ಜೊತೆ ಇರುವ ಫೋಟೋ ವೈರಲ್‌ ಕುರಿತು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಲು ಅಂಬೇಕರ ನಿರಾಕರಿಸಿದರು.

ದೇಗುಲಗಳಿಗೆ ಹಿಂದೂ ಆಡಳಿತ: ಆರೆಸ್ಸೆಸ್‌ ಆಗ್ರಹ!

ಇನ್ನು ಭಾನುವಾರ ನಡೆದ ಭಾರತ, ಪಾಕಿಸ್ತಾನ ಕ್ರಿಕೆಟ್‌(Cricket) ಪಂದ್ಯದಲ್ಲಿ ಭಾರತ ಪರಾಭವಗೊಂಡ ಬಳಿಕ ಕ್ರಿಕೆಟಿಗ ಮಹ್ಮದ್‌ ಶಮಿ(Mohammed Shami) ಕುರಿತ ಟ್ರೋಲ್‌ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಮಾತ್ರ ನೋಡಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಕಾರ್ಯವಾಹ ಎನ್‌. ತಿಪ್ಪೇಸ್ವಾಮಿ, ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ ನರೇಂದ್ರ ಕುಮಾರ ಠಾಕೂರ್‌, ಅಲೋಕಕುಮಾರ ಇದ್ದರು.

ರಾಷ್ಟ್ರೋತ್ಥಾನಕ್ಕೆ ಆರ್‌ಎಸ್‌ಎಸ್‌ ಕಳೆ:

ಅ. 28ರಿಂದ ಮೂರು ದಿನಗಳ ಕಾಲ ನಡೆಯಲಿರುವ ಆರೆಸ್ಸೆಸ್‌ ಬೈಠಕ್‌ ಹಿನ್ನೆಲೆಯಲ್ಲಿ ಗರಗ ರಸ್ತೆಯ ಪ್ರವೇಶದಿಂದ ರಾಷ್ಟ್ರೋತ್ಥಾನದ ವರೆಗೂ ಕೇಸರಿ ಧ್ವಜಗಳನ್ನು ಕಟ್ಟಲಾಗಿದ್ದು, ಅಲ್ಲಲ್ಲಿ ಧ್ವಾರಗಳನ್ನು ಸಹ ನಿರ್ಮಿಸಲಾಗಿದೆ. ದೇಶದ ನಾನಾ ಭಾಗಗಳಿಂದ ಪ್ರತಿನಿಧಿಗಳು ಆಗಮಿಸುತ್ತಿದ್ದು ರಾಷ್ಟ್ರೋತ್ಥಾನಕ್ಕೆ ಕೇಸರಿ ಕಳೆ ಬಂದಿದೆ. ಸದ್ಯ ಝಡ್‌ ಪ್ಲಸ್‌ ಸೆಕ್ಯುರಿಟಿ ಹೊಂದಿರುವ ಡಾ. ಮೋಹನ ಭಾಗವತ್‌ ಅವರು ರಾಷ್ಟ್ರೋತ್ಥಾನಕ್ಕೆ ಆಗಮಿಸಿದ್ದು ಪ್ರಮುಖರ ಪ್ರವಾಸ ಕಾರ್ಯಕ್ರಮ ಬಂದಂತೆ ಅವರಿಗೆ ಭದ್ರತೆ(Security) ಒದಗಿಸಲಾಗುವುದು. ಸದ್ಯ ಒಂದು ಕೆಎಸ್‌ಆರ್‌ಪಿ ತುಕುಡಿ ಹಾಗೂ ಓರ್ವ ಡಿವೈಎಸ್ಪಿ, ಇನಸ್ಪೆಕ್ಟರ್‌ ಹಾಗೂ ಗರಗ ಪೊಲೀಸ್‌(Police) ಠಾಣೆ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಕೃಷ್ಣಕಾಂತ ಮಾಹಿತಿ ನೀಡಿದರು.