ಬೆಳಗಾವಿಯಲ್ಲಿ ವಿದ್ಯುತ್ ಬಿಲ್ ಪಾವತಿಸದ ಸ್ಟೋನ್ ಕ್ರಷರ್ ಸಂಪರ್ಕ ಕಡಿತಗೊಳಿಸಿದ ಹೆಸ್ಕಾಂ ಅಧಿಕಾರಿಗಳ ಮೇಲೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ, ತಾವು ಕೇವಲ ಬುದ್ಧಿವಾದ ಹೇಳಿದ್ದಾಗಿ ಹಟ್ಟಿಹೊಳಿ ಸ್ಪಷ್ಟಪಡಿಸಿದ್ದು, ಹಲ್ಲೆ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಬೆಳಗಾವಿ (ಸೆ.26): ವಿದ್ಯುತ್‌ನ ಬಾಕಿ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಸ್ಟೋನ್ ಕ್ರಷರ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಆಕ್ರೋಶಗೊಂಡ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಹೆಸ್ಕಾಂ ಅಧಿಕಾರಿಗಳಿಬ್ಬರನ್ನು ತಮ್ಮ ನಿವಾಸಕ್ಕೆ ಕರೆಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಆರೋಪವನ್ನು ಸಂಪೂರ್ಣ ತಳ್ಳಿಹಾಕಿರುವ ಚನ್ನರಾಜ, ತಾವು ಯಾವುದೇ ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕುವೆಂಪುನಗರದ ಹಟ್ಟಿಹೊಳಿ ಅವರ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ಘಟನೆ ನಡೆದಿದೆ ಎನ್ನಲಾಗಿದೆ. ಹೆಸ್ಕಾಂ ಎಇಇ ದೀಪಕ್.ಡಿ ಹಾಗೂ ಸೆಕ್ಷನ್ ಆಫೀಸರ್ ರಾಜು ಚವ್ಹಾಣ್ ಹಲ್ಲೆಗೊಳಗಾದ ಅಧಿಕಾರಿಗಳು ಎಂದು ಆರೋಪಿಸಲಾಗಿದೆ. ರೈತರು ಹಾಗೂ ಕ್ರಷರ್ ಮಾಲೀಕರು ತಮ್ಮನ್ನು ಭೇಟಿ ಮಾಡಿ ವಿದ್ಯುತ್ ಸಮಸ್ಯೆಗಳ ಕುರಿತು ಗಮನ ಸೆಳೆದಿದ್ದರು. ಈ ಹಿನ್ನೆಲೆ ಕ್ರಷರ್‌ಗಳ ವಿದ್ಯುತ್ ಸಂಪರ್ಕ ಕಡಿತ ಚರ್ಚಿಸಲು ಹೆಸ್ಕಾಂ ಸಿಬ್ಬಂದಿಯನ್ನು ಕರೆಸಲಾಗಿತ್ತು. ಸಿಬ್ಬಂದಿಗೆ ಬುದ್ಧಿವಾದ ಹೇಳಿದ್ದು ನಿಜ. ಹಲ್ಲೆ ಮಾಡಿಲ್ಲ ಎಂದು ಹಟ್ಟಿಹೊಳಿ ಸ್ಪಷ್ಟಪಡಿಸಿದರು.

-ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ: ಎಇಇ ದೀಪಕ್

ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಕುರಿತು ಪ್ರಶ್ನಿಸಿದ ವೇಳೆ ಮಾತಿನ ಚಕಮಕಿ ನಡೆದಿದ್ದು, ಚನ್ನರಾಜ ಹಟ್ಟಿಹೊಳಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಎದೆ ಮೇಲಿನ ಶರ್ಟ್ ಹಿಡಿದು ಹಲ್ಲೆ ಮಾಡಿದ್ದಾರೆ.

-ದೀಪಕ್, ಎಇಇ, ಹೆಸ್ಕಾಂ