ಖಾಸಗಿ ಆಸ್ಪತ್ರೇಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಕೋಟಿ ಕೋಟಿ ವೆಚ್ಚ..!
43 ಸಾವಿರ ಜನರಿಗೆ ಚಿಕಿತ್ಸೆಗೆ ಬಿಬಿಎಂಪಿ ಶಿಫಾರಸು| 133 ಕೋಟಿ ಪಾವತಿ, 202 ಕೋಟಿ ಪಾವತಿ ಬಾಕಿ| ಬಿಬಿಎಂಪಿ ವ್ಯಾಪ್ತಿಯಲ್ಲಿ 67 ಲಕ್ಷ ಮಂದಿಗೆ ಕೋವಿಡ್ ಪರೀಕ್ಷೆ| 3,97,836 ಮಂದಿಯಲ್ಲಿ ಕಾಣಿಸಿಕೊಂಡ ಸೋಂಕು| 3,89,440 ಮಂದಿ ಗುಣಮುಖ| 4,012 ಮಂದಿ ಸಾವು|
ಬೆಂಗಳೂರು(ಜ.29): ನಗರದಲ್ಲಿ ಬಿಬಿಎಂಪಿಯ ಶಿಫಾರಸಿನ ಮೇರೆಗೆ ಒಟ್ಟು 43,863 ಕೊರೋನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮಾಹಿತಿ ನೀಡಿದೆ.
ಬಿಬಿಎಂಪಿ ಶಿಫಾರಸು ಮಾಡಿದ 43,863 ರೋಗಿಗಳ ಚಿಕಿತ್ಸೆ ವೆಚ್ಚ 293.23 ಕೋಟಿ ಆಗಲಿದೆ. ಈ ಪೈಕಿ ಈಗಾಗಲೇ 42,467 ರೋಗಿಗಳಿಗೆ ಚಿಕಿತ್ಸೆ ನೀಡಿರುವ ಬಿಲ್‌ಗಳು ಖಾಸಗಿ ಆಸ್ಪತ್ರೆಗಳಿಂದ ಸಲ್ಲಿಸಲಾಗಿದ್ದು, ಒಟ್ಟು 202.23 ಕೋಟಿ ಮರುಪಾವತಿ ಮಾಡಬೇಕಿದೆ. ಈವರೆಗೆ 31,624 ರೋಗಿಗಳಿಗೆ ನೀಡಲಾದ ಚಿಕಿತ್ಸಾ ವೆಚ್ಚ 133.20 ಕೋಟಿಗಳನ್ನು ಜ.13ರಂದು ಮರು ಪಾವತಿ ಮಾಡಲಾಗಿದೆ. ಇನ್ನೂ 12,239 ಕೋವಿಡ್ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಮರು ಪಾವತಿ ಮಾಡುವುದು ಬಾಕಿ ಇದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ.
'ಬೆಂಗ್ಳೂರಲ್ಲಿ ನಿತ್ಯ 20 ಸಾವಿರ ಜನರಿಗೆ ಕೊರೋನಾ ಲಸಿಕೆ'
ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಮೀಸಲಿಟ್ಟ ಹಾಸಿಗೆಗಳು ಖಾಲಿ ಇದ್ದರೂ ಸೋಂಕಿತರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಹೊರೆ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ನ.18ರಿಂದ ಬಿಬಿಎಂಪಿಯು ಕೋವಿಡ್ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡುವುದನ್ನು ಸ್ಥಗಿತಗೊಳಿಸಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ 67 ಲಕ್ಷ ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, 3,97,836 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. 3,89,440 ಮಂದಿ ಗುಣಮುಖರಾಗಿದ್ದಾರೆ. 4,012 ಮಂದಿ ಮೃತಪಟ್ಟಿದ್ದಾರೆ.