'ಬೆಂಗ್ಳೂರಲ್ಲಿ ನಿತ್ಯ 20 ಸಾವಿರ ಜನರಿಗೆ ಕೊರೋನಾ ಲಸಿಕೆ'

ಟಾಸ್ಕ್‌ ಫೋರ್ಸ್‌ ಸಭೆ| ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದವರಿಗೆ ಎರಡನೇ ಹಂತದಲ್ಲಿ ಲಸಿಕೆ|31ರಿಂದ ಫೆ.3ರವರೆಗೆ ಕೋವಿಡ್‌ ಲಸಿಕೆ ಇಲ್ಲ| ಬಿಬಿಎಂಪಿ ವ್ಯಾಪ್ತಿಯಲ್ಲಿ ಜ.31ರಿಂದ ಫೆ.3ರವರೆಗೆ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮ| 
 

Coronavirus Vaccine for 20 thousand People Daily in Bengaluru grg

ಬೆಂಗಳೂರು(ಜ.28): ನಗರದಲ್ಲಿ ಪ್ರತಿ ದಿನ 20 ಸಾವಿರ ಮಂದಿಗೆ ಕೋವಿಡ್‌ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದ್ದು, ಎರಡನೇ ಹಂತದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ವಿವಿಧ ಇಲಾಖೆಯ 50 ಸಾವಿರ ಜನರಿಗೆ ಲಸಿಕೆ ನೀಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ‘ಕೋವಿಡ್‌ ಟಾಸ್ಕ್‌ ಫೋರ್ಸ್‌ ಸಮಿತಿ ಸಭೆ’ಯಲ್ಲಿ ಮಾತನಾಡಿದ ಅವರು, ಮೊದಲನೇ ಹಂತದಲ್ಲಿ 1.83 ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಕೋವಿನ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈವರೆಗೆ (ಜ.27) ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಲಸಿಕೆ ಪಡೆದಿದ್ದಾರೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್‌ ವೇಳೆ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದವರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಪಾಲಿಕೆ, ಜಲ ಮಂಡಳಿ, ಪೊಲೀಸ್‌ ಇಲಾಖೆ ಸಿಬ್ಬಂದಿ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಸೇರಿ 50 ಸಾವಿರ ಜನರಿಗೆ ಲಸಿಕೆ ಹಾಕಲಾಗುವುದು, ಪೋರ್ಟಲ್‌ನಲ್ಲಿ ಬಹುತೇಕ ನೋಂದಣಿ ಪ್ರಕ್ರಿಯೆ ಮುಗಿದಿದೆ ಎಂದರು.

ಭಾರತದಲ್ಲಿ ಟಾಟಾದಿಂದ ಮಾಡೆರ್ನಾ ಲಸಿಕೆ ಮಾರಾಟ?

ತೃತೀಯ ಹಂತದಲ್ಲಿ 50 ವರ್ಷ ಮೇಲಿನ ಮತ್ತು 50 ವರ್ಷದೊಳಗಿನ ಅನ್ಯ ಖಾಯಿಲೆಯಿಂದ ಬಳಲುವವರ ಪಟ್ಟಿಯನ್ನು ಮಾಚ್‌ರ್‍ ಅಂತ್ಯದೊಳಗೆ ಸಿದ್ಧಪಡಿಸಬೇಕಾಗಿದೆ. ಆಶಾ ಕಾರ್ಯಕರ್ತರು, ಎಎನ್‌ಎಂಗಳು ಖಾಸಗಿ ಸಂಘ ಸಂಸ್ಥೆಗಳ (ಎನ್‌ಜಿಒ) ಸಹಕಾರ ಪಡೆದು ಫಲಾನುಭವಿಗಳ ಪಟ್ಟಿಸಿದ್ಧಪಡಿಸುವಂತೆ ಆಯುಕ್ತರು ಸೂಚಿಸಿದರು.

ನಗರದಲ್ಲಿ ಹೊಸ ಪ್ರಕರಣಗಳು ದಿನೇ ದಿನೇ ಕಡಿಮೆಯಾಗುತ್ತಿದ್ದು, ಈಗ 400ಕ್ಕೆ ಇಳಿಕೆಯಾಗಿದೆ. ಪ್ರಸ್ತುತ ಸೋಂಕಿನ ಪ್ರಮಾಣ ಶೇ.0.97, ಗುಣಮುಖ ಪ್ರಮಾಣ ಶೇ.97.80, ಸಾವಿನ ಪ್ರಮಾಣ ಶೇ.0.7 ತಲುಪಿದೆ. ಆದರೂ ಪ್ರತಿದಿನ 60 ಸಾವಿರ ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು. ಆಗ ಮಾತ್ರ ಸೋಂಕು ಹರಡುವಿಕೆ ತಡೆಗಟ್ಟಬಹುದು ಎಂದು ಹೇಳಿದರು. ಈ ವೇಳೆ ವಿಶೇಷ ಆಯುಕ್ತ ರಾಜೇಂದ್ರಚೋಳನ್‌, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಎಲ್ಲ ವಲಯಗಳ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

31ರಿಂದ ಫೆ.3ರವರೆಗೆ ಕೋವಿಡ್‌ ಲಸಿಕೆ ಇಲ್ಲ

ಬಿಬಿಎಂಪಿ ವ್ಯಾಪ್ತಿಯಲ್ಲಿ ಜ.31ರಿಂದ ಫೆ.3ರವರೆಗೆ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಕೋವಿಡ್‌ ಲಸಿಕಾ ಅಭಿಯಾನ ಇರುವುದಿಲ್ಲ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.
ನಗರದಲ್ಲಿ 1.04 ಕೋಟಿ ಜನಸಂಖ್ಯೆಯಲ್ಲಿ 10.79 ಲಕ್ಷ ಐದು ವರ್ಷದೊಳಗಿನ ಮಕ್ಕಳಿದ್ದಾರೆ. ಈ ಮಕ್ಕಳಿಗೆ ಬಸ್‌ನಿಲ್ದಾಣ, ಮಾರುಕಟ್ಟೆಸೇರಿದಂತೆ ಇತರೆ ಪ್ರದೇಶದಲ್ಲಿ 456 ತಂಡ ಲಸಿಕೆ ನೀಡಲಿವೆ. ಜತೆಗೆ 324 ಮೊಬೈಲ್‌ ತಂಡಗಳಿದ್ದು, 14,922 ಆರೋಗ್ಯ ಸಿಬ್ಬಂದಿ 3,340 ಬೂತ್‌ಗಳಲ್ಲಿ ಪೋಲಿಯೋ ಲಸಿಕೆ ನೀಡುತ್ತಾರೆ. ಇದರ ಮೇಲ್ವಿಚಾರಣೆಗೆ 749 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹೀಗಾಗಿ, ಪಲ್ಸ್‌ ಪೋಲಿಯೋ ನಡೆಯುವ ವೇಳೆ ಕೋವಿಡ್‌ ವ್ಯಾಕ್ಸಿನ್‌ (ಜನವರಿ 31ರಿಂದ ಫೆಬ್ರವರಿ 3 ರವರೆಗೆ) ನೀಡುವ ಕಾರ್ಯಕ್ರಮ ಇರುವುದಿಲ್ಲ ಎಂದು ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದರು.
 

Latest Videos
Follow Us:
Download App:
  • android
  • ios