ರಸ್ತೆಯಲ್ಲಿ ಕಿರಿಕ್ ಮಾಡೋರ ವಿರುದ್ಧ ರೌಡಿಶೀಟ್ ಓಪನ್ ಮಾಡುವಂತೆ ಬೆಂಗಳೂರು ಕಮಿಷನರ್ ಸೂಚನೆ
ಬೆಂಗಳೂರಿನ ರಸ್ತೆಯಲ್ಲಿ ಕಿರಿಕ್ ಮಾಡೋರ ವಿರುದ್ಧ ರೌಡಿಶೀಟರ್ ಓಪನ್ ಮಾಡಲು ಕಮಿಷನರ್ ಬಿ ದಯಾನಂದ ಸೂಚನೆ
ಬೆಂಗಳೂರು (ಆ.13): ಕ್ಷುಲ್ಲಕ ಕಾರಣಗಳಿಗೆ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿಜನರ ಮೇಲೆ ದುಂಡಾವರ್ತನೆ ತೋರುವ ಹಾಗೂ ಜನರಿಗೆ ಬೆದರಿಸಿ ಸುಲಿಗೆ ಮಾಡುವವರ ಕಿಡಿಗೇಡಿಗಳ ವಿರುದ್ಧ ರೌಡಿಪಟ್ಟಿತೆರೆಯುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇತ್ತೀಚೆಗೆ ವರ್ತೂರು ಹಾಗೂ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ದಾರಿ ಬಿಡದ ಕಾರಣಕ್ಕೆ ಕಾರನ್ನು ಅಡ್ಡಗಟ್ಟಿ ಸಾಫ್ಟ್‌ವೇರ್ ಉದ್ಯೋಗಿಗಳ ಮೇಲೆ ಪುಂಡರು ಗಲಾಟೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಯುಕ್ತರು, ರಸ್ತೆಯಲ್ಲಿ ಪುಂಡಾಟಿಕೆ ನಡೆಸುವ ಹಾಗೂ ಜನರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುವವರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ಶನಿವಾರ ಟ್ವೀಟ್ ಮಾಡಿದ್ದಾರೆ.
ರೌಡಿಗಳ ಮೇಲೆ ನಿಗಾ: ಠಾಣಾ ವ್ಯಾಪ್ತಿಯಲ್ಲಿ ರೌಡಿಗಳ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ರೌಡಿ ಗುಂಪುಗಳ ನಡುವೆ ಬಡಿದಾಟವಾಗಿ ರಕ್ತಪಾತವಾದರೆ ಸಹಿಸುವುದಿಲ್ಲ ಎಂದು ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳಿಗೆ ಆಯುಕ್ತ ದಯಾನಂದ್ ತಾಕೀತು ಮಾಡಿದ್ದಾರೆ.
Bengaluru: ಜೈಲಿಂದ ಬಿಡುಗಡೆಯಾಗಿ ಮನೆ ಸೇರುವ ಮುನ್ನವೇ ರೌಡಿ ಶೀಟರ್ ಬರ್ಬರ ಹತ್ಯೆ!
ಕೆಲ ದಿನಗಳ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಜಾಮೀನು ಪಡೆದು ಹೊರಬಂದ ರೌಡಿ ಸಿದ್ದಾಪುರದ ಮಹೇಶ್‌ನನ್ನು ಕೆಲವೇ ನಿಮಿಷಗಳಲ್ಲಿ ಜೈಲಿನ ಸಮೀಪವೇ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಅಲ್ಲದೆ ಡಿ.ಜೆ.ಹಳ್ಳಿ ಸಮೀಪ ಮಡಿವಾಳದ ರೌಡಿ ಕಪಿಲ್‌ನನ್ನು ಎದುರಾಳಿಗಳು ಕೊಂದಿದ್ದರು. ರೌಡಿಗಳ ಸರಣಿ ಹತ್ಯೆ ಹಿನ್ನೆಲೆಯಲ್ಲಿ ತಮ್ಮ ಕಚೇರಿಯ ಸಭಾಂಗಣದಲ್ಲಿ ಶನಿವಾರ ಇನ್‌ಸ್ಪೆಕ್ಟರ್‌ಗಳು ಹಾಗೂ ಎಸಿಪಿ ಮಟ್ಟದ ಅಧಿಕಾರಿಗಳ ಸಭೆಯನ್ನು ಆಯುಕ್ತರು ನಡೆಸಿದರು.
ರೌಡಿಗಳ ವಿರುದ್ಧ ದಾಖಲಾಗಿರುವ ಹಳೇ ಪ್ರಕರಣಗಳನ್ನು ಪರಿಶೀಲಿಸಿದ ಆಯುಕ್ತರು, ಹಳೇ ಪ್ರಕರಣಗಳ ವಿಚಾರಣೆಗೆ ಹಾಜರಾಗದೆ ನ್ಯಾಯಾಲಯವು ರೌಡಿಗಳ ವಿರುದ್ಧ ಜಾರಿಗೊಳಿಸಿರುವ ಜಾಮೀನು ರಹಿತ ವಾರೆಂಟ್‌ಗಳ ಆಧರಿಸಿ ಕಾರ್ಯರೂಪಕ್ಕಿಳಿಸಬೇಕು. ಅಲ್ಲದೆ ರೌಡಿಗಳ ಅಡ್ಡೆಗಳು ಹಾಗೂ ಅವರ ಆರ್ಥಿಕ ವಹಿವಾಟಿನ ಬಗ್ಗೆ ಮಾಹಿತಿ ಪಡೆದು ನಿಗಾವಹಿಸಬೇಕು. ರೌಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳುವಂತೆ ದಯಾನಂದ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ನಗರ ಜಂಟಿ ಆಯುಕ್ತ (ಅಪರಾಧ) ಡಾ ಎಸ್.ಡಿ.ಶರಣಪ್ಪ ಹಾಗೂ ಸಿಸಿಬಿ ಡಿಸಿಪಿ ಬದ್ರಿನಾಥ್ ಉಪಸ್ಥಿತರಿದ್ದರು.
ಬೆಂಗಳೂರು: ಕರ್ತವ್ಯ ಲೋಪ ಹಿನ್ನಲೆ, ಅಶೋಕನಗರ ಇನ್ಸ್‌ಪೆಕ್ಟರ್ ಸಸ್ಪೆಂಡ್
ಹಲಸೂರು ಠಾಣೆಗೆ ಪೊಲೀಸ್ ಆಯುಕ್ತ ದಯಾನಂದ್ ಭೇಟಿ
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಶುಕ್ರವಾರ ಹಲಸೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಿದರು.
ಪೊಲೀಸ್ ಠಾಣೆಯ ಡೈರಿ, ಸಿಬ್ಬಂದಿ, ಪ್ರಮುಖ ಪ್ರಕರಣಗಳ ತನಿಖೆ ಬಗ್ಗೆ ಪರಿಶೀಲಿಸಿದರು. ಈ ವೇಳೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ಎಸಿಪಿ, ಇನ್ಸ್‌ಪೆಕ್ಟರ್‌ಗಳಿಂದ ಮಾಹಿತಿ ಪಡೆದರು. ಬಳಿಕ ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರ ಅಹವಾಲು ಆಲಿಸಬೇಕು. ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಪೊಲೀಸ್ ಠಾಣೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉತ್ತಮ ವರ್ತನೆ ತೋರಬೇಕು. ತ್ವರಿತ ಗತಿಯಲ್ಲಿ ಪ್ರಕರಣಗಳನ್ನು ನಿರ್ವಹಿಸುವಂತೆ ಸೂಚಿಸಿದರು.