Asianet Suvarna News Asianet Suvarna News

ಶಾಲೆ ಛಾವಣಿ ಕುಸಿತ: ಮಕ್ಕಳ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಶಿವಮೊಗ್ಗದ ಹೊಸನಗರದಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದಿದ್ದು, ವಿದ್ಯಾರ್ಥಿಗಳ ಸಮಯ ಪ್ರಜ್ಞೆಯಿಂದಾಗಿ ಅಪಾಯ ತಪ್ಪಿದೆ. ಘಟನೆಯಲ್ಲಿ ಬಾಲಕನೊಬ್ಬನಿಗೆ ಸಣ್ಣ ಗಾಯವಾಗಿದೆ. ಆದರೆ ಮಕ್ಕಳ ಸಮಯ ಪ್ರಜ್ಞೆಯಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.

roof collapse in shivamogga Govt school
Author
Bangalore, First Published Aug 22, 2019, 12:09 PM IST

ಶಿವಮೊಗ್ಗ(ಆ.22): ಮೇಲ್ಚಾವಣಿ ದಿಢೀರ್‌ ಕುಸಿದು ಬಿದ್ದ ಘಟನೆ ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಬಾಲಕನೊಬ್ಬನಿಗೆ ಸಣ್ಣ ಗಾಯವಾಗಿದೆ. ಆದರೆ ಮಕ್ಕಳ ಸಮಯ ಪ್ರಜ್ಞೆಯಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.

ಮಕ್ಕಳು ಶಾಲೆಗೆ ಆಗಮಿಸುತ್ತಿದ್ದಂತೆ ಪ್ರಾರ್ಥನೆ ಮುಗಿಸಿ ಕೊಠಡಿಗೆ ತೆರಳಿ ಕಲಿಕೆಯಲ್ಲಿ ತೊಡಗಿರುವಾಗ ಮೇಲ್ಛಾವಣಿಯಲ್ಲಾದ ಶಬ್ಧವನ್ನು ಮಕ್ಕಳು ಗಮನಿಸಿದ್ದಾರೆ. ಅಲ್ಲದೆ ಪ್ರೀತಂ ಎಂಬ ಬಾಲಕನ ಮೇಲೆ ಮರದ ರೀಪಿನ ತುಂಡು ಬಿದ್ದಿದ್ದು, ಕೂಡಲೇ ಮಕ್ಕಳು ಕೂಗಿಕೊಳ್ಳುತ್ತ ಕೊಠಡಿಯಿಂದ ಹೊರಗೆ ಓಡಿ ಬಂದಿದ್ದಾರೆ. ಮಕ್ಕಳು ಕೂಗು ಕೇಳಿಸಿಕೊಂಡ ಶಿಕ್ಷಕರು ಮತ್ತು ಸ್ಥಳೀಯರು ಧಾವಿಸಿದ್ದಾರೆ.

ಬಿರುಕುಬಿಟ್ಟ ಗೋಡೆಗಳು:

ಸುಮಾರು ಮೂರ್ನಾಲ್ಕು ಅಡಿ ಕುಸಿದಿದ್ದ ಮೇಲ್ಛಾವಣಿ ಇನ್ನೇನು ಸಂಪೂರ್ಣ ಕುಸಿಯಬೇಕಿತ್ತು. ಜಾಗೃತಗೊಂಡ ಸ್ಥಳೀಯರು ಮರದ ತುಂಡೊಂದನ್ನು ಆಧಾರವಾಗಿಟ್ಟು ಕುಸಿಯುವುದನ್ನು ತಡೆದಿದ್ದಾರೆ. ಮೇಲ್ಛಾವಣಿ ಕುಸಿತಕ್ಕೆ ಗೋಡೆಗಳು ಬಿರುಕು ಬಿಟ್ಟಿದೆ.

ಸಿಎಂ ತವರಿನಲ್ಲಿದೆ 10 ವರ್ಷದಿಂದ ಡಾಂಬರು ಕಾಣದ ರಸ್ತೆ, ಬಸ್‌ ಸಂಚಾರವಿಲ್ಲದ ಊರು

ಶಾಲಾ ಕೊಠಡಿಯಲ್ಲಿ ಒಟ್ಟು 8 ವಿದ್ಯಾರ್ಥಿಗಳಿದ್ದು ಪ್ರೀತಂ ಎಂಬ ಬಾಲಕನ ಮೇಲೆ ಮರದ ತುಂಡು ಬಿದ್ದು ತುಸು ಗಾಯವಾಗಿತ್ತು. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆಯ ಸಿಆರ್‌ಪಿ ಮಂಜನಾಯ್ಕ್, ಕರಿಮನೆ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಎನ್‌.ವೈ.ಸುರೇಶ್‌ ಭೇಟಿ ನೀಡಿ ಪರಿಶೀಲಿಸಿದರು.

ಶೀಘ್ರ ಕ್ರಮಕ್ಕೆ ಆಗ್ರಹ:

ಏನೋ ಅದೃಷ್ಟವಶಾತ್‌ ಮಕ್ಕಳಿಗೆ ಹಾನಿ ಸಂಭವಿಸಿಲ್ಲ. ಒಂದು ವೇಳೆ ಹಾನಿಯಾಗಿದ್ದರೆ ಯಾರು ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಮಕ್ಕಳಿಗೆ ಕೊಠಡಿಯೇ ಇಲ್ಲದಂತಾಗಿದೆ. ಈ ಬಗ್ಗೆ ತುರ್ತುಕ್ರಮ ಕೈಗೊಳ್ಳಬೇಕು ಮತ್ತು ನೂತನ ಕಟ್ಟಡ ಮಂಜೂರು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಶಿವಮೊಗ್ಗ: ನೆರೆ ಪರಿಹಾರ, ಪುನರ್ವಸತಿ ಕಾರ್ಯ ಚುರುಕು​

ಈ ವೇಳೆ ಮುಖ್ಯಶಿಕ್ಷಕಿ ಪ್ರಮೀಳಾ, ಗ್ರಾಮಸ್ಥರಾದ ಪ್ರಭಾಕರ್‌, ಕುಮಾರ್‌, ಹಿರಿಯಣ್ಣ, ದೇವೇಂದ್ರ, ದೇವರಾಜ್‌, ರಾಜೇಶ್‌, ವಿನಯ, ರಾಜು, ತಿಮ್ಮಪ್ಪಗೌಡ ಇದ್ದರು.

Follow Us:
Download App:
  • android
  • ios