Asianet Suvarna News Asianet Suvarna News

ಶಿವಮೊಗ್ಗ: ನೆರೆ ಪರಿಹಾರ, ಪುನರ್ವಸತಿ ಕಾರ್ಯ ಚುರುಕು​

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 5,500 ಕುಟುಂಬಗಳು ನೆರೆಬಾಧಿತ ಎಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿಹಾಗೂ ನೆರೆಯಿಂದಾಗಿ ಉಂಟಾಗಿರುವ ಹಾನಿ ಅಂದಾಜಿಸಲಾಗುತ್ತಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದರು.

flood relief works start in Shivamogga
Author
Bangalore, First Published Aug 21, 2019, 11:33 AM IST

ಶಿವಮೊಗ್ಗ(ಆ.21): ಜಿಲ್ಲೆಯಲ್ಲಿ ಸುಮಾರು 5,500 ಕುಟುಂಬಗಳು ನೆರೆಬಾಧಿತ ಎಂದು ಗುರುತಿಸಲಾಗಿದ್ದು, 2400 ಕುಟುಂಬಗಳಿಗೆ ಈಗಾಗಲೇ ತುರ್ತು ಪರಿಹಾರವಾಗಿ ತಲಾ 10 ಸಾವಿರ ರು. ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿಹಾಗೂ ನೆರೆಯಿಂದಾಗಿ ಉಂಟಾಗಿರುವ ಹಾನಿ ಅಂದಾಜಿಸಲಾಗುತ್ತಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳ ಸಮೀಕ್ಷೆ ಮಾಡಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

492 ಮನೆ ಸಂಪೂರ್ಣ ಹಾನಿ:

492 ಮನೆಗಳಿಗೆ ಸಂಪೂರ್ಣ ಹಾನಿ ಉಂಟಾಗಿದ್ದು, 5 ಲಕ್ಷ ರು. ಪರಿಹಾರ ಒದಗಿಸಲಾಗುವುದು. ಶೇ.25ರಷ್ಟುಸಣ್ಣಪುಟ್ಟಹಾನಿಗೆ 25 ಸಾವಿರ ರು. ಹಾಗೂ ಶೇ.25ರಿಂದ 75ರಷ್ಟುಹಾನಿಗೆ ಒಂದು ಲಕ್ಷ ರು. ಪರಿಹಾರ ನೀಡಲಾಗುತ್ತಿದೆ. 3 ಸಾವಿರ ಮನೆಗಳು ಭಾಗಶಃ ಹಾನಿಗೀಡಾಗಿವೆ. ಮನೆ ಕಟ್ಟಲು ಅಸಮರ್ಥರಾದವರಿಗೆ ಜಿಲ್ಲಾಡಳಿತದಿಂದ ಮನೆ ನಿರ್ಮಿಸಿ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 10 ಮಂದಿ ಸಾವು:

ಅತಿವೃಷ್ಠಿ ಹಾಗೂ ಪ್ರವಾಹದಿಂದ 70 ಜಾನುವಾರುಗಳು ಹಾಗೂ 23 ಸಾವಿರ ಕೋಳಿ ಸಾವಿಗೀಡಾಗಿವೆ. ಇವುಗಳ ಮಾಲೀಕರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಪರಿಹಾರ ನೀಡುವ ಕಾರ್ಯ ಚಾಲನೆಯಲ್ಲಿದೆ. ಪ್ರವಾಹಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 10 ಮಂದಿ ಸಾವಿಗೀಡಾಗಿದ್ದು, ಅವರ ಕುಟುಂಬದವರಿಗೆ ತಲಾ ಐದು ಲಕ್ಷ ರು. ಪರಿಹಾರ ಒದಗಿಸಲಾಗಿದೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಎರಡು ಮೃತದೇಹಗಳಿಗಾಗಿ ಎನ್‌ಡಿಆರ್‌ಎಫ್‌ ತಂಡ ಇನ್ನೂ ಹುಡುಕಾಟ ಮುಂದುವರೆಸಿದೆ ಎಂದರು.

ಶಾಶ್ವತ ಪರಿಹಾರ ಪರಿಶೀಲನೆ:

ಶಿವಮೊಗ್ಗ ನಗರದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಮನೆಗಳು ಪದೇ ಪದೇ ನೆರೆಗೆ ತುತ್ತಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ನೆರೆಯ ಬಳಿಕ ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಆರೋಗ್ಯ ಇಲಾಖೆಯಿಂದ ಕ್ಲೋರಿನೇಶನ್‌, ಕೀಟನಾಶಕ ಸಿಂಪಡಿಕೆ ಕಾರ್ಯ ಯುದ್ದೋಪಾಧಿಯಲ್ಲಿ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಶಿವಮೊಗ್ಗ: ಮನೆ ಕಳೆದುಕೊಂಡವರಿಗೆ ಮಾಸಿಕ 5 ಸಾವಿರ ರು

ಸಾರ್ವಜನಿಕರಿಂದ ಉತ್ತಮ ಸಹಕಾರ: ರಕ್ಷಣೆ, ಪರಿಹಾರ ಹಾಗೂ ಪುನರ್ವಸತಿ ಕಾರ್ಯದಲ್ಲಿ ಸಾರ್ವಜನಿಕರು, ಅನೇಕ ಸಂಘ ಸಂಸ್ಥೆಗಳು ಸಕ್ರಿಯವಾಗಿ ಕೈಜೋಡಿಸಿದ್ದಾರೆ. ಕೆಲವು ಸಾಹಸ ಅಕಾಡೆಮಿ ಸದಸ್ಯರು ಬೋಟ್‌ಗಳೊಂದಿಗೆ ರಕ್ಷಣಾ ಕಾರ್ಯ ನಡೆಸಿದ್ದಾರೆ. ಎಲ್ಲರ ಸಹಕಾರದಿಂದಾಗಿ ರಕ್ಷಣೆ ಹಾಗೂ ಪರಿಹಾರ ಕಾರ್ಯ ವ್ಯವಸ್ಥಿತವಾಗಿ ನಡೆಸಲು ಸಾಧ್ಯವಾಗಿದೆ. ಪರಿಹಾರ ಕಾರ್ಯದಲ್ಲಿ ಕೈಜೋಡಿಸಿರುವ ಎಲ್ಲರಿಗೂ ಜಿಲ್ಲಾಡಳಿತದಿಂದ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

Follow Us:
Download App:
  • android
  • ios