ಮಂಗಳೂರು(ಜೂ.27): ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಮಿಯಾ ನಿವಾಸಿ, ಉಜಿರೆಯ ಅಡಕೆ ವ್ಯಾಪಾರಿ ಅಚ್ಯುತ ಭಟ್‌ ಎಂಬವರ ಮನೆಗೆ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ದರೋ​ಡೆ​ಕೋ​ರರು ಮನೆಯವರನ್ನು ಕಟ್ಟಿಹಾಕಿ ಅಂದಾಜು 13 ಲಕ್ಷ ರುಪಾಯಿ ಮೌಲ್ಯದ ನಗ- ನಗದು ದರೋಡೆ ಮಾಡಿ​ರುವ ಘಟನೆ ನಡೆ​ದಿದೆ.

ರಾತ್ರಿ 2.45ರ ಸಮಯಕ್ಕೆ ನಾಯಿಗಳು ಬೊಗಳುವ ಶಬ್ದ ಕೇಳಿ ಅಚ್ಯುತ ಅವರು ಬಾಗಿಲು ತೆರೆ​ದಾಗ ನಾಲ್ಕು ಮಂದಿ ಮುಸು​ಕು​ಧಾರಿ ದರೋ​ಡೆ​ಕೋ​ರರು ಮನೆ​ಯೊ​ಳಗೆ ನುಗ್ಗಿ ಅಚ್ಯುತ ಭಟ್‌ ಸಹಿತ ಮನೆ​ಮಂದಿ​ಯನ್ನು ಕಟ್ಟಿ​ಹಾ​ಕಿ ಬೆದ​ರಿಸಿ 40 ಪವನ್‌ ಚಿನ್ನ, ಒಂದು ಕೆಜಿ ಬೆಳ್ಳಿ ಹಾಗೂ 25 ಸಾವಿರ ರುಪಾಯಿ ನಗದು ದೋಚಿ​ದ್ದು, ಪೊಲೀ​ಸ​ರಿಗೆ ಮಾಹಿತಿ ನೀಡಿ​ದರೆ ಜೀವ​ಹಾ​ನಿ​ಗೊ​ಳಿ​ಸು​ವು​ದಾಗಿ ಬೆದ​ರಿ​ಕೆ​ಯೊ​ಡ್ಡಿ​ದ್ದಾ​ರೆಂದು ತಿಳಿ​ದು​ಬಂದಿದೆ.

'ಪ್ರಧಾನಿ ಮೋದಿ ಬಿಜೆಪಿ ಸರ್ಕಾರದಿಂದ ದೇಶದಲ್ಲಿ ಐತಿಹಾಸಿಕ ಬದಲಾವಣೆ'

ಪ್ರಕರಣಕ್ಕೆ ಸಂಬಂಧಿಸಿ​ದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೇ​ಪ್ರ​ಸಾದ್‌ ಸ್ಥಳ​ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪೊಲೀಸ್‌ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಸುಮಾರು 4 ಜನರ ತಂಡ ಮನೆ ಸದಸ್ಯರನ್ನು ಕಟ್ಟಿಹಾಕಿ ಬೆದರಿಸಿ ಹಣ ಹಾಗೂ ಆಭರಣಗಳನ್ನು ದೋಚಿ​ದ್ದಾರೆ. ಈ ಬಗ್ಗೆ ಬೆಳ್ತಂಗಡಿ ಸರ್ಕಲ್‌ ಇನ್ಸ್‌​ಪೆ​ಕ್ಟರ್‌ ಸಂದೇಶ್‌ ಪಿ.ಜಿ. ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕ​ರಣ ದಾಖ​ಲಾ​ಗಿದೆ. ಇದೇ ರೀತಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಹಾಗೂ ಕಾರ್ಕಳದ ಮಾಳ ಎಂಬಲ್ಲಿ ​ದ​ರೋಡೆ ಘಟನೆಗಳು ನಡೆದಿತ್ತು. ಅದಕ್ಕೂ ಈ ಘಟ​ನೆಗೂ ಏನಾದರೂ ಸಂಬಂಧ ಇದೆಯೋ ಎಂಬುವುದನ್ನು ತನಿಖೆ ನಡೆಸಲಾಗುತ್ತಿದ್ದು ಚಿಕ್ಕಮಗಳೂರು ಎಸ್ಪಿ ಅವ​ರಲ್ಲಿ ಮಾತನಾಡಿದ್ದೇನೆ. ದರೋ​ಡೆ​ಕೋ​ರ​ರನ್ನು ಶೀಘ್ರವಾಗಿ ಪತ್ತೆ ಹಚ್ಚಲಾಗುವುದು. ಮನೆಯವರ ಪ್ರಕಾರ ಆರೋಪಿಗಳು ತುಳು ಭಾಷೆಯಲ್ಲಿ ಮಾತನಾಡುತಿದ್ದು ಆ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿ​ಸಿ​ದ​ರು.