ಎರಡು ಇಲಾಖೆಗಳ ಗೊಂದಲದಿಂದಾಗಿ ಮೂರು ವರ್ಷಗಳಿಂದ ರಸ್ತೆ ಅಗಲೀಕರಣ ಕಾಮಗಾರಿ ಸ್ಥಗಿತವಾಗಿರುವುದಕ್ಕೆ ನೂರಾರು ಜನರು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.01): ಎರಡು ಇಲಾಖೆಗಳ ಗೊಂದಲದಿಂದಾಗಿ ಮೂರು ವರ್ಷಗಳಿಂದ ರಸ್ತೆ ಅಗಲೀಕರಣ ಕಾಮಗಾರಿ ಸ್ಥಗಿತವಾಗಿರುವುದಕ್ಕೆ ನೂರಾರು ಜನರು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆ ಶನಿವಾರಸಂತೆ ವಲಯ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ ನೂರಾರು ಜನರು ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳಿಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಅರಣ್ಯ ಇಲಾಖೆ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಪ್ರತಿಭಟನಾಕಾರರು ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿ ನುಗ್ಗಲು ಯತ್ನಿಸಿದರು. ಆದರೆ ಸ್ಥಳದಲ್ಲಿಯೇ ಇದ್ದ ಹಲವು ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಕಚೇರಿಯಿಂದ ಹೊರಗೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ದುಂಡಳ್ಳಿ ಬಿಳಹ ಮತ್ತು ಯಸಳೂರು ರಸ್ತೆ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆ ಮೂರು ವರ್ಷಗಳ ಹಿಂದೆ ಚಾಲನೆ ನೀಡಿತ್ತು. ಕಾಮಗಾರಿ ಪ್ರಾರಂಭಗೊಂಡಿದ್ದರೂ ಬಳಿಕ ಅರಣ್ಯ ಇಲಾಖೆ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಬೇಕಾಗಿದ್ದರಿಂದ ರಸ್ತೆ ಕಾಮಗಾರಿ ಸ್ಥಗಿತಗೊಂಡಿತ್ತು. ರಸ್ತೆಗೆ ಜಲ್ಲಿ, ಮರಳಿನ ಮಿಶ್ರಣಗಳನ್ನು ರಸ್ತೆಗೆ ಹಾಕಿ ಬಿಟ್ಟಿರುವುದರಿಂದ ತೀವ್ರ ಧೂಳೆದ್ದು ರಸ್ತೆಯಲ್ಲಿ ಜನರು ಅಷ್ಟೇ ವಾಹನಗಳ ಸಂಚಾರ ಮಾಡುವುದೇ ದುಸ್ಥರವಾಗಿ ಹೋಗಿದೆ. ಇದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದ್ದು ಇನ್ನಿಲ್ಲದ ಪರಿಪಾಟಲು ಪಡಬೇಕಾಗಿದೆ.
ಕೇಂದ್ರ ಬಜೆಟ್ ಬಗ್ಗೆ ನಿರೀಕ್ಷೆ ಇದ್ದರೂ ಎಲ್ಲವೂ ಸುಳ್ಳಾಗುತ್ತದೆ: ಸಿಎಂ ಸಿದ್ದರಾಮಯ್ಯ ಲೇವಡಿ
ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಮರಗಳನ್ನು ತೆರವು ಮಾಡದೇ ಇರುವುದರಿಂದ ಸಾಧ್ಯವಾಗುತ್ತಿಲ್ಲ ಎಂಬ ಉತ್ತರ ಹೇಳುತ್ತಿದ್ದರು. ಹೀಗಾಗಿಯೇ ದುಂಡಳ್ಳಿ, ಬಿಳಹ ಸೇರಿದಂತೆ ಹಲವು ಗ್ರಾಮಗಳ ನೂರಾರು ಜನರು ಶನಿವಾರಸಂತೆ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಸಂದರ್ಭ ಮಾತನಾಡಿದ ಮುಖಂಡ ರಘು ಕಾಮಗಾರಿ ನಡೆಯುತ್ತಿದ್ದ 9 ಕಿಲೋ ಮೀಟರ್ ರಸ್ತೆಯ ಪೈಕಿ 6 ಕಿಲೋ ಮೀಟರ್ ಕಾಮಗಾರಿ ನಡೆದಿದೆ. ಉಳಿದ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಸಾಕಷ್ಟು ಮರಗಳನ್ನು ತೆರವು ಮಾಡಬೇಕಾಗಿತ್ತು. ಇದರ ಪರಿಹಾರವಾಗಿ 14 ಲಕ್ಷವನ್ನು ಲೋಕೋಪಯೋಗಿ ಇಲಾಖೆ ಅರಣ್ಯ ಇಲಾಖೆಗೆ ಭರಿಸಬೇಕಾಗಿತ್ತು ಎಂಬ ಮಾಹಿತಿದೆ.
ಈಗ ನೋಡಿದರೆ ಅರಣ್ಯ ಇಲಾಖೆಯವರು 74 ಲಕ್ಷ ಕೊಡಬೇಕೆಂದು ಹೇಳುತ್ತಿದ್ದಾರೆ. ಏನೇ ಆಗಲಿ ಎರಡು ಇಲಾಖೆಗಳು ಅವರ ಗೊಂದಲವನ್ನು ಪರಿಹರಿಸಿಕೊಂಡು ಕಾಮಗಾರಿಗೆ ಅನುವು ಮಾಡಿಕೊಡಬೇಕಾಗಿತ್ತು. ಎರಡು ಇಲಾಖೆಗಳ ಗೊಂದಲಕ್ಕೆ ಹಲವು ಹಳ್ಳಿಗಳ ಸಾವಿರಾರು ಜನರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸದ್ಯ ಅವರ ಮನವಿಯ ಮೇರೆಗೆ ಒಂದು ವಾರ ಸಮಯವಕಾಶ ನೀಡುತ್ತಿದ್ದೇವೆ. ಇನ್ನೊಂದು ವಾರದಲ್ಲಿ ಕಾಮಗಾರಿ ಆರಂಭವಾಗದಿದ್ದರೆ ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸ್ಥಳೀಯರಾದ ಸುಬ್ರಹ್ಮಣ್ಯ ಅವರು ಮಾತನಾಡಿ ರಸ್ತೆ ಅಗಲೀಕರಣ ಮಾಡುವುದಾಗಿ ನಮ್ಮ ತೋಟದ ಬೇಲಿಯನ್ನೆಲ್ಲಾ ಕಿತ್ತು ಎಸೆದು ಎರಡು ವರ್ಷಗಳಿಗೂ ಮೇಲಾಗಿದೆ. ನಮ್ಮ ತೋಟಗಳ ಬದಿಯಲ್ಲಿ ಇರುವ ಮರಗಳನ್ನು ತೆರವು ಮಾಡದೇ ಇರುವುದರಿಂದ ನಾವು ಇಂದಿಗೂ ನಮ್ಮ ತೋಟಕ್ಕೆ ಬೇಲಿಯನ್ನು ಮರು ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇದು ಬಹುತ್ವದ ದೇಶ, ಹಿಂದೂ ರಾಷ್ಟ್ರ ನಿರ್ಮಾಣ ಅಸಾಧ್ಯ, ನಿಮ್ಮ ಆಶೀರ್ವಾದದಿಂದ ಸಿಎಂ ಆಗಿದ್ದೇನೆ: ಸಿದ್ದರಾಮಯ್ಯ
ಇದರಿಂದ ನಮ್ಮ ತೋಟಗಳಲ್ಲಿ ಸಾಕಷ್ಟು ನಷ್ಟವಾಗುತ್ತಿದೆ. ಇದು ಒಂದಡೆಯಾದರೆ ಮತ್ತೊಂದೆಡೆ ಧೂಳಿನಿಂದಾಗಿ ಬೆಳೆಗಳೂ ಹಾಳಾಗುತ್ತಿವೆ. ನಾವು ಸಹ ಅಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇನ್ನಾದರೂ ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳು ಹೊಂದಾಣಿಕೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ರಸ್ತೆ ಕಾಮಗಾರಿ ಪೂರ್ಣಗೊಳಿಸಲಿ ಎಂದು ಆಗ್ರಹಿಸಿದ್ದಾರೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಒಂದು ವಾರದೊಳಗೆ ಮರಗಳನ್ನು ತೆರವು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದು ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ.
