Asianet Suvarna News Asianet Suvarna News

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಸಾಲು ಸಾಲು ಗುಂಡಿಗಳು..!

6 ವಿಧಾನಸಭಾ ಕ್ಷೇತ್ರದಲ್ಲಿ ಒಂದರಲ್ಲೂ ರಸ್ತೆಗಳು ಸರಿ ಇಲ್ಲ, ಲಕ್ಷಾಂತರ ಜನ ಓಡಾಡುವ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲೇ ಗುಂಡಿ, ಪ್ರಮುಖ ರಸ್ತೆಗಳಲ್ಲೇ ಅದ್ವಾನ

Road Potholes in Bengaluru West Zone grg
Author
First Published Oct 28, 2022, 6:30 AM IST

ಸಂಪತ್‌ ತರೀಕೆರೆ

ಬೆಂಗಳೂರು(ಅ.28):  ಮೆಜೆಸ್ಟಿಕ್‌, ಕಾರ್ಡ್‌ ರಸ್ತೆ, ಮಲ್ಲೇಶ್ವರಂ, ಶೇಷಾದ್ರಿಪುರಂ, ಮಾಗಡಿ ರಸ್ತೆ ಸೇರಿದಂತೆ ಬೆಂಗಳೂರು ಪಶ್ಚಿಮ ವಲಯ ನಿತ್ಯ ಸಾವಿರಾರು ವಾಹನ ಸಂಚಾರ ಕಾಣುವ ಪ್ರಮುಖ ರಸ್ತೆಗಳನ್ನು ಹೊಂದಿವೆ. ಆದರೆ, ಮಳೆ ಮತ್ತು ಅಸಮರ್ಪಕ ನಿರ್ವಹಣೆಯಿಂದ ಈ ರಸ್ತೆಗಳಲ್ಲಿ ನೂರಾರು ಗುಂಡಿಗಳು ನಿರ್ಮಾಣಗೊಂಡಿದ್ದು, ವಾಹನ ಸವಾರರು ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡೇ ಸಂಚರಿಸಬೇಕಾದ ದುಸ್ಥಿತಿಯಿದೆ.

ಬಿಬಿಎಂಪಿ ಪಶ್ಚಿಮ ವಲಯದಲ್ಲಿ ರಾಜಾಜಿ ನಗರ, ಮಹಾಲಕ್ಷ್ಮೇಪುರಂ, ಮಲ್ಲೇಶ್ವರಂ, ಗಾಂಧಿ ನಗರ, ಗೋವಿಂದರಾಜ ನಗರ, ಚಾಮರಾಜ ಪೇಟೆ ಸೇರಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 44 ವಾರ್ಡ್‌ಗಳಿವೆ. ಗಾಂಧಿ ನಗರ, ಮಲ್ಲೇಶ್ವರ, ರಾಜಾಜಿ ನಗರ ಕ್ಷೇತ್ರಗಳಲ್ಲಿ ವಾಣಿಜ್ಯ ಪ್ರದೇಶಗಳೇ ಹೆಚ್ಚು ಇರುವುದರಿಂದ ಇಲ್ಲಿ ನಿತ್ಯವೂ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಕಳೆದ ಎರಡು ವರ್ಷ ಕೋವಿಡ್‌ನಿಂದ ರಸ್ತೆಗಳ ನಿರ್ವಹಣೆ ಸರಿಯಾಗಿ ಆಗದೆ ಹಲವೆಡೆ ರಸ್ತೆ ಗುಂಡಿಗಳದ್ದೇ ಕಾರುಬಾರು. ಹೀಗಾಗಿ ಅನೇಕ ಅಪಘಾತಗಳು ಸಂಭವಿಸಿವೆ. ಜೊತೆಗೆ ಇತ್ತೀಚೆಗೆ ಸುಜಾತ ಟಾಕೀಸ್‌ ರಸ್ತೆಯಲ್ಲಿ ಮಹಿಳೆಯೊಬ್ಬರು ರಸ್ತೆ ಗುಂಡಿ ತಪ್ಪಿಸಲು ಹೋಗಿ ಸಾವು ಕಂಡಿದ್ದ ಉದಾಹರಣೆ ಹಸಿಯಾಗಿದೆ.

Bengaluru: ಮಹದೇವಪುರದಲ್ಲೀಗ ರಸ್ತೆ ಗುಂಡಿ ಗಂಡಾಂತರ!

ಪಶ್ಚಿಮ ವಲಯದ ಪ್ರಮುಖ ವಾಣಿಜ್ಯ ಕೇಂದ್ರ ಗಾಂಧಿ ನಗರದ ಓಕಲೀಪುರಂ, ಮೆಜೆಸ್ಟಿಕ್‌ನಲ್ಲಿ ಹಲವು ರಸ್ತೆ ಗುಂಡಿಗಳಿವೆ. ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಗುಂಡಿ ಇದ್ದರೂ ಅದನ್ನು ಮುಚ್ಚುವ ಕಾರ್ಯಕ್ಕೆ ಬಿಎಂಟಿಸಿ ಮುಂದಾಗಿಲ್ಲ. ಅದು ನಮ್ಮ ಕೆಲಸವಲ್ಲ, ಬಿಬಿಎಂಪಿ ಗುಂಡಿ ಮುಚ್ಚುತ್ತಿಲ್ಲ ಎಂದು ಜವಾಬ್ದಾರಿಯನ್ನು ಪಾಲಿಕೆ ಹೆಗಲಿಗೆ ವರ್ಗಾಯಿಸಿ ಲಕ್ಷಾಂತರ ಜನರು ನಿತ್ಯವೂ ಓಡಾಡುವ ಬಿಎಂಟಿಸಿ ನಿಲ್ದಾಣವನ್ನೇ ಅಪಘಾತ ವಲಯವಾಗಿ ಮಾಡುವ ಹಂತಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಪುಷ್ಪಮಾಲಾ ಹೋಟೆಲ್‌ ಎದುರಿನಿಂದ ಬಿಎಂಟಿಸಿ ಬಸ್‌ ನಿಲ್ದಾಣದೊಳಗೆ ಬರುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಗುಂಡಿಗೆ ಇಳಿಯುವ ಬಸ್‌ಗಳು ದೊಡ್ಡ ಹೊಂಡಕ್ಕೆ ಬಿದ್ದು ಮೇಲೆದ್ದ ಅನುಭವವನ್ನು ಪ್ರಯಾಣಿಕರಿಗೆ ನೀಡುತ್ತಿವೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ರಸ್ತೆ ಗುಂಡಿಗಳಿಂದಾಗಿ ನಿಗದಿತ ಸಮಯಕ್ಕೆ ಬಸ್‌ಗಳು ಹೊರ ಬರಲು, ಒಳಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇನ್ನು ಮಳೆ ಬಂದು ಈ ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡರಂತೂ ರಸ್ತೆ ಯಾವುದು, ಗುಂಡಿ ಯಾವುದು ಗೊತ್ತಾಗದೇ ಹಲವರು, ಎಡವಿ ಬಿದ್ದಿರುವ ಅನೇಕ ಘಟನೆಗಳು ಇಲ್ಲಿ ನಡೆದಿವೆ. ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲವಷ್ಟೇ. ಆದರೂ ರಸ್ತೆ ಗುಂಡಿ ಮುಚ್ಚದಿದ್ದರೆ ಮುಂದೊಂದು ದಿನ ಅಪಾಯ ತಪ್ಪಿದ್ದಲ್ಲ.

ನಿತ್ಯವೂ ನರಕದ ಶಿಕ್ಷೆ

ವಾಟಾಳ್‌ ನಾಗರಾಜ್‌ ರಸ್ತೆ, ರಾಜಕುಮಾರ್‌ ರಸ್ತೆ, ರಾಜಾಜಿ ನಗರ 6ನೇ ಬ್ಲಾಕ್‌, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಸವೀರ್‍ಸ್‌ ರಸ್ತೆಗಳು, ಕೆ.ಬಿ.ಟೆಂಪಲ್‌ ರಸ್ತೆ, ಮಾಗಡಿ ರಸ್ತೆ, ಕಾರ್ಡ್‌ ರಸ್ತೆಯ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಕೆಳಗೆ, ಜಿ.ಟಿ.ಮಾಲ್‌ ರಸ್ತೆ, ವೀರೇಶ್‌ ಚಿತ್ರಮಂದಿರ ಜಂಕ್ಷನ್‌, ಶೇಷಾದ್ರಿಪುರಂ ಏರ್‌ಟೆಲ್‌ ಕಚೇರಿ ಸಮೀಪದ ಪೆಟ್ರೋಲ್‌ಬಂಕ್‌ ಬಳಿ, ಉಮೇಶ್‌ ಕ್ಯಾಂಟೀನ್‌ ರಸ್ತೆ, ಸ್ವಾತಂತ್ರ್ಯ ಉದ್ಯಾನದ ಕಡೆಯಿಂದ ಮೈಸೂರು ಬ್ಯಾಂಕ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಮಲ್ಲೇಶ್ವರ 18 ಕ್ರಾಸ್‌ನಿಂದ ಸಿ.ವಿ.ರಾಮನ್‌ ರಸ್ತೆಗೆ ಹೋಗುವ ಮಾರ್ಗ, ನಂದಿನಿ ಲೇಔಟ್‌, ಕಾಡುಮಲ್ಲೇಶ್ವರ ವಾರ್ಡ್‌ ರಸ್ತೆಗಳು ಹೀಗೆ ಹಲವು ಮಾರ್ಗಗಳಲ್ಲಿ ನೂರಾರು ರಸ್ತೆ ಗುಂಡಿಗಳಿದ್ದು, ವಾಹನ ಸವಾರರು ನಿತ್ಯ ನರಕದ ಶಿಕ್ಷೆ ಅನುಭವಿಸುವಂತಾಗಿದೆ.

ಸಮರೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚಿ: ಸಿಎಂ ಬೊಮ್ಮಾಯಿ

ವರ್ಷದಿಂದ ರಸ್ತೆ ಡಾಂಬರ್‌ ಹಾಕಿಲ್ಲ

ಪಶ್ಚಿಮ ವಲಯ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು ಮತ್ತು ವಾರ್ಡ್‌ಗಳಲ್ಲಿ ರಸ್ತೆ ಡಾಂಬರೀಕರಣ ಮಾಡಿ ವರ್ಷಗಳೇ ಕಳೆದಿವೆ. ಈ ಹಿಂದೆ ಕೋವಿಡ್‌ ಸಂಕಷ್ಟದಿಂದ ರಸ್ತೆಗಳ ನಿರ್ವಹಣೆ ಸರಿಯಾಗಿ ಆಗಿರಲಿಲ್ಲ. ಆ ನಂತರವೂ ಹೈಕೋರ್ಚ್‌ ಬಿಬಿಎಂಪಿ ವಿರುದ್ಧ ಚಾಟಿ ಬೀಸಿದ ನಂತರ ಕೆಲವೇ ಕೆಲವು ಬೆರಳೆಣಿಕೆಯಷ್ಟುರಸ್ತೆಗಳಿಗೆ ಡಾಂಬರೀಕರಣ ಮಾಡಿದ್ದರೂ, ಗುಂಡಿ ಮುಚ್ಚುವ ತೇಪೆ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಲಾಗಿತ್ತು. ರಾಜಾಜಿ ನಗರ ಮತ್ತು ಗೋವಿಂದರಾಜ ನಗರದ ಕೆಲವು ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಿದ್ದು, ವಾರ್ಡ್‌ ರಸ್ತೆಯನ್ನು ಕೇಳುವವರೇ ಇಲ್ಲದಂತಾಗಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಕೇಳಿದರೆ ಸಮರ್ಪಕ ಮಾಹಿತಿ ಲಭ್ಯವಾಗಲಿಲ್ಲ.

ಒಟ್ಟು 1700 ಗುಂಡಿಗಳು

ಬಿಬಿಎಂಪಿ ನೀಡಿರುವ ಮಾಹಿತಿ ಪ್ರಕಾರ ಪ್ರಮುಖ ರಸ್ತೆಗಳು ಮತ್ತು ವಾರ್ಡ್‌ ರಸ್ತೆಗಳು ಸೇರಿದಂತೆ ಒಟ್ಟು 1700 ಗುಂಡಿಗಳನ್ನು ಮಾತ್ರ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ. ಈ ಪೈಕಿ 1205 ಗುಂಡಿಗಳನ್ನು ಈಗಾಗಲೇ ಮುಚ್ಚಿದ್ದು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ 480 ಗುಂಡಿಗಳನ್ನು ಮುಚ್ಚುವ ಗುರಿ ಹೊಂದಲಾಗಿದೆ ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಈ ಅಂಕಿ-ಸಂಖ್ಯೆಯನ್ನು ಸಾರ್ವಜನಿಕರು ಪ್ರಶ್ನಿಸುತ್ತಾರೆ. ಬಿಬಿಎಂಪಿ ನೀಡುವ ಲೆಕ್ಕಕ್ಕಿಂತ ಹಲವು ಪಟ್ಟು ಹೆಚ್ಚು ಗುಂಡಿಗಳಿವೆ ಎಂದೇ ವಾದಿಸುತ್ತಾರೆ. ಅಲ್ಲದೆ, ಸಣ್ಣಪುಟ್ಟಗುಂಡಿಗಳು ಲೆಕ್ಕವಿಲ್ಲದಷ್ಟಿದ್ದು, ಅವುಗಳನ್ನು ಯಾವಾಗ ಮುಚ್ಚುತ್ತೀರಿ ಎಂಬ ಪ್ರಶ್ನೆಗೆ ಅಧಿಕಾರಿಗಳಲ್ಲಿ ಉತ್ತರವಿಲ್ಲ!
 

Follow Us:
Download App:
  • android
  • ios