ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ನಿಂದ ಕಾಚೋಹಳ್ಳಿವರೆಗೆ 15 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಚಾಲನೆ, 40 ಕೋಟಿ ವೆಚ್ಚ, ಬಿಡಿಎಯಿಂದ ಕಾಮಗಾರಿ 

ಬೆಂಗಳೂರು(ಡಿ.14):  ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಣ್ಣು ಸ್ಥಿರೀಕರಣ ತಂತ್ರಜ್ಞಾನ (ಸಾಯಿಲ್‌ ಸ್ಟೆಬಿಲೈಸೇಶನ್‌ ಟೆಕ್ನಾಲಾಜಿ) ಬಳಸಿ ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ನಿಂದ ಕಾಚೋಹಳ್ಳಿವರೆಗಿನ 15 ಕಿಲೋಮೀಟರ್‌ ಉದ್ದದ ರಸ್ತೆಯನ್ನು ನಿರ್ಮಿಸಲು ಬಿಡಿಎ ಚಾಲನೆ ನೀಡಿದೆ. ಮಂಗಳವಾರ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅವರು ಕಡಬಗೆರೆ ಕ್ರಾಸ್‌ನಿಂದ ಕಾಚೋಹಳ್ಳಿವರೆಗಿನ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಏಕಕಾಲಕ್ಕೆ ಜರ್ಮನ್‌ ಮೂಲದ ಐದು ಯಂತ್ರಗಳನ್ನು ಬಳಸಿ ಈ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಈ ಯಂತ್ರಗಳ ಸಹಾಯದಿಂದ ದಿನಕ್ಕೆ ಸುಮಾರು ಅರ್ಧ ಕಿ.ಮೀ ಉದ್ದದ ರಸ್ತೆ ನಿರ್ಮಾಣವಾಗಲಿದೆ. ಈ ರಸ್ತೆ ನಿರ್ಮಾಣಕ್ಕೆ ಬಿಡಿಎ .40 ಕೋಟಿ ಬಿಡುಗಡೆ ಮಾಡಿದ್ದು, ಸಾಮಾನ್ಯ ಡಾಂಬರ್‌ ರಸ್ತೆಗಿಂತ ಈ ರಸ್ತೆ ಅತ್ಯುತ್ತಮ ಗುಣಮಟ್ಟದ್ದಾಗಿರಲಿದೆ ಎಂದರು.

ಬೆಂಗಳೂರು: ಅಂತೂ ಕಾರಂತ ಲೇಔಟ್‌ ಕೆಲಸ ಆರಂಭಕ್ಕೆ ದಿನಗಣನೆ..!

ಇದಕ್ಕೆ ಕಾಂಕ್ರೀಟ್‌ ರಸ್ತೆಯ ವೆಚ್ಚಕ್ಕಿಂತ ಕಡಿಮೆ ವೆಚ್ಚವಾಗಲಿದ್ದು, ಪ್ರಾಯೋಗಿಕವಾಗಿ ಈ ರಸ್ತೆ ನಿರ್ಮಾಣ ಮಾಡಲಾಗುವುದು. ಆ ನಂತರ ಬಿಡಿಎ ನಿರ್ಮಾಣ ಮಾಡಲಿರುವ ಎಲ್ಲಾ ರಸ್ತೆಗಳನ್ನು ಹಂತ ಹಂತವಾಗಿ ಇದೇ ತಂತ್ರಜ್ಞಾನ ಬಳಸಿ ನಿರ್ಮಿಸಲು ಯೋಜಿಸಲಾಗಿದೆ. 15 ಕಿ.ಮೀ ಉದ್ದದ ರಸ್ತೆಯು 10 ಮೀಟರ್‌ ಅಗಲ ಇರಲಿದ್ದು, ಜನವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ರಸ್ತೆ ನಿರ್ಮಾಣದಿಂದ ಸುತ್ತಮುತ್ತಲ ಗ್ರಾಮಗಳ ಜನತೆ ಬೆಂಗಳೂರು ನಗರ ಮತ್ತು ವಿವಿಧ ನಗರಗಳಿಗೆ ಉತ್ತಮ ರಸ್ತೆ ಸಂಪರ್ಕ ಹೊಂದಲಿದ್ದು ಆರ್ಥಿಕ, ಸಾಮಾಜಿಕವಾಗಿ ಅನುಕೂಲ ಪಡೆಯಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಡಿಎ ಅಭಿಯಂತರ ಸದಸ್ಯ ಶಾಂತರಾಜಣ್ಣ, ಅಭಿಯಂತರರಾದ ಸುಷ್ಮಾ, ಸುರೇಶ್‌, ಪ್ರಕಾಶ್‌ ಉಪಸ್ಥಿತರಿದ್ದರು.

ಡಾಂಬರ್‌, ಜಲ್ಲಿ, ಮಣ್ಣು ಬಳಸಿ ರಸ್ತೆ ನಿರ್ಮಾಣ

ರಸ್ತೆಯಲ್ಲಿನ ಮಣ್ಣು, ಡಾಂಬರ್‌, ಜಲ್ಲಿಯನ್ನು ಬಳಸಿಕೊಂಡು ರಸ್ತೆ ನಿರ್ಮಾಣ ಮಾಡುವ ತಂತ್ರಜ್ಞಾನ ಇದಾಗಿದೆ. 1 ಅಡಿ ಆಳದವರೆಗೆ ಇರುವ ಡಾಂಬರ್‌, ಜಲ್ಲಿ ಮತ್ತು ಮಣ್ಣನ್ನು ಜರ್ಮನ್‌ನಿಂದ ತರಿಸಿರುವ ಯಂತ್ರಗಳಿಂದ ಪುಡಿ ಮಾಡಿ ಪೇಸ್ಟ್‌ ರೀತಿಯಲ್ಲಿ ಮಾರ್ಪಡಿಸಿ ಅದಕ್ಕೆ ಸಿಮೆಂಟ್‌, ರಾಸಾಯನಿಕ ಮತ್ತು ನೀರನ್ನು ಸೇರಿಸಿ ಮಣ್ಣನ್ನು ಸ್ಥಿರೀಕರಿಸಲಾಗುತ್ತದೆ. ಇದನ್ನು ರಸ್ತೆಗೆ ಹಾಕಿ 3 ದಿನಗಳವರೆಗೆ ಕ್ಯೂರಿಂಗ್‌ ಮಾಡಲಾಗುತ್ತದೆ. ನಂತರ ಅದರ ಮೇಲೆ ಜಿಯೋ ಟೆಕ್ಸ್‌ಟೈಲ್‌ ಲೇಯರ್‌ನ ಅತ್ಯಂತ ತೆಳುವಾದ ಪ್ಲಾಸ್ಟಿಕ್‌ ಶೀಟ್‌ ಹಾಕಲಾಗುತ್ತದೆ. ಇದರ ಮೇಲೆ ಡಾಂಬರ್‌ ಹಾಕಲಾಗುತ್ತದೆ ಎಂದು ಬಿಡಿಎ ಎಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.