Asianet Suvarna News Asianet Suvarna News

ಬೆಂಗಳೂರು: ಅಂತೂ ಕಾರಂತ ಲೇಔಟ್‌ ಕೆಲಸ ಆರಂಭಕ್ಕೆ ದಿನಗಣನೆ..!

ಕಳೆದ ಒಂದೂವರೆ ದಶಕದಿಂದ ನಿವೇಶನಕ್ಕಾಗಿ ಕಾಯುತ್ತಿರುವ ಗ್ರಾಹಕರಿಗೆ ನಿವೇಶನ ಲಭಿಸುವ ಆಸೆ ಮೊಳಕೆಯೊಡೆದಿದೆ.

Karant Layout Work Likely to Start on January 2023 in Bengaluru grg
Author
First Published Dec 1, 2022, 9:00 AM IST

ಸಂಪತ್‌ ತರೀಕೆರೆ

ಬೆಂಗಳೂರು(ಡಿ.01): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು(ಬಿಡಿಎ) ನಿರ್ಮಿಸಲು ಉದ್ದೇಶಿಸಿರುವ ಡಾ.ಕೆ.ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಕಾಮಗಾರಿ 2023 ಜನವರಿ ಮೂರನೇ ವಾರದಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಕಳೆದ ಒಂದೂವರೆ ದಶಕದಿಂದ ನಿವೇಶನಕ್ಕಾಗಿ ಕಾಯುತ್ತಿರುವ ಗ್ರಾಹಕರಿಗೆ ನಿವೇಶನ ಲಭಿಸುವ ಆಸೆ ಮೊಳಕೆಯೊಡೆದಿದೆ.

ಇದೀಗ ಮೂರನೇ ಬಾರಿಗೆ ಬಿಡಿಎ ಟೆಂಡರ್‌ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಕಾರಂತ ಬಡಾವಣೆಯಲ್ಲಿ ಒಟ್ಟಾರೆ 9 ಸೆಕ್ಟರ್‌ಗಳಿದ್ದು , ನಾಲ್ಕು ಸೆಕ್ಟರ್‌ಗಳಲ್ಲಿ ಟೆಂಡರ್‌ನ ತಾಂತ್ರಿಕ ಸುತ್ತು ಪೂರ್ಣಗೊಂಡಿದೆ. ಹಣಕಾಸು ಸುತ್ತಿನ ಪ್ರಕ್ರಿಯೆ ಮಾತ್ರ ಬಾಕಿಯಿದ್ದು ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಉಳಿದಂತೆ 5 ಸೆಕ್ಟರ್‌ಗಳಿಗೆ ಬಿಡ್‌ದಾರರು ಭಾಗವಹಿಸಲು ಮುಂದಾಗುತ್ತಿಲ್ಲ. ಕೇವಲ ಒಂದೆರಡು ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದರೂ ಸಮರ್ಪಕ ದಾಖಲೆಗಳನ್ನು ಸಲ್ಲಿಸದ ಕಾರಣ ಅವುಗಳನ್ನು ರದ್ದು ಮಾಡಲಾಗಿತ್ತು. ಇದೀಗ ಪುನಃ ಐದು ಸೆಕ್ಟರ್‌ಗಳಿಗೆ ಮರು ಟೆಂಡರ್‌ ಕರೆಯಲಾಗಿದೆ.

ಬೆಂಗಳೂರು: ಕೆಂಪೇಗೌಡ ಬಡಾವಣೆಗೆ ಬಿಡಿಎ ಅನ್ಯಾಯ..!

ಪ್ರಸ್ತುತ ಕಾರಂತ ಬಡಾವಣೆ ನಿರ್ಮಾಣದ ಉಸ್ತುವಾರಿಯನ್ನು ಸುಪ್ರೀಂ ಕೋರ್ಟ್‌ ನೇಮಿಸಿದ್ದ ನ್ಯಾ.ಚಂದ್ರಶೇಖರ್‌ ಅಧ್ಯಕ್ಷತೆಯ ಸಮಿತಿ ನೋಡಿಕೊಳ್ಳುತ್ತಿದೆ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಉತ್ತರ ಬೆಂಗಳೂರಿನ ದೊಡ್ಡಬಳ್ಳಾಪುರ ಮತ್ತು ಹೆಸರುಘಟ್ಟನಡುವಿನ 17 ಗ್ರಾಮಗಳಿಂದ ಒಟ್ಟು 3,546 ಎಕರೆ ಭೂಮಿಯನ್ನು ಪಡೆಯುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ 5,337 ಕೋಟಿ ರು. ಮೊತ್ತವನ್ನು ಅಂದಾಜಿಸಲಾಗಿದೆ.

ಇದೀಗ 2,600 ಎಕರೆ ಭೂಮಿ ಬಿಡಿಎಗೆ ಸಿಕ್ಕಿದೆ. 1,270 ಕೋಟಿ ರು. ಅಂದಾಜು ಮೊತ್ತದೊಂದಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಸ್ವಾಧೀನ ಪಡಿಸಿಕೊಂಡಿರುವ ಜಾಗವನ್ನು ಅಭಿವೃದ್ಧಿಪಡಿಸಿ 10 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಯೋಜಿಸಲಾಗಿದೆ. ನಿವೇಶನ ಹಂಚಿಕೆ ಸಂದರ್ಭದಲ್ಲಿ ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಕೊಟ್ಟರೈತರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಬಿಡಿಎ ತಿಳಿಸಿದೆ.

18 ತಿಂಗಳ ಗಡುವು:

ಅಧಿಸೂಚನೆಯಿಂತೆ ಟೆಂಡರ್‌ಗಳನ್ನು ಸ್ವೀಕರಿಸಲು 2022ರ ಡಿಸೆಂಬರ್‌ 1, ಸಂಜೆ 4ಕ್ಕೆ ಅವಕಾಶವಿದೆ. ಮೊದಲ ವಿದ್ಯುನ್ಮಾನ ದಸ್ತಾವೇಜು (ತಾಂತ್ರಿಕ ಬಿಡ್‌) ತೆರೆಯಲು ಡಿ.3ರಂದು ಸಂಜೆ 4.30ರವರೆಗೆ ಕಾಲಾವಕಾಶ ನೀಡಲಾಗಿದೆ. ಟೆಂಡರ್‌ನಲ್ಲಿ ನಿವೇಶನಗಳ ರಚನೆ, ರಸ್ತೆಗಳ ನಿರ್ಮಾಣ, ರಸ್ತೆ ಬದಿ ಚರಂಡಿ, ಅಡ್ಡ ಚರಂಡಿ ಕಾಮಗಾರಿ, ಮಳೆನೀರು ಚರಂಡಿ, ಮಳೆ ನೀರು ಕೊಯ್ಲು, ನೀರು ಪೂರೈಕೆ ಸೇರಿದಂತೆ ರಕ್ಷಣೆ ಕಾಮಗಾರಿ, ಯುಜಿಡಿ ಹಾಗೂ ವಿದ್ಯುತ್‌ ಕಾಮಗಾರಿಗಳನ್ನು ಪ್ರತಿ ಪ್ಯಾಕೇಜ್‌ ಒಳಗೊಂಡಿದೆ. ಇದಕ್ಕೆ ಮಳೆಗಾಲ ಸೇರಿದಂತೆ 18 ತಿಂಗಳ ಗಡುವು ನೀಡಲಾಗಿದೆ.

ಒಂದೂವರೆ ದಶಕದ ಹೋರಾಟ!

ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಭೂಸ್ವಾಧೀನಕ್ಕೆ ಬಿಡಿಎ 2008ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಆದಾದ 10 ವರ್ಷಗಳ ಬಳಿಕ 3,546 ಎಕರೆ ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಈ ಮಧ್ಯೆ ರೈತರ ಆಕ್ಷೇಪಣೆ ಹಿನ್ನೆಲೆಯಲ್ಲಿ 257 ಎಕರೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಸರ್ಕಾರ ಬಿಡಿಎಗೆ ಸೂಚಿಸಿತ್ತು. ಮತ್ತೆ 446 ಎಕರೆ ಜಮೀನು ಭೂಸ್ವಾಧೀನದಿಂದ ಕೈಬಿಡುವಂತೆ ಒತ್ತಾಯ ಕೇಳಿ ಬಂದಿತ್ತು. ಇದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಸಿದ್ದರಾಮಯ್ಯರಿಂದ 400 ಕೋಟಿ ಭೂ ಹಗರಣ: ಎನ್‌.ಆರ್‌.ರಮೇಶ್‌

2012ರಲ್ಲಿ ಈ ವಿಚಾರ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆಗೆ ಬಂದು, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿತ್ತು. ಈ ಮಧ್ಯೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ 5 ವರ್ಷಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿಲ್ಲ ಎಂದು ಆಕ್ಷೇಪಿಸಿ ಕೆಲವು ರೈತರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹೈಕೋರ್ಟ್‌ ಏಕಸದಸ್ಯ ಪೀಠ ಹಾಗೂ ವಿಭಾಗೀಯ ಪೀಠ ರೈತರ ಪರ ತೀರ್ಪು ಕೊಟ್ಟಿತ್ತು. ಇದನ್ನು ಬಿಡಿಎ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಮೂರು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ 2018ರಲ್ಲಿ ಸುಪ್ರೀಂಕೋರ್ಚ್‌ ಹೇಳಿತ್ತು. ಇದನ್ನು ಪ್ರಶ್ನಿಸಿ ಕೆಲವರು ಮೇಲ್ಮನವಿ ಸಲ್ಲಿಸಿದ್ದರು. ಪ್ರಸ್ತುತ ಸುಪ್ರೀಂಕೋರ್ಟ್‌ ವಿಭಾಗೀಯ ಪೀಠ ಮೇಲ್ಮನವಿಗಳನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿದೆ. ಬಡಾವಣೆ ನಿರ್ಮಾಣಕ್ಕೆ ಅಗತ್ಯಕ್ರಮಕೈಗೊಳ್ಳಲು ಸೂಚನೆ ನೀಡಿದೆ ಎನ್ನಲಾಗಿದೆ.
 

Follow Us:
Download App:
  • android
  • ios