ಕೃತಕ ಬುದ್ಧಿಮತ್ತೆಯಲ್ಲಿ ಅಪಾಯ ಹೆಚ್ಚು: ಸಣ್ಣಪ್ಪ

ಇತ್ತೀಚೆಗೆ ಆವಿಷ್ಕಾರಗೊಂಡಿರುವ ಕೃತಕ ಬುದ್ದಿಮತ್ತೆಯ ಬಳಕೆ ಮಾಡುವ ಸಂಬಂಧ ವ್ಯಾಪಕ ಚರ್ಚೆಯ ಅಗತ್ಯವಿದೆ. ಇದರಲ್ಲಿ ಒಳಿತಿಗಿಂತ ಹೆಚ್ಚಾಗಿ ಅಪಾಯವು ಇದೆ ಎಂಬ ಅನುಮಾನ ಕಾಡುತ್ತಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ.ಜೆ.ಸಣ್ಣಪ್ಪ ಹೇಳಿದರು.

Risk is high in artificial intelligence: Sanappa snr

  ತುರುವೇಕೆರೆ :  ಇತ್ತೀಚೆಗೆ ಆವಿಷ್ಕಾರಗೊಂಡಿರುವ ಕೃತಕ ಬುದ್ದಿಮತ್ತೆಯ ಬಳಕೆ ಮಾಡುವ ಸಂಬಂಧ ವ್ಯಾಪಕ ಚರ್ಚೆಯ ಅಗತ್ಯವಿದೆ. ಇದರಲ್ಲಿ ಒಳಿತಿಗಿಂತ ಹೆಚ್ಚಾಗಿ ಅಪಾಯವು ಇದೆ ಎಂಬ ಅನುಮಾನ ಕಾಡುತ್ತಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ.ಜೆ.ಸಣ್ಣಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ, ಎನ್‌ಎಸ್‌ಎಸ್‌ ಹಸಿರು ಪಡೆ, ರೋವರ್‌ ಮತ್ತು ರೇಂಜರ್‌ ಭಾರತೀಯ ಸೇವಾದಳ ಹಾಗೂ ಕ್ರೀಡಾ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಕೃತಕ ಬುದ್ದಿಮತ್ತೆ ಎಂಬುದು ವಿಜ್ಞಾನದ ಮಹತ್ವದ ಮೈಲುಗಲ್ಲಾದರೂ ಸಹ ಅದರ ಸಾಧಕ ಬಾಧಕಗಳತ್ತ ಚಿತ್ತ ಹರಿಸುವುದೂ ಸಹ ಅಷ್ಟೇ ಮುಖ್ಯವಾದುದು ಎಂದರು.

ವಿಜ್ಞಾನದ ಆನ್ವೇಷಣೆ ಹಾಗೂ ಆವಿಷ್ಕಾರಗಳ ಬಗ್ಗೆ ಇಡೀ ಜಗತ್ತು ಬೆರಗುಗಣ್ಣಿನಿಂದ ನೋಡುವಂತಾಗಿದೆ. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಹಾಗೂ ಅತಿಯಾದ ತಂತ್ರಜ್ಞಾನ ಬಳಕೆ ಮಾನವ ಸಂಪನ್ಮೂಲ ಕೊರತೆಯಿರುವ ದೇಶಗಳಿಗೆ ಸಹಕಾರಿಯಾಗಬಹುದು. ಆದರೆ 148 ಕೋಟಿ ಜನಸಂಖ್ಯೆಯುಳ್ಳ ಭಾರತದಂತಹ ಬೃಹತ್‌ ರಾಷ್ಟ್ರಕ್ಕೆ ಮಾರಕವಾಗುತ್ತದೆ. ಅತಿಯಾದ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಬಳಕೆಯಿಂದಾಗಿ ನಿರುದ್ಯೋಗ ಸಮಸ್ಯೆ ಬಹುದೊಡ್ಡ ಪೆಂಡಭೂತವಾಗಿ ಭಾರತವನ್ನು ಕಾಡಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬುದ್ಧಿವಂತಿಕೆಯ ಜೊತೆಗೆ ವಿವೇಕವನ್ನು ಬಳಸಿಕೊಂಡು ಅಗತ್ಯವಿರುವ ಕ್ಷೇತ್ರಗಳಿಗಷ್ಟೇ ಕೃತಕ ಬುದ್ದಿಮತ್ತೆ ಸೇವೆಯನ್ನು ಸೀಮಿತಗೊಳಿಸುವ ಅಗತ್ಯವಿದೆ. ಶಿಕ್ಷಣವೆಂಬುದು ಕೇವಲ ಬೋಧನೆ ಅಥವಾ ಪ್ರವಚನವಾಗಬಾರದು. ಚರ್ಚೆ ವಿಮರ್ಶೆಗಳಾದಾಗ ಮಾತ್ರ ಗೊಂದಲಗಳು ಬಗೆಹರಿಯುತ್ತವೆ. ಇತ್ತೀಚಿನ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುದ್ದಿಗಳನ್ನು ಪರಾಮರ್ಶೆ ಮಾಡಬೇಕಾದ ಅಗತ್ಯವಿದೆ. ಹಂಬಲ ಆಸಕ್ತಿ ಮೈಗೂಡಿಸಿಕೊಳ್ಳುವ ಮೂಲಕ ಅಸಾಧ್ಯವಾದುದನ್ನು ಸಾಧಿಸುವತ್ತ ವಿದ್ಯಾರ್ಥಿಗಳು ಚಿತ್ತ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಗಂಗಾಧರ್‌ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿ ಏನೆಂಬುದರ ಸ್ಪಷ್ಟಅರಿವನ್ನು ಹೊಂದಿರಬೇಕು. ಸಾಧನೆಯತ್ತ ಮುಖ ಮಾಡಿದಾಗ ಇಡೀ ಸಮಾಜ ಗುರುತಿಸುತ್ತದೆ. ನಮ್ಮ ನಡುವೆ ಗಾಂಧೀ, ಅಂಬೇಡ್ಕರ್‌ ರಂತಹ ಮಹಾನ್‌ ವ್ಯಕ್ತಿಗಳು ಇಲ್ಲವಾದರೂ ಅವರ ಸಾಧನೆಗಳು ಇಂದಿಗೂ ಜೀವಂತವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಎಂ.ಎಸ್‌.ತೇಜೇಶ್ವರ್‌ ಅವರು ಸರ್ಕಾರಿ ಜೂನಿಯರ್‌ ಕಾಲೇಜಿಗೆ ಅತ್ಯಾಧುನಿಕ ನಾಮಫಲಕವನ್ನು ಕೊಡುಗೆಯಾಗಿ ನೀಡಿದರು. ಸತ್ಯಗಣಪತಿ ಸೇವಾಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್‌ ರಾಜು ಅವರು ತಮ್ಮ ತಂದೆ ದಿ.ರಾಮಯ್ಯನವರ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕೆ.ಎಲ್‌. ಅನಂತರಾಮು, ಉಪನ್ಯಾಸಕ ವಿ.ಎನ್‌. ನಂಜೇಗೌಡ, ಮುಖ್ಯ ಶಿಕ್ಷಕ ವೆಂಕಟೇಶ್‌, ಉಪನ್ಯಾಸಕ ವರ್ಗ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

Latest Videos
Follow Us:
Download App:
  • android
  • ios