ಶಿವಮೊಗ್ಗದಲ್ಲಿ ವರುಣನ ಆರ್ಭಟ: ರೈಸ್ ಮಿಲ್ ಗೋಡೆ ಕುಸಿತ, ತಪ್ಪಿದ ಭಾರೀ ದುರಂತ
* ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ನಡೆದ ಘಟನೆ
* ಸಾವಿರಾರು ಭತ್ತದ ಚೀಲ ನೀರು ಪಾಲು
* ಸುಮಾರು ಒಂದು ಕೋಟಿ ರೂಪಾಯಿನಷ್ಟು ನಷ್ಟ
ಶಿವಮೊಗ್ಗ(ಜು.10): ಮಲೆನಾಡಿನಲ್ಲಿ ಎಡಬಿಡದೆ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ರೈಸ್ ಮಿಲ್ ವೊಂದರ ಬಾರಿ ಎತ್ತರದ ಗೋಡೆಯೊಂದು ಕುಸಿದು ಸಾವಿರಾರು ಚೀಲಗಳಷ್ಟು ಭತ್ತದ ನೀರು ಪಾಲಾಗಿದೆ. ಇದರೊಂದಿಗೆ ರೈಸ್ ಮಿಲ್ ನ ಯಂತ್ರೋಪಕರಣಗಳು ಹಾನಿಗೀಡಾಗಿದೆ. ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದ ಬೃಂದಾವನ ಡ್ರೈಯರ್ಸ್ ರೈಸ್ ಮಿಲ್ ನ ಗೋಡೆ ಕುಸಿತ ಕಂಡಿದೆ.
ರಾತ್ರಿ ಸುರಿದ ಭಾರಿ ಗಾಳಿ ಮಳೆ, ಗುಡುಗು ಸಿಡಿಲಿನ ರಭಸಕ್ಕೆ 80 ಅಡಿ ಎತ್ತರದ ಗೋಡೆ ಕುಸಿತ ಕಂಡಿದ್ದು ರೈಸ್ ಮಿಲ್ ನ ಸೂರು ಸಂಪೂರ್ಣ ಧರೆಗುರುಳಿ, ಸಾವಿರ ಚೀಲಕ್ಕೂ ಅಧಿಕ ಚೀಲ ಭತ್ತ ನೀರು ಪಾಲಾಗಿದೆ. ಲಕ್ಷಾಂತರ ರೂ ಬೆಲೆಬಾಳುವ ಯಂತ್ರೋಪಕರಣಗಳು, ಡ್ರೈಯರ್ ಮಷಿನ್, 2 ದೊಡ್ಡ ಜನರೇಟರ್ ಮತ್ತು ಕೊಠಡಿ ನೆಲಸಮವಾಗಿದೆ.
ಭೋರ್ಗರೆಯುತ್ತಿವೆ ಜೋಗ, ದೂದ್ ಸಾಗರ: ಕಣ್ಮನ ಸೆಳೆಯುತ್ತಿವೆ ಮೈದುಂಬಿ ಹರಿಯುತ್ತಿರೋ ಜಲಪಾತಗಳು
ಸುಮಾರು 1 ಕೋಟಿಗೂ ಅಧಿಕ ನಾಶ ನಷ್ಟ ಸಂಭವಿಸಿದೆ ಎಂದು ರೈಸ್ ಮಿಲ್ ಮಾಲೀಕರಾದ ವಿನೋದ ಎಸ್. ಮಹಾಲೆ ಮಾಹಿತಿ ನೀಡಿದ್ದಾರೆ. ಸದಾ ಹಮಾಲರು, ಕಾರ್ಮಿಕರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಗೋಡೆ ಕುಸಿದಿದೆ. ರಾತ್ರಿ ವೇಳೆ ನಡೆದ ಅವಘಡ ಹಿನ್ನೆಲೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.