Asianet Suvarna News Asianet Suvarna News

ಪಡಿತರ ಅಕ್ಕಿ ಅಕ್ರಮ: ಆರೋಪಿಗಳ ಪತ್ತೆಯಾಗದೆ ವರ್ಷಾನುಗಟ್ಟಲೆ ಕೊಳೆಯುತ್ತಿರುವ ಪ್ರಕರಣಗಳು..!

ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಹಾಗೂ ಶಹಾಪುರ ಭಾಗದಲ್ಲಿ ಪಡಿತರ ಅಕ್ಕಿ ಅಕ್ರಮ ದಂಧೆ ಅತಿ ಹೆಚ್ಚು. ಬಹುತೇಕ ದೂರು ದಾಖಲಿಸಲಾಗುವುದೇ ಇಲ್ಲ. ಖಾಕಿಪಡೆಯ "ಕೈ" ಕಟ್ಟಿದಂತಿರುವ ಪ್ರಭಾವಿಗಳು ಇವುಗಳ ಬೆಳಕಿಗೆ ಬಾರದಂತೆ ನಿಗಾ ವಹಿಸಿ, ಠಾಣೆಯಲ್ಲೇ ಪಂಚಾಯ್ತಿ ನಡೆಸಿ ಬಿಡುತ್ತಾರೆ ಎನ್ನುವ ಮಾತುಗಳಿವೆ.

Rice Investigation with no Logical End in Yadgir grg
Author
First Published Dec 6, 2023, 9:01 AM IST

ಆನಂದ್‌ ಎಂ. ಸೌದಿ

ಯಾದಗಿರಿ(ಡಿ.06):  ಜಿಲ್ಲೆಯ ಶಹಾಪುರದಲ್ಲಿ ನಡೆದ 2 ಕೋಟಿ ರು. ಮೌಲ್ಯದ 6 ಸಾವಿರ ಕ್ವಿಂಟಲ್‌ ಅನ್ನಭಾಗ್ಯ ಅಕ್ಕಿ ನಾಪತ್ತೆ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಇಂತಹ ಪ್ರಕರಣಗಳು ಪತ್ತೆಯಾಗಿ ಠಾಣೆಗಳಲ್ಲಿ ದೂರು ದಾಖಲಾಗಿವೆಯಾದರೂ, "ತನಿಖೆ ಪ್ರಗತಿಯಲ್ಲಿದೆ" ಹೆಸರಲ್ಲಿ ಧೂಳು ತಿನ್ನುತ್ತ ಮೂಲೆ ಸೇರಿವೆ. ಜಿಲ್ಲೆಯ ಗುರುಮಠಕಲ್‌ ಹಾಗೂ ಶಹಾಪುರ ಭಾಗದಲ್ಲಿ ಪಡಿತರ ಅಕ್ಕಿ ಅಕ್ರಮ ದಂಧೆ ಅತಿ ಹೆಚ್ಚು. ಬಹುತೇಕ ದೂರು ದಾಖಲಿಸಲಾಗುವುದೇ ಇಲ್ಲ. ಖಾಕಿಪಡೆಯ "ಕೈ" ಕಟ್ಟಿದಂತಿರುವ ಪ್ರಭಾವಿಗಳು ಇವುಗಳ ಬೆಳಕಿಗೆ ಬಾರದಂತೆ ನಿಗಾ ವಹಿಸಿ, ಠಾಣೆಯಲ್ಲೇ ಪಂಚಾಯ್ತಿ ನಡೆಸಿ ಬಿಡುತ್ತಾರೆ ಎನ್ನುವ ಮಾತುಗಳಿವೆ.

ಇನ್ನು, ದಾಖಲಾದ ದೂರಿನ ಬಗ್ಗೆ ಹೇಳುವುದಾದರೆ, "ತನಿಖೆಯ ಹಂತದಲ್ಲಿದೆ" ಎಂಬ ಸಿದ್ಧ ಉತ್ತರ ಅಧಿಕಾರಿಗಳು ನೀಡಿ, ಕೈತೊಳೆದುಕೊಳ್ಳುತ್ತಾರೆ. ವರ್ಷಗಳಿಂದಲೂ ಅವು ತನಿಖೆಯ ಹಂತದಲ್ಲೇ ಇರುವುದು ವಿಶೇಷ. ಖಾಕಿಪಡೆಯ ಹಿರಿಯ ಅಧಿಕಾರಿಗಳೇ ಆರೋಪಿಗೆ ಸನ್ಮಾನ ಮಾಡುತ್ತಾರೆಂದ ಮೇಲೆ ಇಂತಹ ದೂರುಗಳ ಪ್ರಾಮಾಣಿಕ ತನಿಖೆ ಅದ್ಹೇಗೆ ನಡೆಯಲು ಸಾಧ್ಯ ಎಂದು ಪ್ರಶ್ನಿಸುವ ಪ್ರಾಂತ ರೈತ ಸಂಘದ ಚೆನ್ನಪ್ಪ ಆನೆಗುಂದಿ, ಅಕ್ರಮ ದಂಧೆಕೋರರ ಜೊತೆ ಅಧಿಕಾರಿಗಳು ಶಾಮೀಲಾಗಿರುವ ಇಂತಹ ದೂರುಗಳನ್ನು ಹೊಸಕಿ ಹಾಕಲಾಗುತ್ತದೆ ಎಂದು ಆರೋಪಿಸಿದರು.

ಯಾದಗಿರಿ: ಅಕ್ಕಿ ಅಕ್ರಮಕ್ಕೆ ಖಾಕಿ ಕಾವಲು?

ಇದೇ ಮೇ 29ರಂದು ಶಹಾಪುರದ ಸರ್ಕಾರಿ ಗೋದಾಮು ಮುಂದೆ ನಿಲ್ಲಿಸಿದ್ದ ಲಾರಿಯೊಂದರಲ್ಲಿದ್ದ, ಸುಮಾರು ₹7.59 ಲಕ್ಷ ಮೌಲ್ಯದ 50 ಕೆಜಿಯ 450 ಪ್ಯಾಕೆಟ್‌ಗಳ ಸಮೇತ ಕಳವು ಮಾಡಿದ್ದರು. ಮರುದಿನ ಹೊರವಲಯದಲ್ಲಿ ಲಾರಿ ಸಿಕ್ಕಿತೇ ಹೊರತು, ಅದರಲ್ಲಿನ ದಾಸ್ತಾನು ಇರಲಿಲ್ಲ. ಈ ಕುರಿತು ಠಾಣೆಯಲ್ಲಿ ದೂರು (0114/2023) ದಾಖಲಾಗಿದರೂ ಈವರೆಗೆ ಅದರ ಸುಳಿವಿಲ್ಲ. ತನಿಖೆ ಪ್ರಗತಿಯಲ್ಲಿದೆ ಅನ್ನೋದಷ್ಟೇ ಅಧಿಕಾರಿಗಳ ಉತ್ತರ.

ಅದೇ ರೀತಿ, ಮೇ 7ರಂದು ದೋರನಹಳ್ಳಿ ಸಮೀಪದ ಸೀಮಿ ಮರೆಮ್ಮ ದೇವಸ್ಥಾನಲ್ಲಿ ಅಕ್ಕಿ ತುಂಬಿದ್ದ ಲಾರಿಯೇನೋ ಪತ್ತೆಯಾಯ್ತು, ಆದರೆ, ಈವರೆಗೆ ಆರೋಪಿಗಳ ಪತ್ತೆಯಾಗಿಲ್ಲ. (0200/2023). ಕೆಂಭಾವಿ ಸಮೀಪ 2021 ಜುಲೈನಲ್ಲಿ ಪಡಿತರ ಅಕ್ಕಿ ತುಂಬಿದ್ದ ಲಾರಿ ಜಪ್ತಿಯಾಯಿತಾದರೂ, ನಂತರ ಏನಾಯಿತು ಎನ್ನುವುದು ಬಯಲಾಗಲೇ ಇಲ್ಲ. ಕಲಬುರಗಿ ಜಿಲ್ಲೆ ಜೇವರ್ಗಿ ಸಮೀಪ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಕ್ಕಿ ದಾಸ್ತಾನು ಹಿಡಿದಾಗ, ಅದು ಯಾದಗಿರಿ ಜಿಲ್ಲೆ ಶಹಾಪುರದ್ದು ಎಂಬುದಾಗಿ, ಇಲ್ಲಿ ದೂರು ದಾಖಲಾದ ದೂರಿನ ಬಗ್ಗೆ ಪತ್ತೆಯೇ ಇಲ್ಲ!

ಲಾರಿ ಚಾಲಕ ಹಾಗೂ ಕ್ಲೀನರ್‌ಗಳ ಮೇಲೆ ದೂರು ದಾಖಲಿಸಿಕೊಳ್ಳುವ ಅಧಿಕಾರಿಗಳು, ಮೂಲ ಆರೋಪಿಗಳ ಪತ್ತೆ ಮಾಡುವುದೇ ಇಲ್ಲ ಎನ್ನುವುದು ಸಾರ್ವಜನಿಕರ ಆರೋಪ. ಪಡಿತರ ದಾಸ್ತಾನು ಅಕ್ರಮವಾಗಿ ಜಿಲ್ಲೆಯಿಂದ ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ರೇಶನ್‌ ಅಕ್ಕಿ ಪಾಲಿಶ್‌ ಮಾಡಿ ಹೊಸ ರೂಪು ಕೊಟ್ಟು ಸಾವಿರಾರು ರು.ಗೆ ಮಾರಾಟ ಮಾಡಲಾಗುತ್ತದೆ ಎಂಬುದು ಈ ಕಳ್ಳತನ ಜಾಲದ ಹಿಂದಿನ ಮರ್ಮ.

Follow Us:
Download App:
  • android
  • ios