Asianet Suvarna News Asianet Suvarna News

ವರ್ಷದ ಹಿನ್ನೋಟ: ನವೀನ್‌ ನೆನಪು, ನೆರೆ ತಂದ ನೋವು, ಸಮ್ಮೇಳನದ ಸಂಭ್ರಮ

  • ನವೀನ್‌ ನೆನಪು, ನೆರೆ ತಂದ ನೋವು, ಸಮ್ಮೇಳನದ ಸಂಭ್ರಮ (ವರ್ಷದ ಹಿನ್ನೋಟ)
  • -ಹಲವು ಸಿಹಿ- ಕಹಿ ಘಟನಾವಳಿಗಳಿಗೆ ಸಾಕ್ಷಿಯಾದ 2022ನೇ ಇಸ್ವಿ
  • ಉಕ್ರೇನ್‌ನಲ್ಲಿ ಚಳಗೇರಿ ವಿದ್ಯಾರ್ಥಿ ಸಾವು ತಂದ ಆಘಾತ
  • ತವರು ಜಿಲ್ಲೆಯಲ್ಲಿ ಸಿಎಂ ಅಭಿವೃದ್ಧಿ ಪರ್ವ
review in year naveen death floods kannadasahitya sammelana at haveri rav
Author
First Published Dec 31, 2022, 11:32 AM IST

ವರ್ಷದ ಹಿನ್ನೋಟ

ನಾರಾಯಣ ಹೆಗಡೆ

 ಹಾವೇರಿ (ಡಿ.31) : ರಷ್ಯಾ ನಡೆಸಿದ ದಾಳಿಗೆ ಉಕ್ರೇನ್‌ನಲ್ಲಿ ಬಲಿಯಾದ ಚಳಗೇರಿಯ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ ಸಾವು ಜಿಲ್ಲೆಯಷ್ಟೇ ಅಲ್ಲದೇ ದೇಶದ ಜನರನ್ನು ದುಃಖದಲ್ಲಿ ಮುಳುಗಿಸುವಂತೆ ಮಾಡಿದ್ದು, ನೆರೆ ಹಾಗೂ ಪ್ರವಾಹದಿಂದ ನಲುಗಿದ ಅನ್ನದಾತ, ಮನೆ ಕಳೆದುಕೊಂಡ ಸಾವಿರಾರು ಕುಟುಂಬಗಳ ನೋವು, ಇವೆಲ್ಲವುಗಳ ನಡುವೆ ತವರು ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳಿಂದ ಅಭಿವೃದ್ಧಿ ಪರ್ವ, ವರ್ಷಾಂತ್ಯದಲ್ಲಿ ಮತ್ತೆ ಕೊರೋನಾತಂಕ, ನುಡಿ ಜಾತ್ರೆಯ ಸಂಭ್ರಮ... ಹೀಗೆ ಸಿಹಿ ಕಹಿಗಳನ್ನು ಕಂಡ 2022ನೇ ಇಸ್ವಿಗೆ ವಿದಾಯ ಹೇಳಲು ಕ್ಷಣಗಣನೆ ಶುರುವಾಗಿದೆ.

2022ನೇ ವರ್ಷ ಹಾವೇರಿ ಜಿಲ್ಲೆಯ ಪಾಲಿಗೆ ಮಹತ್ವ ಎನಿಸಿದೆ. ಜಿಲ್ಲೆ ರಚನೆಯಾಗಿ ರಜತ ಸಂಭ್ರಮದಲ್ಲಿರುವ ಜಿಲ್ಲೆಯ ಪಾಲಿಗೆ ಈ ವರ್ಷ ಸಿಹಿ-ಕಹಿ, ಏಳು-ಬೀಳು ಎರಡನ್ನೂ ನೀಡಿದೆ. ವರ್ಷದ ಆರಂಭದಲ್ಲೇ ಹಾವಳಿ ಎಬ್ಬಿಸಿದ್ದ ಕೊರೋನಾ, ವರ್ಷಾಂತ್ಯದಲ್ಲಿ ಮತ್ತೆ ಆತಂಕ ಹುಟ್ಟಿಸಿದೆ. 2023ನೇ ವರ್ಷವನ್ನು ಸ್ವಾಗತಿಸಲು ಸಜ್ಜಾಗಿರುವ ಈ ಸಂದರ್ಭದಲ್ಲಿ ಜಿಲ್ಲೆಯ ಜನರಿಗೆ 2022ನೇ ವರ್ಷದಲ್ಲಿ ನಡೆದ ಘಟನಾವಳಿಗಳ ಇಣುಕು ನೋಟ ಇಲ್ಲಿದೆ.

 

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಮರನ್ನು ಕಡೆಗಣಿಸಿಲ್ಲ: ಮಹೇಶ ಜೋಶಿ

ಚಂಪಾಗೆ ವಿದಾಯ

ಜನವರಿಯಲ್ಲೇ ಕೊರೋನಾ ಕಾಟ ಮತ್ತೆ ಶುರುವಾಯಿತು. ವರ್ಷಾರಂಭದ ಮೊದಲ ವಾರವೇ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ವಾರಾಂತ್ಯದ ಕಫä್ರ್ಯ ಜಾರಿಗೊಳಿಸಿತ್ತು. ಅಗತ್ಯ ಸೇವೆ ಹೊರತುಪಡಿಸಿ ಇನ್ನುಳಿದ ಎಲ್ಲ ಅಂಗಡಿ ಮುಂಗಟ್ಟು ಬಂದ್‌ ಮಾಡಲಾಗಿತ್ತು. ಜನವರಿ ತಿಂಗಳಲ್ಲಿ ಹಿರಿಯ ಸಾಹಿತಿ, ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ಜನಿಸಿದ್ದ ಚಂದ್ರಶೇಖರ ಪಾಟೀಲ ನಿಧನರಾದರು. ಜಿಲ್ಲೆಯ ಜನಕ್ಕೆ ಸಿಡಿಲಾಘಾತ ತಂದಿತು. ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ ಚಂಪಾ ನಿಧನ ಜಿಲ್ಲೆಗಷ್ಟೇ ಅಲ್ಲದೇ ಸಾಹಿತ್ಯ ಲೋಕಕ್ಕೆ ಉಂಟಾದ ದೊಡ್ಡ ನಷ್ಟ.

ಉಕ್ರೇನ್‌ನಲ್ಲಿ ನವೀನ್‌ ಸಾವು

ಜಿಲ್ಲೆಯಷ್ಟೇ ಅಲ್ಲದೇ ಇಡೀ ದೇಶವೇ ಬೆಚ್ಚಿ ಬೀಳಿಸುವ ಘಟನೆ ಮಾಚ್‌ರ್‍ 1ರಂದು ನಡೆಯಿತು. ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧದ ವೇಳೆ ಉಕ್ರೇನ್‌ನ ಕಾರ್ಖೀವ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ರಾಣಿಬೆನ್ನೂರು ತಾಲೂಕಿನ ಚಳಗೇರಿಯ 21 ವರ್ಷದ ನವೀನ ಶೇಖಪ್ಪ ಗ್ಯಾನಗೌಡರ ಬಲಿಯಾಗಿದ್ದು ಇಡೀ ದೇಶಕ್ಕೇ ಬರಸಿಡಿಲು ಬಡಿದಂತಾಗಿತ್ತು.

ಪ್ರತಿಭಾವಂತ ಮಗನನ್ನು ವೈದ್ಯನನ್ನಾಗಿಸುವ ಹೆಬ್ಬಯಕೆ ಹೊಂದಿದ್ದ ಪಾಲಕರು ಅದಕ್ಕಾಗಿ ಸಾಲ ಸೂಲ ಮಾಡಿ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ಗೆ ಕಳುಹಿಸಿದ್ದರು. ಆದರೆ, ವೈದ್ಯನಾಗಿ ಹಿಂದಿರುಗದೇ ಇಹಲೋಕವನ್ನೇ ತ್ಯಜಿಸಿದ್ದು ಎಲ್ಲರ ನೋವಿಗೆ ಕಾರಣವಾಗಿತ್ತು. ಪ್ರಧಾನಿ ಮೋದಿ ಅವರೇ ನವೀನ್‌ ಪಾಲಕರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಅನೇಕ ಮಠಾಧೀಶರು ಗ್ಯಾನಗೌಡರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಇಡೀ ದೇಶವೇ ನವೀನ್‌ ಸಾವಿಗೆ ಕಂಬನಿ ಮಿಡಿಯಿತು. ನವೀನ್‌ ಮೃತಪಟ್ಟು 21 ದಿನಗಳ ಬಳಿಕ ಪಾರ್ಥಿವ ಶರೀರ ತಾಯ್ನಾಡಿಗೆ ಬಂದಿತ್ತು. ಚಳಗೇರಿ ಗ್ರಾಮದಲ್ಲಿ ಅಂತಿಮ ನಮನ ಸಲ್ಲಿಸಿ ಬಳಿಕ ದಾವಣಗೆರೆ ಎಸ್‌ಎಸ್‌ ಆಸ್ಪತ್ರೆಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.

ತವರು ಜಿಲ್ಲೆಗೆ ಸಿಎಂ ಕೊಡುಗೆ

ಮಾಚ್‌ರ್‍ನಲ್ಲಿ ರಾಜ್ಯ ಬಜೆಟ್‌ ಮಂಡಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಗೆ ಬಂಪರ್‌ ಕೊಡುಗೆಗಳ ಘೋಷಣೆ ಮಾಡಿದರು. ಜಿಲ್ಲೆಯ ಜನರ ಬೇಡಿಕೆಯಾಗಿದ್ದ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ, ಒಂದು ಲಕ್ಷ ಲೀಟರ್‌ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ, ಶಿಗ್ಗಾಂವಿಯಲ್ಲಿ ಬಸ್‌ ಘಟಕ ಮತ್ತು ಚಾಲನಾ ತರಬೇತಿ ಕೇಂದ್ರ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20ಕೋಟಿ ರು., ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದರು.

ವರ್ಷಾಂತ್ಯದೊಳಗಾಗಿ ಈ ಎಲ್ಲ ಘೋಷಣೆಗಳ ಅನುಷ್ಠಾನವೂ ಆಗುತ್ತಿರುವುದು ವಿಶೇಷವಾಗಿದೆ. ಅಲ್ಲದೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ವಕೇತ್ರ ಶಿಗ್ಗಾಂವಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೀಡಲು, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿಲು ಹಲವಾರು ಬಾರಿ ಭೇಟಿ ನೀಡಿದರು. ವರ್ಷದ ಆರಂಭದಲ್ಲೇ ಶಿಗ್ಗಾಂವಿ ಕ್ಷೇತ್ರದ ಪ್ರತಿ ಹಳ್ಳಿಗೆ ನಳದ ನೀರು ಕೊಡುವ ನಿಟ್ಟಿನಲ್ಲಿ 638 ಕೋಟಿ ರು. ವೆಚ್ಚದ, ಶಿಗ್ಗಾಂವಿ ಹಾಗೂ ಹಾನಗಲ್ಲ ಕ್ಷೇತ್ರದ 230ಕ್ಕೂ ಅಧಿಕ ಹಳ್ಳಿಗಳಿಗೆ ತುಂಗಭದ್ರಾ ನೀರು ಒದಗಿಸುವ ಬೃಹತ್‌ ಯೋಜನೆಗೆ ಸಿಎಂ ಬೊಮ್ಮಾಯಿ ಶಿಲಾನ್ಯಾಸ ನೆರವೇರಿಸಿದರು.

ನೆರೆ ತಂದ ಸಂಕಷ್ಟ

ಜುಲೈ ತಿಂಗಳಲ್ಲಿ 15 ದಿನಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಯಿತು. ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ಸುರಿದ ಮಳೆಗೆ 89,955 ಹೆಕ್ಟೇರ್‌ ಕೃಷಿ ಬೆಳೆ ಹಾಗೂ 1799 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಯಿತು. 4,663 ಮನೆಗಳಿಗೆ ಹಾನಿಯಾಗಿದೆ. ಒಟ್ಟಾರೆ . 600 ಕೋಟಿ ನಷ್ಟವಾಗಿದೆ.

481 ಸರ್ಕಾರಿ ಶಾಲೆಗಳ 1104 ಕೊಠಡಿಗಳಿಗೆ ಹಾನಿಯಾಗಿದೆ. ಮನೆ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ, ಬೆಳೆ ನಷ್ಟಪರಿಹಾರ ಸಿಕ್ಕರೂ ಇನ್ನೂ ಅನ್ನದಾತನ ಪರಿಸ್ಥಿತಿ ಸುಧಾರಿಸಿಲ್ಲ. ನಿರಂತರ ಮಳೆಯಿಂದ ಮುಂಗಾರು, ಹಿಂಗಾರು ಬೆಳೆಗಳೆರಡೂ ಹಾನಿಯಾಗಿದ್ದು, ಹಸಿ ಬರಗಾಲ ಘೋಷಿಸುವಂತೆ ರೈತರು ಪ್ರತಿಭಟನೆ ಮಾಡಿ ಒತ್ತಾಯಿಸಿದರು.

25ರ ಸಂಭ್ರಮ

ಹಾವೇರಿ ಜಿಲ್ಲೆಯಾಗಿ ಎರಡೂವರೆ ದಶಕ ಪೂರೈಸಿದ್ದು, ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಿಕೊಂಡಿತು. ಅಖಂಡ ಧಾರವಾಡ ಜಿಲ್ಲೆಯಲ್ಲಿದ್ದ ಹಾವೇರಿ ಜಿಲ್ಲೆಯನ್ನು ಪ್ರತ್ಯೇಕಗೊಳಿಸಬೇಕು ಎಂಬ ಎರಡೂವರೆ ದಶಕಗಳ ಹೋರಾಟದ ಫಲವಾಗಿ ನೂತನ ಜಿಲ್ಲೆಯಾಗಿ ರಚನೆಗೊಂಡಿತು. ಪ್ರತ್ಯೇಕ ಜಿಲ್ಲೆಗಾಗಿ 1973ರಿಂದ ಆರಂಭಗೊಂಡ ನಿರಂತರ ಹೋರಾಟ, ಪ್ರತಿಭಟನೆಗಳ ಫಲವಾಗಿ 1997 ಆಗಸ್ಟ್‌ 24ರಂದು ಹಾವೇರಿ ನೂತನ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು. ಈ ನಿಮಿತ್ತ ಕನ್ನಡಪ್ರಭದಿಂದ 25ರ ಸಂಭ್ರಮ ಸಮಾರಂಭ ಮಾಡಿರುವುದು ಉಲ್ಲೇಖನೀಯ.

ಲಂಪಿ ಸ್ಕಿನ್‌ ಹಾವಳಿ

ಜಿಲ್ಲಾದ್ಯಂತ ಹರಡಿದ ಚರ್ಮಗಂಟು ರೋಗದಿಂದ (ಲಂಪಿಸ್ಕಿನ್‌) ಒಟ್ಟು 13,266 ಜಾನುವಾರು ರೋಗಗ್ರಸ್ಥಗೊಂಡು, ಸುಮಾರು 2 ಸಾವಿರ ಜಾನುವಾರುಗಳು ಮೃತಪಟ್ಟಿವೆ. ಇದರಿಂದ ರೈತರು ನಷ್ಟಅನುಭವಿಸುವಂತಾಯಿತು. ಲಂಪಿಸ್ಕಿನ್‌ನಿಂದ ಮೃತಪಟ್ಟಜಾನುವಾರುಗಳಿಗೆ ಮುಖ್ಯಮಂತ್ರಿಗಳು ಪರಿಹಾರವನ್ನೂ ಘೋಷಿಸಿದರು.

ಕನ್ನಡ ರಥಕ್ಕೆ ಚಾಲನೆ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ಅಂಗವಾಗಿ ನಾಡಿನಾದ್ಯಂತ ಸಂಚರಿಸಲಿರುವ ’ಕನ್ನಡ ರಥ’ಕ್ಕೆ ಶಿಗ್ಗಾವಿ ತಾಲೂಕಿನ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿ ಚಾಲನೆ ನೀಡಲಾಯಿತು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುತ್ತಾಡಿ ಈಗ ಸವಣೂರು ತಾಲೂಕಿಗೆ ಆಗಮಿಸಿರುವ ರಥ ಜ. 6ರಂದು ಹಾವೇರಿಗೆ ಆಗಮಿಸಲಿದೆ.

ಜಿಲ್ಲೆಗೆ ನಾಲ್ಕು ರಾಜ್ಯೋತ್ಸವ ಪ್ರಶಸ್ತಿ

ಜಿಲ್ಲೆಗೆ ಈ ವರ್ಷ ನಾಲ್ಕು ರಾಜ್ಯೋತ್ಸವ ಪ್ರಶಸ್ತಿ ಸಂದಿವೆ. ಸಮಾಜ ಸೇವೆ ವಿಭಾಗದಲ್ಲಿ ಎಂ.ಎಸ್‌. ಕೋರಿಶೆಟ್ಟರ್‌, ರಂಗಭೂಮಿ ಕ್ಷೇತ್ರದಲ್ಲಿ ಶಿಗ್ಗಾಂವಿಯ ಶ್ರೀಶೈಲ ಹುದ್ದಾರ, ವೀರಗಾಸೆ ವಿಭಾಗದಲ್ಲಿ ರಟ್ಟೀಹಳ್ಳಿ ತಾಲ್ಲೂಕಿನ ಬತ್ತಿಕೊಪ್ಪ ಗ್ರಾಮದ ಮಹೇಶ್ವರಗೌಡ ಲಿಂಗದಹಳ್ಳಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಸಂಘ-ಸಂಸ್ಥೆ ವಿಭಾಗದಲ್ಲಿ ಶಿಗ್ಗಾಂವಿ ತಾಲೂಕಿನ ಅಗಡಿ ತೋಟಕ್ಕೆ ಪ್ರಶಸ್ತಿ ದೊರೆತಿದೆ.

Haveri: ಹಾವೇರಿಯಲ್ಲಿ ಅಕ್ಷರ ಜಾತ್ರೆ: 'ಏಲಕ್ಕಿ ಮಾಲೆ' ಖರೀದಿಗೆ ಮನಸ್ಸು ಮಾಡದ ಜಿಲ್ಲಾಡಳಿತ

ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ

ಏಲಕ್ಕಿ ಕಂಪಿನ ನಾಡಿನಲ್ಲಿ ಜ. 6ರಿಂದ 8ರ ವರೆಗೆ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು. ಬಹುತೇಕ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ಅದ್ಧೂರಿ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಶುರುವಾಗಿದೆ. 32 ಗೋಷ್ಠಿಗಳು, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜಿಲ್ಲೆಯ ಜನರು ಸಾಕ್ಷಿಯಾಗಲಿದ್ದಾರೆ. ಹಾವೇರಿ ನಗರದಲ್ಲಿ ಸಮ್ಮೇಳನ ಸಿದ್ಧತೆ ಭರದಿಂದ ಸಾಗಿದೆ. ಹಬ್ಬದ ಸಂಭ್ರಮ ಮನೆಮಾಡಿದೆ.

Follow Us:
Download App:
  • android
  • ios