ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಮರನ್ನು ಕಡೆಗಣಿಸಿಲ್ಲ: ಮಹೇಶ ಜೋಶಿ
ಸಾಹಿತ್ಯ ಜಾತ್ರೆಯಲ್ಲಿ ಮುಸ್ಲಿಮರ ಕಡೆಗಣನೆ ಆರೋಪ ಸುಳ್ಳು, ಪರ್ಯಾಯ ಸಮ್ಮೇಳನದ ಬಗ್ಗೆ ಮಾತನಾಡುತ್ತಿರುವ ಕೆಲವರಿಂದ ಕನ್ನಡ ಒಡೆಯುವ ಕೆಲಸ: ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ
ಹಾವೇರಿ(ಡಿ.30): 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು, ಪರ್ಯಾಯ ಸಮ್ಮೇಳನದ ಬಗ್ಗೆ ಮಾತನಾಡುತ್ತಿರುವ ಕೆಲವರು ಸ್ವಹಿತಾಸಕ್ತಿಗಾಗಿ ಕನ್ನಡದ ಹಬ್ಬದಲ್ಲಿ ಧರ್ಮಗಳ ನಡುವೆ ಕಿಚ್ಚು ಹಚ್ಚುವ ಕಾರ್ಯ ಮಾಡುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ ಜೋಶಿ ಕಿಡಿಕಾರಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಳಿಮಲೆ ಪುರುಷೋತ್ತಮ, ಬಿ.ಎಂ. ಹನೀಫ್ ಹಾಗೂ ಆರ್‌ಜಿ ಹಳ್ಳಿ ನಾಗರಾಜ ಈ ಮೂವರು ನನ್ನ ಮೇಲೆ ಕಪೋಲಕಲ್ಪಿತ ಸಂಗತಿಗಳನ್ನು ವೈರಲ್ ಮಾಡಿ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಂ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಪುಕಾರು ಆರಂಭಿಸಿದ್ದಾರೆ. ವಾಸ್ತವವಾಗಿ ಹಿಂದಿನ ಏಳು ಸಮ್ಮೇಳನಗಳಿಗಿಂತ ಹೆಚ್ಚು ಅಂದರೆ 13 ಜನ ಮುಸ್ಲಿಂ ಸಮುದಾಯದವರಿಗೆ ಅವಕಾಶ ಸಿಕ್ಕಿದೆ ಎಂದು ದಾಖಲೆ ನೀಡಿದರು.
HAVERI: ಹಾವೇರಿಯಲ್ಲಿ ಅಕ್ಷರ ಜಾತ್ರೆ: 'ಏಲಕ್ಕಿ ಮಾಲೆ' ಖರೀದಿಗೆ ಮನಸ್ಸು ಮಾಡದ ಜಿಲ್ಲಾಡಳಿತ
ಆಮಂತ್ರಣ ಪತ್ರಿಕೆಯ ಮುಖಪುಟದಲ್ಲೇ ಮಿರ್ಜಾ ಇಸ್ಲಾಯಿಲ್ ಅವರ ಭಾವಚಿತ್ರ ಹಾಕಲಾಗಿದೆ. ಸಮ್ಮೇಳನದ ಪ್ರಧಾನ ವೇದಿಕೆಗೆ ಕನಕ, ಶರೀಫ, ಸರ್ವಜ್ಞ ಹೆಸರಿಡಲಾಗಿದ್ದು, ಇದರಲ್ಲಿ ಶರೀಫರು ಭಾವೈಕ್ಯತೆ ಪ್ರತಿಪಾದಕರಾದ ಮುಸ್ಲಿಂ ಸಂತರು. ಇದಲ್ಲದೇ ಗೋಷ್ಠಿಗಳಲ್ಲಿ, ಸನ್ಮಾನದಲ್ಲಿ ಮುಸ್ಲಿಂರಿದ್ದಾರೆ. ಕನ್ನಡ ರಥ ವಿನ್ಯಾಸ ಮಾಡಿದವರು ಮುಸ್ಲಿಂ ಸಮುದಾಯದ ಶಹಜಹಾನ್ ಮುದಕವಿ. ಇವರೆಲ್ಲರನ್ನು ಅವರವರ ಸಾಧನೆಯ ಮೇಲೆ ಗುರುತಿಸಿ ಆಯ್ಕೆ ಮಾಡಲಾಗಿದೆಯೇ ಹೊರತು ಜಾತಿ ನೋಡಿ ಅಲ್ಲ. ಇದು ಜಾತಿ, ಧರ್ಮಗಳನ್ನು ಮೀರಿದ ಸಮ್ಮೇಳನವಾಗಿದ್ದು, ಕನ್ನಡ ಎನ್ನುವುದೇ ಇಲ್ಲಿನ ಮಾನದಂಡವಾಗಿದೆ. ಜಾತಿಯ ಹೆಸರನ್ನು ಹೇಳಿ ಸಾಹಿತಿಗಳನ್ನು ಗುರುತಿಸುವುದು ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿದ ಪರಿಷತ್ತಿನ ಆಶಯಗಳಿಗೆ ವಿರುದ್ಧವಾಗಿದೆ. ಆಪಾದನೆ ಮಾಡುತ್ತಿರುವವರು ಮುಸ್ಲಿಂ ಸಮುದಾಯದ ಕುರಿತ ಕಾಳಜಿಗಿಂತಲೂ ತಮ್ಮ ಹೆಸರು ಬಂದಿಲ್ಲವೆಂದೇ ಚಿಂತಿಸಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ವ್ಯಂಗ್ಯವಾಡಿದರು.
ಪೆಂಡಾಲ್ ಗುತ್ತಿಗೆ:
ವಿಪರ್ಯಾಸವೆಂದರೆ ಪರ್ಯಾಯ ಸಮ್ಮೇಳನದ ಬಗ್ಗೆ ಮಾತನಾಡುತ್ತ ಇದರ ನೇತೃತ್ವ ವಹಿಸಿರುವ ಪುರುಷ್ತೋತಮ ಬಿಳಿಮಲೆ ಅವರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿ ಕೊನೆ ಗಳಿಗೆಯಲ್ಲಿ ಆರೋಗ್ಯದ ಕಾರಣ ಹೇಳಿ ಭಾಗವಹಿಸಲು ಸಾಧ್ಯವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಪುರುಷೋತ್ತಮ ಬಿಳಿಮಲೆ ಅವರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮವರೊಬ್ಬರಿಗೆ ಪೆಂಡಾಲ್ ಒದಗಿಸಲು ಕೋರಿದ್ದರು. ಆದರೆ, ಇದು ಜಿಲ್ಲಾಡಳಿತಕ್ಕೆ ಬಿಟ್ಟವಿಷಯವಾದ್ದರಿಂದ ಸಾಧ್ಯವಿಲ್ಲ ಎಂದು ಹೇಳಿದ್ದೆ. ಹೀಗೆ ಹೇಳಿದ ನಂತರ ಅವರು ವರಸೆ ಬದಲಾಯಿಸಿದರು. ಬಿ.ಎಂ. ಹನೀಫ್ ಅವರು ಮುಸ್ಲಿಂ ಸಮುದಾಯ ಕಡೆಗಣಿಸಲಾಗಿದೆ ಎಂದು ಟೀಕಿಸುತ್ತಿದ್ದಾರೆ. ಮುಸ್ಲಿಂರಿಗೆ ಸಹಾಯ ಮಾಡಬೇಕಿದ್ದರೆ ಅವರು ಸಲಹೆ ನೀಡಬಹುದಿತ್ತು. ಅದನ್ನು ಬಿಟ್ಟು ಸ್ವಹಿತಾಸಕ್ತಿಗಾಗಿ ಜಾತಿ, ಧರ್ಮದ ವಿಷಯ ತಂದಿರುವುದು ಖಂಡನೀಯ. ನಮ್ಮದೇನಿದ್ದರೂ ಕನ್ನಡಿಗರನ್ನು ಕೂಡಿಸುವ ಕೆಲಸ. ಇದೇ ಕೊನೆಯ ಸಮ್ಮೇಳನವಲ್ಲ, ಮುಂದಿನ ದಿನಗಳಲ್ಲಿ ಸರಿಪಡಿಸಲು ಅವಕಾಶವಿತ್ತು. ಆದರೆ, ಅವರ ಉದ್ದೇಶವೇನು ಎಂಬುದು ಸ್ಪಷ್ಟವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನವು ಜಾತಿ, ಧರ್ಮ, ಸಿದ್ಧಾಂತಕ್ಕೆ ಸೀಮಿತವಾದದ್ದಲ್ಲ. ಇಲ್ಲಿರುವುದು ಕನ್ನಡ ಜಾತಿ, ಕನ್ನಡ ಧರ್ಮ ಮಾತ್ರ. ಕನ್ನಡ ನಾಡು, ನುಡಿ ಮತ್ತು ಕನ್ನಡಿಗರಿಗೆ ಹೆಚ್ಚಿನ ಮಹತ್ವವಿದೆ. ಕನ್ನಡಿಗ ಎನ್ನುವುದೊಂದೇ ಆಯ್ಕೆಯಲ್ಲಿ ಬಳಸಿದ ಮಾನದಂಡ ಎಂದು ಸ್ಪಷ್ಟಪಡಿಸಿದರು.
ಹಾವೇರಿ ಅಕ್ಷರ ಜಾತ್ರೆ: ಐತಿಹಾಸಿಕ ಏಲಕ್ಕಿ ಮಾಲೆ ಖರೀದಿಗೆ ಮನಸು ಮಾಡದ ಜಿಲ್ಲಾಡಳಿತ!
ಕೋವಿಡ್ ಹೆಚ್ಚುತ್ತಿರುವುದರಿಂದ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಅದರಂತೆ ಸಮ್ಮೇಳನದಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸಲಾಗುವುದು. ಮಾಸ್‌್ಕ ಧರಿಸುವುದು, ಸ್ಯಾನಿಟೈಸರ್ ಬಳಕೆಗೆ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಸಿದ್ಧವಾಗುತ್ತಿದೆ. ಅದನ್ನು ಜಿಲ್ಲಾ ಮಟ್ಟದಲ್ಲೇ ಮಾಡಲಾಗುತ್ತದೆ. ಸಮ್ಮೇಳನಕ್ಕಿಂತ ನಾಲ್ಕೈದು ದಿನಗಳ ಮೊದಲು ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಅಂತಿಮವಾಗಲಿದೆ. ಸಮ್ಮೇಳನದ ವೇದಿಕೆ, ಮಳಿಗೆ ಸೇರಿದಂತೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಪ್ರತಿನಿಧಿಗಳ ನೋಂದಣಿಗೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸುತ್ತಮುತ್ತಲಿನ ಜಿಲ್ಲೆಗಳ ಸಾಹಿತ್ಯಾಸಕ್ತರು ನೋಂದಣಿ ಮಾಡಿಕೊಳ್ಳದೇ ನೇರವಾಗಿ ಬರುತ್ತಿದ್ದಾರೆ ಎಂದು ಮಹೇಶ ಜೋಶಿ ಹೇಳಿದರು. ಕಸಾಪ ಗೌರವ ಕೋಶಾಧ್ಯಕ್ಷ ಪಟೇಲ ಪಾಂಡು, ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಪವನ ದೇಸಾಯಿ, ಶ್ರೀನಾಥ ಜೋಶಿ, ಪ್ರಭು ಹಿಟ್ನಳ್ಳಿ, ವೈ.ಬಿ.ಆಲದಕಟ್ಟಿ, ಶಂಕರ ಸುತಾರ ಇತರರು ಇದ್ದರು.